7,561 ಮತದಾರರ ಹೆಸರು ಮರುಪರೀಶೀಲನೆಗೆ ವಿರೋಧ
ಬಳ್ಳಾರಿ, ಅ.2: ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 7,561 ಮತದಾರರ ಹೆಸರುಗಳನ್ನು ವಿಶೇಷ ತೀವ್ರ ಪರಿಷ್ಕರಣೆ (ಖಋ) ಪ್ರಕ್ರಿಯೆಯಲ್ಲಿ ಮರುಪರೀಶೀಲನೆಗೆ ಒಳಪಡಿಸಿ ಅಳಿಸಲು ಪ್ರಯತ್ನ ನಡೆದಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಆರೋಪಿಸಿದರು.
ನಗರದ ರಾಘವೇಂದ್ರ ಚಿತ್ರಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಋ ಪ್ರಕ್ರಿಯೆ ಜೂನ್ 29, 2026ರಂದು ಆರಂಭಗೊಂಡಿದ್ದು, ಆ.24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದೆ. ಹೆಸರು ಸೇರೆ್ಡ, ಅಳಿಕೆ ಹಾಗೂ ಆಕ್ಷೇಪಣೆ ಸಲ್ಲಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಬಳ್ಳಾರಿ ನಗರ ಕ್ಷೇತ್ರದ 7,561 ಮತದಾರರ ಹೆಸರುಗಳ ಕುರಿತು ಮರುಪರೀಶೀಲನೆಗೆ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ದೂರಿದರು.
ನಿಗದಿತ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಫಾರಂ-7 ಸಲ್ಲಿಸಿರುವ ಬಗ್ಗೆ ಪ್ರಶ್ನಿಸಿದ ಅವರು, ಇಷ್ಟೊಂದು ಅರ್ಜಿಗಳನ್ನು ಯಾರು ಮುದ್ರಿಸಿ ಸಿದ್ಧಪಡಿಸಿದರು ಮತ್ತು ಅಧಿಕಾರಿಗಳು ಸ್ವೀಕರಿಸದ ಅರ್ಜಿಗಳನ್ನು ಸುಟ್ಟುಹಾಕಲಾಗಿದೆ ಎಂಬ ಆರೋಪದ ಹಿಂದೆ ಯಾರಿದ್ದಾರೆ ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು. ಈ ಕುರಿತು ಈಗಾಗಲೇ ದೂರು ಸಲ್ಲಿಕೆಯಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಮರುಪರೀಶೀಲನೆಗೆ ಒಳಪಡಿಸಲಾದ ಮತದಾರರಲ್ಲಿ ಬಹುಪಾಲು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬುದು ಗಮನಾರ್ಹವಾಗಿದೆ ಎಂದು ಹೇಳಿದ ಅವರು, ನಿರ್ದಿಷ್ಟ ಸಮುದಾಯಗಳ ಮತದಾರರನ್ನು ಗುರಿಯಾಗಿಸಿಕೊಂಡು ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿದರು. ಮತದಾರರ ಹಕ್ಕುಗಳನ್ನು ರಕ್ಷಿಸುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು.
ಮತದಾರರ ಹೆಸರು ಅಳಿಸುವ ಕ್ರಮವು ಅರ್ಜಿಗಳ ಪರೀಶೀಲನೆ, ಆಕ್ಷೇಪಣೆ ಹಾಗೂ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳ ಕಾನೂನುಬದ್ಧ ನಿರ್ಧಾರದ ನಂತರವೇ ನಡೆಯಬೇಕು. ಅಕ್ರಮವಾಗಿ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿದ್ದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.