ಬಳ್ಳಾರಿ

ಮನೆ ಬಾಗಿಲಲ್ಲೇ ಸಮಸ್ಯೆ ಪರಿಹಾರ: ಶಾಸಕ ನಾಗೇಂದ್ರ

ಮನೆ ಬಾಗಿಲಲ್ಲೇ ಸಮಸ್ಯೆ ಪರಿಹಾರ: ಶಾಸಕ ನಾಗೇಂದ್ರ
Mane bāgilallē samasye parihāra: Śāsaka nāgēndra

ಲೋಕದರ್ಶನ ವರದಿ 

  ಮನೆ ಬಾಗಿಲಲ್ಲೇ ಸಮಸ್ಯೆ ಪರಿಹಾರ: ಶಾಸಕ ನಾಗೇಂದ್ರ  

  ಬಳ್ಳಾರಿ, 12:  ಗ್ರಾಮೀಣ ಹಾಗೂ ನಗರ ಪ್ರದೇಶದ ಜನರ ಸಮಸ್ಯೆಗಳಿಗೆ ಮನೆ ಬಾಗಿಲಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಆರಂಭಿಸಿರುವ ‘ಪ್ರಜಾಸೇವೆ’ ಆಂದೋಲನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಕರೆ ನೀಡಿದರು.  

ರೂಪನಗುಡಿಯ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ‘ಪ್ರಜಾಸೇವೆ’ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಕುಂದುಕೊರತೆಗಳನ್ನು ನೇರವಾಗಿ ಆಲಿಸಿ, ಸ್ಥಳದಲ್ಲೇ ಸಂಬಂಧಿಸಿದ ಅಧಿಕಾರಿಗಳ ಮೂಲಕ ಪರಿಹಾರ ಒದಗಿಸುವುದು ಆಂದೋಲನದ ಉದ್ದೇಶವಾಗಿದೆ ಎಂದರು.  

ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಪಿಂಚಣಿ, ವಸತಿ, ನಿವೇಶನ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಪ್ರಕ್ರಿಯೆ ಚುರುಕುಗೊಂಡಿದ್ದು, ಬಾಕಿ ಅರ್ಜಿಗಳ ಸ್ಥಿತಿಗತಿಯನ್ನು ಅರ್ಜಿದಾರರ ಮನೆ ವಿಳಾಸಕ್ಕೆ ಪತ್ರ ಅಥವಾ ದೂರವಾಣಿ ಮೂಲಕ ತಿಳಿಸಲಾಗುವುದು ಎಂದು ಹೇಳಿದರು.  

ಪ್ರತಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನಿಯಮಿತವಾಗಿ ‘ಪ್ರಜಾಸೇವೆ’ ಸಭೆಗಳನ್ನು ನಡೆಸಲಾಗುತ್ತಿದ್ದು, ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.  

ಸಭೆಯಲ್ಲಿ ನೂರಾರು ಸಾರ್ವಜನಿಕರು ತಮ್ಮ ಸಮಸ್ಯೆ ಹಾಗೂ ಅಹವಾಲುಗಳನ್ನು ಸಲ್ಲಿಸಿದರು. ಪಿಂಚಣಿ, ಗೃಹಲಕ್ಷ್ಮೀ, ವಸತಿ, ಕುಡಿಯುವ ನೀರು, ರಸ್ತೆ, ಶಾಲಾ ಕಟ್ಟಡ, ಬಸ್ ನಿಲ್ದಾಣ, ಕೃಷಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಅರ್ಜಿಗಳು ಸ್ವೀಕರಿಸಲಾಯಿತು.  

ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದ ಶಾಸಕ ನಾಗೇಂದ್ರ, ಅರ್ಜಿಗಳನ್ನು ಪರೀಶೀಲಿಸಿ ತ್ವರಿತವಾಗಿ ಕ್ರಮ ಕೈಗೊಂಡು ಅರ್ಜಿದಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ನಿರ್ದೇಶಿಸಿದರು.  

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಂದೇಶವನ್ನು ಶಾಸಕ ನಾಗೇಂದ್ರ ವಾಚಿಸಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ