ಮಹಾಲಿಂಗಪುರದಲ್ಲಿ ಅಯ್ಯಪ್ಪ ಭಕ್ತರ ಅದ್ದೂರಿ ಮಹಾಪೂಜೆ
ಕಲಿಯುಗದಲ್ಲಿ ಅಲ್ಪ ಭಕ್ತಿಗೆ ಅಪಾರ ದೈವ ಮನ್ನಣೆ: ಗುರುಸಿದ್ದೇಶ್ವರ ಶ್ರೀ
ಮಹಾಲಿಂಗಪುರ 29: ಭಾರತ ದೇಶದ ಪುರಾತನ ಕಾಲದಲ್ಲಿ ಸಾಧನೆ ಸಿದ್ಧಿಸಲು ವೃತಸಾಗರ ಕಠಿಣ ತಪಸ್ಸು ಕಡ್ಡಾಯವಾಗಿ ನಮ್ಮ ಋಷಿಮುನಿಗಳು ಆಚರಿಸಿ ಸಾಧಕರಾಗಿ ಈ ಭವ್ಯ ಪ್ರಧಾನ ಪರಂಪರೆ ಇಂದಿಗೂ ಮುಂದುವರೆಯುವಂತೆ ನಮ್ಮ ನಿಮ್ಮೆಲ್ಲರನ್ನು ಪ್ರೇರೆಪಿಸಿದ್ದಾರೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ನೀವು ನಾವೆಲ್ಲರೂ ಅಲ್ಪ ಸ್ವಲ್ಪ ಕಠಿಣವಾದ ವೃತ ಮತ್ತು ದೃಢ ಮನಸ್ಸು ಮಾಡಿ ಮನಸ್ಸು ನಿಗ್ರಹಿಸುವ ಕಾರ್ಯ ಮಾಡಿದರೆ ಖಂಡಿತವಾಗಿ ಅಯ್ಯಪ್ಪ ಸ್ವಾಮಿಯ ವೃತಾಚರಣೆಯಂತ ಕಠಿಣವಾದ ಪೂಜಾ ಕಾಯಕದಲ್ಲಿ ದೇವರನ್ನು ಕಾಣಲು ಸಾಧ್ಯ ಎಂದು ರಬಕವಿ-ಸಂಶಿಯ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀಗಳು ಅಭಿಪ್ರಾಯ ಸಂದೇಶ ನೀಡಿದರು.
ಸ್ಥಳೀಯ ಕೆಇಬಿ ಆವರಣದಲ್ಲಿ ಸುಮಾರು 150 ಅಯ್ಯಪ್ಪ ಭಕ್ತರು ಹಮ್ಮಿಕೊಂಡ ಸನ್ನಿದಾನದಲ್ಲಿ ನಡೆದ ಮಹಾಪೂಜಾ ಸಹಸ್ರ ದೀಪೋತ್ಸವ, ಮಹಾಲಿಂಗೇಶ್ವರ ಶ್ರೀಗಳಿಗೆ ತುಲಾಬಾರ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಗಣಿ ಸಿದ್ದಾರೂಢ ಮಠದ ಚಿನ್ಮಯಾನಂದ ಮಹಾಸ್ವಾಮಿಗಳು ಸ್ವತಃ ಶಬರಿಮಲೈ ಸನ್ನಿದಾನಕ್ಕೆ ತೆರಳಿ ಅಲ್ಲಿಯ ಅಯ್ಯಪ್ಪ ಸ್ವಾಮಿಯ ದರ್ಶನದ ಸನ್ನಿವೇಶ ಮತ್ತು ಅದರಿಂದ ಉಂಟಾಗುವ ಪುಣ್ಯ ಫಲಗಳ ಕುರಿತು ಮಾರ್ಮಿಕವಾಗಿ ಮಾತನಾಡಿದರು.
ರೂಗಿಯ ನಿತ್ಯಾನಂದ ಮಹಾರಾಜರು, ಹಂದಿಗುಂದದ ಶ್ರೀಮಂತ ಶಿವಯೋಗಿಗಳು, ಇಟ್ನಾಳದ ಸಿದ್ದೇಶ್ವರ ಮಹಾಸ್ವಾಮಿಗಳು, ಸುಣದೋಳಿಯ ಶಿವಾನಂದ ಮಹಾಸ್ವಾಮಿಗಳು, ಖಾನಟ್ಟಿಯ ಬಸವಾನಂದ ಮಹಾಸ್ವಾಮಿಗಳು ಜೊತೆಗೆ 10ಕ್ಕೂ ಹೆಚ್ಚು ಬಾರಿ ಶಬರಿ ಯಾತ್ರೆ ಕೈಗೊಂಡು 40ಕ್ಕೂ ಹೆಚ್ಚು ಅಯ್ಯಪ್ಪ ಗುರು ಸ್ವಾಮಿಗಳು ಕ್ರಮಬದ್ಧವಾಗಿ ಮೆಟ್ಟಿಲು ಪೂಜೆ, ಮಹಾಪೂಜೆ ಹಾಗೂ ಗಣಪತಿ, ಶಣ್ಮುಖ ಸನ್ನಿಧಿ ಪೂಜೆ, ಶ್ರದ್ಧಾ, ಭಕ್ತಿ ಭಜನೆ ಮೂಲಕ ನೆರವೇರಿಸಿದರು. ಅಯ್ಯಪ್ಪ ಸ್ವಾಮಿ ಆಭರಣ ಬರುವ ಸನ್ನಿವೇಶವನ್ನು ಬಹಳಷ್ಟು ಭಕ್ತರು ಕಣ್ತುಂಬಿಕೊಂಡರು.
ನಂತರ ಮಹಾಲಿಂಗೇಶ್ವರ ಸಂಸ್ಥಾನಮಠದ ಶ್ರೀಗುರು ನಿರಂಜನ ಮಹಾಲಿಂಗೇಶ್ವರ ಶಿವಯೋಗಿಗಳ ತುಲಾಬಾರ ಕಾರ್ಯಕ್ರಮವನ್ನು 18ನೇ ಭಾರಿ ಶಬರಿ ಯಾತ್ರೆ ಕೈಗೊಂಡಿರುವ ಕೆಇಬಿ ಮುತ್ತಪ್ಪ ಮಹಾಸ್ವಾಮಿಗಳು ಸಂಕಲ್ಪಿಸಿದ ಪ್ರಕಾರ ನಾಣ್ಯದಲ್ಲಿ ನೆರವೇರಿಸಲಾಯಿತು. ತುಲಾಬಾರ ಮತ್ತು ಅಯ್ಯಪ್ಪ ಭಕ್ತರ ಅನನ್ಯ ಭಕ್ತಿಗೆ ಮಹಾಲಿಂಗೇಶ್ವರ ಶ್ರೀಗಳು ಸಂತಸಪಟ್ಟು ಮಹಾಲಿಂಗಪುರದ ಅಯ್ಯಪ್ಪರ ಯಾತ್ರೆ ಸುಖಕರವಾಗಿರಲಿ ಎಂದು ಮನತುಂಬಿ ಹರಸಿ ಆಶೀರ್ವದಿಸಿದರು.
ಜಗ್ಗು ಗುರುಸ್ವಾಮಿಗಳು, ಪ್ರೇಮ ಗುರುಸ್ವಾಮಿಗಳು, ಶಂಕರ ಗುರುಸ್ವಾಮಿಗಳು, ಮಹಾಲಿಂಗ ಶಿವಣಗಿ ಗುರುಸ್ವಾಮಿಗಳು, ಚಿಕ್ಕಯ್ಯ ಗುರುಸ್ವಾಮಿಗಳು, ಲಿಲೇಶ ಪಟೇಲ, ಶೇಖರ ಗರುಸ್ವಾಮಿ, ಸಂಜು ಖೋತ, ಬಸು ಗೊಟ್ಯಾಳ, ಬ್ಹಾಟ ಗುರುಸ್ವಾಮಿಗಳು, ರಮೇಶ ಗುರುಸ್ವಾಮಿಗಳು, ಕೈಪಾಳಿ ಗುರುಸ್ವಾಮಿಗಳು, ಕೇದಾರಿ ಬಿಸನಾಳ, ಮಹಾಲಿಂಗ ಕಪ್ಪಲಗುದ್ದಿ ಗುರುಸ್ವಾಮಿಗಳು ಪಾಲ್ಗೊಂಡಿದ್ದರು. ಪತ್ರಕರ್ತ ಜಯರಾಮ ಶೆಟ್ಟಿ ಅಯ್ಯಪ್ಪ ಸ್ವಾಮಿ ವೃತದ ಕುರಿತು ಸವಿವರ ನೀಡಿ ಕನ್ಯಾಸ್ವಾಮಿಗಳು ವಹಿಸಬೇಕಾದ ವೃತ ಸಾರಾಂಶ ವಿವರಿಸಿ, ನಿರೂಪಿಸಿದರು. 18ನೇ ವರ್ಷದಲ್ಲಿ ಯಾತ್ರೆ ಕೈಗೊಂಡ ಮುತ್ತು ಗುರುಸ್ವಾಮಿಗಳನ್ನು ಸತ್ಕರಿಸಲಾಯಿತು.