ಎಲ್ಲಾ ಮಕ್ಕಳು ಶಾಲೆಗೆ ತಪ್ಪದೇ ಹೋಗುವಂತೆ ಮಾಡಿರಿ: ಸತೀಶ್
ಬಳ್ಳಾರಿ 04: ಕಂಪ್ಲಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಎಂಎಲ್ಸಿ ವೈ.ಎಂ. ಸತೀಶ್ ಭೇಟಿ ಅವರು ಶನಿವಾರ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟವನ್ನು ಪರೀಶೀಲನೆ ಮಾಡಿ, ಸದಸ್ಯರೊಂದಿಗೆ ಸಮಾಲೋಚನೆ ಮಾಡಿದ್ದಾರೆ.
ಸಣಾಪುರ, ನಂ. 10 ಮುದ್ದಾಪುರ, ರಾಮಸಾಗರ, ದೇವಸಮುದ್ರ, ಹಂಪಾದೇವನಹಳ್ಳಿ, ಸುಗ್ಗೇನಹಳ್ಳಿ, ಮೆಟ್ರಿ ಮತ್ತು ದೇವಲಾಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿರುವ ವೈ.ಎಂ. ಸತೀಶ್, ಸರ್ಕಾರಿ ಶಾಲೆಗಳು, ನರೇಗಾ ಕಾಮಗಾರಿಗಳು ನಡೆಯುವ ಸ್ಥಳ ಸೇರಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.
ನರೇಗಾ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಸರ್ಕಾರ ಕಲ್ಪಿಸಬೇಕಾದ ಮೂಲಭೂತ ಸೌಲಭ್ಯಗಳನ್ನು ಪರೀಶೀಲಿಸಿ, ಕೂಲಿ ಕಾರ್ಮಿಕರೊಂದಿಗೆ ಕೆಲ ಹೊತ್ತು ಮಾತನಾಡಿದರು. ಆ ನಂತರ, ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಜೊತೆ ಸಭೆ ನಡೆಸಿ, ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ತಿಳಿಸಿದರು. ವೈ.ಎಂ. ಸತೀಶ್ ಅವರು, ‘ಗ್ರಾಮಗಳಲ್ಲಿ ಶುದ್ಧವಾದ ಕುಡಿಯುವ ನೀರು, ರೈತರಿಗೆ ಸಮರ್ಕವಾಗಿ ವಿದ್ಯುತ್ ಪೂರೈಕೆ ಮತ್ತು ಅಂಗನವಾಡಿ ಮಕ್ಕಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪೂರೈಕೆ ಆಗುವ ಬಿಸಿಊಟದಲ್ಲಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡಿ, ಎಲ್ಲಾ ಮಕ್ಕಳನ್ನು ಶಾಲೆಗಳಿಗೆ ಕಳುಹಿಸುವಂತೆ ಪೋಷಕರಿಗೆ ಪಂಚಾಯಿತಿ ಸದಸ್ಯರು ತಿಳಿಸಬೇಕು' ಎಂದರು.