ಜೋಳ ಖರೀದಿ ಹಣ ಬಿಡುಗಡೆಗೆ ರೈತ ಮುಖಂಡರ ಆಗ್ರಹ
ಬಳ್ಳಾರಿ, ಅ. 1: ಜಿಲ್ಲೆಯಲ್ಲಿ 2025-26ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮುಗಳಲ್ಲಿ ರೈತರಿಂದ ಒಟ್ಟು 14,849 ರೈತರಿಂದ 7,55,699 ಕ್ವಿಂಟಲ್ ಜೋಳ ಖರೀದಿಸಲಾಗಿದೆ. ಆದರೆ, ಹಿಂಗಾರು ಹಂಗಾಮಿನಲ್ಲಿ ಜೋಳ ಮಾರಾಟ ಮಾಡಿದ 1,864 ರೈತರಿಗೆ ಪಾವತಿಸಬೇಕಾದ ?36.52 ಕೋಟಿ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡದೆ.
ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ರೈತ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ತಾಳೂರು ಕೆ. ರಾಘವೇಂದ್ರ ರೆಡ್ಡಿ ಆರೋಪಿಸಿದ್ದಾರೆ.
ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಿ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಆಗ್ರಹಿಸಿ ಅವರು ಗುರುವಾರ ನಗರದ ಡಾ. ರಾಜ್ಕುಮಾರ್ ರಸ್ತೆಯ ಹೊಸ ಜಿಲ್ಲಾಡಳಿತ ಭವನದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.
2025-26ನೇ ಸಾಲಿನಲ್ಲಿ ರೈತರಿಂದ ಜೋಳ ಖರೀದಿಸುವಲ್ಲಿ ವಿಳಂಬವಾಗಿರುವುದರ ಜೊತೆಗೆ, ಖರೀದಿಸಿದ ಜೋಳದ ಹಣವನ್ನು ರೈತರ ಖಾತೆಗಳಿಗೆ ಜಮಾ ಮಾಡುವಲ್ಲಿಯೂ ವಿಳಂಬವಾಗಿದೆ ಎಂದು ರಾಘವೇಂದ್ರ ರೆಡ್ಡಿ ತಿಳಿಸಿದರು.
ಪ್ರಸ್ತುತ 2026-27ನೇ ಸಾಲಿನ ಹಿಂಗಾರು ಹಂಗಾಮಿನ ಬಿತ್ತನೆ ಕಾರ್ಯ ಆರಂಭವಾಗಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯವಿದೆ. ಹೀಗಾಗಿ ಜೋಳ ಖರೀದಿ ಬೆಂಬಲ ಬೆಲೆಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಿ ರೈತರ ಖಾತೆಗಳಿಗೆ ಜಮಾ ಮಾಡಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಹಾಗೂ ಲಿಂಗದೇವನಹಳ್ಳಿಯ ವೈ. ಗೋಪಾಲ ರೆಡ್ಡಿ ಉಪಸ್ಥಿತರಿದ್ದರು.