ಮಹರ್ಷಿ ವಾಲ್ಮೀಕಿ ಜೀವನ ಸಂದೇಶ : ಕಡಕಬಾವಿ
ಮುದ್ದೇಬಿಹಾಳ 10: ಮಹರ್ಷಿ ವಾಲ್ಮೀಕಿ ಜೀವನ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುವ ಮೂಲಕ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಹೇಳಿದರು.
ಪಟ್ಟಣದ ವಾಲ್ಮೀಕಿ ಮಹರ್ಷಿಗಳ ವೃತ್ತದಲ್ಲಿ ಭಾನುವಾರ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಏಪಿಎಂಸಿ ಮಾಜಿ ಉಪಾಧ್ಯಕ್ಷ ವಾಯ್.ಎಚ್.ವಿಜಯಕರ್, ಮುಖಂಡ ಹರೀಶ ನಾಟೀಕಾರ ಮಾತನಾಡಿ, ರಾಜ್ಯ ಸರಕಾರ ಎಸ್ಸಿ,ಎಸ್ಟಿ ಸಮುದಾಯಗಳಿಗೆ ಮೀಸಲು ಹೆಚ್ಚಳ ಕುರಿತಂತೆ ತಾತ್ವಿಕ ಒಪ್ಪಿಗೆ ನೀಡಿರುವುದನ್ನು ಸ್ವಾಗತಿಸುತ್ತೇವೆ.ಆದರೆ ಅದು ಶೀಘ್ರ ಜಾರಿಯಾದಾಗ ಮಾತ್ರ ಈ ತಳ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಕಾರ್ಯಕ್ರಮ ಉದ್ಘಾಟಿಸಿದರು.ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ,ಪುರಸಭೆ ಸದಸ್ಯ ಸಹನಾ ಬಡಿಗೇರ,ಪ್ರೀತಿ ದೇಗಿನಾಳ,ಭಾರತಿ ಪಾಟೀಲ,ವಿರೇಶ ಹಡಲಗೇರಿ,ವಾಲ್ಮೀಕಿ ಸಮಾಜದ ಅಧ್ಯಕ್ಷ ಬಲಭೀಮ ನಾಯ್ಕಮಕ್ಕಳ,ತಾಪಂ ಇಓ ಎಸ್.ವಾಯ್.ಹೊಕ್ರಾಣಿ,ದಲಿತ ಮುಖಂಡರಾದ ಡಿ.ಬಿ.ಮುದೂರ,ಸಿ.ಜಿ.ವಿಜಯಕರ್,ಏಪಿಎಂಸಿ ಮಾಜಿ ಉಪಾಧ್ಯಕ್ಷ ಹಣಮಂತ ನಾಯ್ಕಮಕ್ಕಳ .ರಾಮಣ್ಣ ರಾಜನಾಳ,ಹುಲಗಪ್ಪ ನಾಯ್ಕಮಕ್ಕಳ,ಸಮಾಜ ಕಲ್ಯಾಣ ಇಲಾಖೆಯ ವಾರ್ಡನ್ ಎಸ್.ಎಚ್.ಜೈನಾಪೂರ,ಎಸ್.ಜಿ.ವಾಲೀಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ ಉಮೇಶ ಲಮಾಣಿ ಸ್ವಾಗತಿಸಿದರು.ಟಿ.ಡಿ.ಲಮಾಣಿ ನಿರೂಪಿಸಿದರು.
ವೇದಿಕೆಯಲ್ಲೇ ತಹಸೀಲ್ದಾರ್ ವಿರುದ್ಧ ಅಸಮಾಧಾನ : ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಭಾಷಣ ಆರಂಭಿಸುತ್ತಲೇ ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಸಿಗಬೇಕಾದರೆ ಎಷ್ಟು ಕಷ್ಟಗಳನ್ನು ಎದುರಿಸಿದ್ದಾರೆಯೋ ಅಷ್ಟೇ ತೊಂದರೆಯನ್ನು ನಮ್ಮ ಸಾರ್ವಜನಿಕರು ಅನುಭವಿಸುತ್ತಿದ್ದಾರೆ.ಪುರಸಭೆಯಲ್ಲಿ ಉತಾರ ಸಿಗುತ್ತಿಲ್ಲ.ಪ್ರಭಾರಿ ಅಧಿಕಾರ ಹೊಂದಿರುವ ತಹಸೀಲ್ದಾರರು ಪುರಸಭೆಗೆ ಬರುವುದಿಲ್ಲ.ಹೀಗಿರುವಾಗ ಜನರಿಗೆ ನಾವು ಏನೆಂದು ಉತ್ತರ ಕೊಡಬೇಕು.ಇಲ್ಲಿ ಪುರಸಭೆಯ ಆಡಳಿತದಲ್ಲೂ ಸರಕಾರ ಆಡಳಿತ ಮಾಡುತ್ತಿದೆ ಎನ್ನುತ್ತಿದ್ದಂತೆ ವೇದಿಕೆಯಲ್ಲಿಯೇ ಇದ್ದ ತಹಸೀಲ್ದಾರರು ಮೊದಲು ವಾಲ್ಮೀಕಿ ಜಯಂತಿ ಕುರಿತು ಮಾತನಾಡಿ.ಪುರಸಭೆ ಸಮಸ್ಯೆ ಬಗ್ಗೆ ಪ್ರತ್ಯೇಕ ಚರ್ಚೆ ಮಾಡೋಣ ಎಂದರು.ಇದಕ್ಕೆ ಗೊಣಗುತ್ತಲೇ ಮಾತು ಮುಗಿಸಿದ ಅಧ್ಯಕ್ಷೆ ಅಂಗಡಗೇರಿ ತಮ್ಮ ಆಸನದಲ್ಲಿ ಬಂದು ಕೂತರೂ ಅಧಿಕಾರಿಗಳ ವಿರುದ್ಧ ಅಸಮಾಧಾನವನ್ನು ಹೊರ ಹಾಕುತ್ತಲೇ ಇದ್ದರು.ತಹಸೀಲ್ದಾರ ಸಮಸ್ಯೆ ಕೇಳಿಯೂ ಕೇಳದಂತೆ ಕೂತಿದ್ದರೆ ತಾಪಂ ಇಓ ಹೊಕ್ರಾಣಿ ವಿಶೇಷ ಕಾಳಜಿ ವಹಿಸಿ ಪುರಸಭೆ ಅಧ್ಯಕ್ಷೆಯ ಸಮಸ್ಯೆಗಳಿಗೆ ಕಿವಿಗೊಟ್ಟರು.
ಸಮಾಜ ಸೇವಕ ಶಾಂತಗೌಡ ಪಾಟೀಲ್ ನಡಹಳ್ಳಿ ಮಾತನಾಡಿ, ರಾಜಕೀಯದಲ್ಲಿ ಹಿಂದುಳಿದ ವರ್ಗದ ಜನರು ಬೆಳೆಯಬಾರದು ಎಂದು ಸುಮ ಸುಮ್ನೆ ಪೊಲೀಸ್ರು ರೌಡಿ ಶೀಟರ್ ಕೇಸ್ ಹಾಕುತ್ತಿದ್ದಾರೆ.ಅನ್ಯಾಯದ ವಿರುದ್ಧ ಧ್ವನಿ ಎತ್ತುವವರ ಮೇಲೆಯೇ ದೌರ್ಜನ್ಯ ಮಾಡುವ ಪ್ರವೃತ್ತಿ ಕ್ಷೇತ್ರದಲ್ಲಿ ನಡೆದಿದೆ.ಇದೆಲ್ಲ ಕೊನೆಗಾಣಬೇಕು ಎಂದರೆ ಒಗ್ಗೂಡಿ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಕಾರ್ಯ ಮಾಡಬೇಕು ಎಂದರು.