ಮಕ್ಕಳ ಸುರಕ್ಷತೆಗೆ ಪೋಷಕರ ಜಾಗೃತಿ ಅಗತ್ಯ: ಸುರೇಖಾ ಪಾಟೀಲ
ಲೋಕದರ್ಶನ ವರದಿ
ಮಕ್ಕಳ ಸುರಕ್ಷತೆಗೆ ಪೋಷಕರ ಜಾಗೃತಿ ಅಗತ್ಯ: ಸುರೇಖಾ ಪಾಟೀಲ
ಯಮಕನಮರಡಿ, ಸೆ. 12: ಮಕ್ಕಳ ಸುರಕ್ಷತೆ, ಬಾಲ್ಯವಿವಾಹ ತಡೆ, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯದ ಕುರಿತು ತಾಯಂದಿರು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಮಹಿಳಾ ಕಲ್ಯಾಣ ಸಂಸ್ಥೆಯ ಯೋಜನಾ ನಿರ್ದೇಶಕಿ ಶ್ರೀಮತಿ ಸುರೇಖಾ ಪಾಟೀಲ ಹೇಳಿದರು.
ಹುಕ್ಕೇರಿ ತಾಲ್ಲೂಕಿನ ಮಾವನೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮೈ ಚಾಯ್ಸ್ ರೆಡ್ ಅಲರ್ಟ್ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸುರಕ್ಷಿತ ಗ್ರಾಮ’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಕಂಡುಬರುವ ಬದಲಾವಣೆಗಳನ್ನು ಪೋಷಕರು ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಸಮಸ್ಯೆ ಎದುರಾದ ಸಂದರ್ಭದಲ್ಲಿ ತಕ್ಷಣ ಸೂಕ್ತ ನೆರವು ಪಡೆಯುವಂತೆ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದರು.
ಮಕ್ಕಳನ್ನು ಸುರಕ್ಷಿತವಾಗಿಡುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮನೆಯಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಕುಟುಂಬದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಬಸವರಾಜ ಚಚಡಿ ಮಾತನಾಡಿ, ಮಕ್ಕಳ ಸುರಕ್ಷತೆಯಲ್ಲಿ ಶಾಲೆ, ಪೋಷಕರು ಹಾಗೂ ಸಮುದಾಯದ ಜವಾಬ್ದಾರಿ ಮಹತ್ವದ್ದಾಗಿದೆ. ಮಕ್ಕಳ ಸಮಸ್ಯೆಗಳನ್ನು ಅರಿತು ಅವರಿಗೆ ಅಗತ್ಯ ಮಾರ್ಗದರ್ಶನ ಹಾಗೂ ರಕ್ಷಣೆ ನೀಡಲು ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತೆ, ಬಾಲ್ಯವಿವಾಹ ತಡೆ ಹಾಗೂ ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ವಿಡಿಯೊಗಳನ್ನು ಪ್ರದರ್ಶಿಸಲಾಯಿತು. ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಯಾವುದೇ ರೀತಿಯ ಸಮಸ್ಯೆ ಎದುರಾದಾಗ ವಿಶ್ವಾಸಾರ್ಹ ಹಿರಿಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನೆರವು ಪಡೆಯುವಂತೆ ತಿಳಿಸಲಾಯಿತು.
ನಂತರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಾಯಂದಿರೊಂದಿಗೆ ಸಂವಾದ ನಡೆಸಿ, ಮಕ್ಕಳ ಬೆಳವಣಿಗೆ, ಸುರಕ್ಷತೆ ಹಾಗೂ ಕುಟುಂಬದ ಜವಾಬ್ದಾರಿಗಳ ಕುರಿತು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.