ಮಾರ್ಕಂಡೇಶ್ವರಸ್ವಾಮಿ ಎಂದರೆ ಮೃತ್ಯುವನ್ನೇ ಗೆದ್ದ ಶಿವಶರಣರು: ಅನಿಲ್ ಕುಮಾರ್ ಜಾಣಾ
ಹಗರಿಬೊಮ್ಮನಹಳ್ಳಿ 05: ಶ್ರೀ ಮಾರ್ಕಂಡೇಶ್ವರಸ್ವಾಮಿ ಎಂದರೆ ಮೃತ್ಯುವನ್ನೇ ಗೆದ್ದ ಶಿವಶರಣರಾಗಿದ್ದಾರೆ ಎಂದು ತಾಲೂಕು ಪದ್ಮಶಾಲಿ ಬಹುತ್ತಮ ಸಮಾಜದ ಅಧ್ಯಕ್ಷ ಅನಿಲ್ ಕುಮಾರ್ ಜಾಣಾ ಹೇಳಿದರು.
ಪಟ್ಟಣದ ಹಾಲಶಂಕರಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಮಾರ್ಕಂಡೇಶ್ವರ ಜಯಂತೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿ ಸಾವನ್ನೇ ಗೆದ್ದ ಇಂತಹ ಮಹನೀಯರ ಕುಲದಲ್ಲಿ ಹುಟ್ಟಿ ಬಂದಿರುವ ನಾವು ಸನ್ಮಾರ್ಗಿಗಳಾಗಿ ನಡೆಯಬೇಕು. ತನ್ನ ಭಕ್ತಿ ಪರಾಕಾಷ್ಟೆಯಿಂದಾಗಿ ಯಮನನ್ನೇ ದಿಕ್ಕರಿಸಿ ಪರಶಿವನ ಅಪ್ಪುಗೆಗೆ ಪಾತ್ರರಾಗಿ ಇಂದಿಗೂ ಚಿರಂಜೀವಿಯಾಗಿರುವ ಮಾರ್ಕಂಡೇಶ್ವರ ಸ್ವಾಮಿಗಳು ಹಾಕಿಕೊಟ್ಟ ಭಕ್ತಿ ಮಾರ್ಗವನ್ನು ಎಲ್ಲರೂ ಅನುಸರಿಸಬೇಕಿದೆ. ನಮ್ಮದು ಸಣ್ಣ ಸಮುದಾಯವಾಗಿದ್ದು ಸಂಘಟಿತರಾಗುವ ಮೂಲಕ ಮುಖ್ಯವಾಹಿನಿಗೆ ಬರಬೇಕು. ಆ ನಿಟ್ಟಿನಿಲ್ಲಿ ತಾಲೂಕಿನಾದ್ಯಂತ ಸಮುದಾಯದ ಸಂಘಟನೆಯನ್ನು ಇನ್ನಷ್ಟು ಚುರುಕುಗೊಳಿಸಿ ಮುಂದಿನ ದಿನಗಳಲ್ಲಿ ನಮ್ಮ ಸಮಾಜದ ಬಲವನ್ನು ತೋರಿಸುವ ಮೂಲಕ ಸಮುದಾಯದ ಏಳ್ಗೆಗೆ ಶ್ರಮಿಸೋಣ ಎಂದರು.
ಪದ್ಮಶಾಲಿ ಸಮಾಜದ ಉಪಾಧ್ಯಕ್ಷ ಜೆ.ನಾಗರಾಜ ಮಾತನಾಡಿ ಎಲ್ಲಿಯವರೆಗೂ ನಾವು ಸಂಘಟಿತರಾಗುವುದಿಲ್ಲವೋ ಅಲ್ಲಿಯವರೆಗೂ ನಾವು ಹಿಂದುಳಿದವರಾಗಿಯೇ ಇರುತ್ತೇವೆ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಸಮಯದಲ್ಲಿ ಮಾತ್ರ ನಮ್ಮನ್ನು ಕರಿಬೇವಿನ ಎಲೆಯಂತೆ ಉಪಯೋಗಿಸುವ ಚಾಳಿಯನ್ನು ಮೈಗೂಡಿಸಿಕೊಂಡಿವೆ. ಸಮುದಾಯದ ಯುವಕರೆಲ್ಲಾ ಸಂಘಟಿತರಾಗಿ ಸಮಾಜವನ್ನು ಇನ್ನಷ್ಟು ಉನ್ನತಿಯಡೆಗೆ ಕರೆದೊಯ್ಯಬೇಕಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕಾಗಿದೆ ಎಂದರು.
ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಶ್ರೀ ಹಾಲಸಿದ್ದೇಶ್ವರಸ್ವಾಮೀಜಿ ಮಾತನಾಡಿ ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾಗಿ ನಿಂತಾಗ ಮಾತ್ರ ಇಡೀ ರಾಜಕೀಯ ವ್ಯವಸ್ಥೆ ನಿಮ್ಮನ್ನು ಗುರುತಿಸುತ್ತದೆ. ಆ ನಿಟ್ಟಿನಲ್ಲಿ ಪದ್ಮಶಾಲಿ ಸಮಾಜದವರು ಸಂಘಟಿತರಾಗಿ ತಮ್ಮ ಹಕ್ಕುಗಳಿಗೆ ಮತ್ತು ಮಕ್ಕಳ ಶಿಕ್ಷಣಾಭಿವೃದ್ಧಿಗಾಗಿ ಹೋರಾಡಬೇಕು. ಹಾಗಾದಾಗ ಸರ್ಕಾರದಿಂದ ಅನುದಾನಗಳು ತಾವಾಗಿಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಪದ್ಮಶಾಲಿ ಸಮಾಜದ ಸಂಘಟನೆಗೆ ನಮ್ಮ ಹಾಲಸ್ವಾಮಿ ಮಠ ಸದಾ ಬಾಗಿಲು ತೆರೆದಿರುತ್ತದೆ. ತಾವು ಯಾವಾಗ ಬೇಕಾದರು ನಮ್ಮ ಮಠವನ್ನು ಉಪಯೋಗಿಸಿಕೊಂಡು ಸಭೆ ಸಮಾರಂಭಗಳನ್ನು ಮಾಡಬಹುದು ಸದಾ ನಾವು ನಿಮ್ಮ ಬೆಂಬಲಕ್ಕೆ ನಿಂತಿರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪದ್ಮಶಾಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜಾಣಾ, ಖಜಾಂಚಿ ವಿರುಪಾಕ್ಷಿ ಗೊರಂಟ್ಲಿ, ಮುಖಂಡರಾದ ಪುರುಷೋತ್ಥಮ, ಪೂಜಾರ್ ಸುರೇಶ್, ಕೆಂಚಟನಹಳ್ಳಿ ಹರೀಶ್, ಹನುಮೇಶ್, ವೆಂಕಟೇಶ್.ಪಿ, ಶಿವಾನಂದ, ಗೋವಿಂದ ಲೈನ್‌ಮನ್, ವೀರೇಶ್, ಪೆನಗೊಂಡ್ಲ ಕೃಷ್ಣಪ್ಪ, ಸುರೇಶ್, ಪಿ.ಅನಂತ, ಕಾರ್ತಿಕ್, ಚಿದಾನಂದಪ್ಪ, ಬಂಡಿಹಳ್ಳಿ ದೊಡ್ಡ ಬಸಪ್ಪ, ಪುಂಡಲೀಕ, ಪದ್ಮಶಾಲಿ ಮಹಿಳಾ ಮಂಡಳಿಯ ಅಂಜಿನಮ್ಮ, ಕಲ್ಯಾಣಿ, ಮಂಜಮ್ಮ, ಬಂಡಾರ ಲಕ್ಷ್ಮಮ್ಮ, ಪ್ರಿಯಾಂಕ, ಕೊಟ್ರಮ್ಮ, ಶಾಂತಮ್ಮ, ಕವಿತಾ, ಶಿಲ್ಪಾ, ಕಲಾವತಿ, ಪೂರ್ಣಿಮ, ಹನುಮಕ್ಕ, ನಿಂಗವ್ವ, ಸುಧಾ ಸೇರಿದಂತೆ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು.