ಪೌಷ್ಟಿಕ ಆಹಾರ ಸೇವನೆಯಿಂದ ತಾಯಿ-ಮಗುವಿನ ಆರೋಗ್ಯ ಸುಧಾರಣೆ
ಬಳ್ಳಾರಿ, ಅ.1: ಗರ್ಭಿಣಿಯರು ಹಾಗೂ ಬಾಣಂತಿಯರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ಪೌಷ್ಟಿಕ ಆಹಾರ ಸೇವಿಸುವುದರಿಂದ ರಕ್ತಹೀನತೆ ಕಡಿಮೆಯಾಗುವುದರ ಜೊತೆಗೆ ಶಿಶು ಹಾಗೂ ಬಾಣಂತಿಯರ ಮರಣ ಪ್ರಮಾಣವನ್ನು ತಗ್ಗಿಸಲು ಸಹಕಾರಿಯಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಾಧವ ನಂದ ತಿಳಿಸಿದರು.
ನಗರದ ದೇವಿನಗರ ವಲಯದ 36ನೇ ವಾರ್ಡ್ನ ಕುರುಹಟ್ಟಿ-1ನೇ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರಗಳ ಮೂಲಕ ನೀಡಲಾಗುವ ಪೌಷ್ಟಿಕ ಆಹಾರವನ್ನು ಗರ್ಭಿಣಿಯರು, ಬಾಣಂತಿಯರು ಹಾಗೂ ಅರ್ಹ ಫಲಾನುಭವಿಗಳು ನಿಯಮಿತವಾಗಿ ಸೇವಿಸಬೇಕು. ಈ ಆಹಾರದಲ್ಲಿ ಅಗತ್ಯವಿರುವ ಪ್ರೋಟೀನ್, ವಿಟಮಿನ್ ಹಾಗೂ ಖನಿಜಾಂಶಗಳು ಒಳಗೊಂಡಿದ್ದು, ಸಮತೋಲಿತ ಪೌಷ್ಟಿಕ ಆಹಾರವನ್ನು ಒದಗಿಸುತ್ತದೆ ಎಂದು ಹೇಳಿದರು.
ಪೌಷ್ಟಿಕ ಆಹಾರದ ಪ್ರಯೋಜನವನ್ನು ಎಲ್ಲ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. ತಮ್ಮ ಆರೋಗ್ಯದ ಜೊತೆಗೆ ಹುಟ್ಟಲಿರುವ ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಬಗ್ಗೆಯೂ ಜಾಗೃತಿ ವಹಿಸಬೇಕು ಎಂದು ಮಾಧವ ನಂದ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಇಲಾಖೆಯ ಸಂರಕ್ಷಣಾಧಿಕಾರಿ ಶ್ರೀದೇವಿ, ವಲಯ ಮೇಲ್ವಿಚಾರಕಿ ಜೆ. ಸುಶೀಲಮ್ಮ, ಶಿವಕುಮಾರ್, ಆರೋಗ್ಯ ಇಲಾಖೆಯ ಎಲ್‌ಎಚ್ವಿ ಜಲಜಾಕ್ಷಿ, ಜಿಲ್ಲಾ ಪೋಷಣ್ ಅಭಿಯಾನದ ಸಂಯೋಜಕ ಮುತ್ತುರಾಜ್, ತಾಲೂಕು ಸಂಯೋಜಕಿ ಸುಲೋಚನಾ, ಶಾಲಾಪೂರ್ವ ಶಿಕ್ಷಣ ಸಂಯೋಜಕ ಜಗನ್ನಾಥ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು.