ರೊಟ್ಟಿ ಬುತ್ತಿಯ ಭಕ್ತಿಯೊಂದಿಗೆ ಮಹಾಲಿಂಗೇಶ್ವರ ಜಾತ್ರೆಗೆ ಚಾಲನೆ
ಲೋಕದರ್ಶನ ವರದಿ
ಮಹಾಲಿಂಗಪುರ ಸೆ.25: ತಲೆಯ ಮೇಲೆ ರೊಟ್ಟಿ ಬುತ್ತಿ ಹೊತ್ತು ಶಿವನಾಮ ಸ್ಮರಿಸುತ್ತ ಸಾಗಿದ ಮಹಿಳೆಯರ ಸಾಲು, ಮಂಗಳವಾದ್ಯಗಳ ನಿನಾದ, ವಿದ್ಯುತ್ ದೀಪಗಳಿಂದ ಕಂಗೊಳಿಸಿದ ದೇವಸ್ಥಾನಗಳು ಹಾಗೂ ಬೀದಿ ಬೀದಿಗಳಲ್ಲಿ ಮೊಳಗಿದ ಜನಪದ ಕಲೆಯ ಭಕ್ತಿಯ ವಾತಾವರಣದ ನಡುವೆ ಮಹಾಲಿಂಗಪುರದ ಐತಿಹಾಸಿಕ ಮಹಾಲಿಂಗೇಶ್ವರ ಜಾತ್ರೆಗೆ ಶುಕ್ರವಾರ ರಥೋತ್ಸವದೊಂದಿಗೆ ಅಧಿಕೃತ ಚಾಲನೆ ದೊರೆಯಿತು.
ನಗರದ ಚೆನ್ನಗಿರೇಶ್ವರ ದೇವಸ್ಥಾನದಲ್ಲಿ ಬೃಹತ್ ರಥೋತ್ಸವ ನಡೆಯುತ್ತಿದ್ದು, ಮಹಾಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ರಥೋತ್ಸವದೊಂದಿಗೆ ಜಾತ್ರೆಯ ಧಾರ್ಮಿಕ ಸಂಭ್ರಮ ಮತ್ತಷ್ಟು ಕಳೆಗಟ್ಟಿದೆ.
ರೊಟ್ಟಿ ಬುತ್ತಿಯಲ್ಲಿ ಭಕ್ತಿಯ ಸೊಗಡು: ಸೆ.23 ಮತ್ತು 24ರಂದು ನಡೆದ ರೊಟ್ಟಿ ಬುತ್ತಿ ಕಾರ್ಯಕ್ರಮ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಮಹಾಲಿಂಗಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಹಿಳೆಯರು ಶ್ರದ್ಧಾಭಕ್ತಿಯಿಂದ ರೊಟ್ಟಿ ತಯಾರಿಸಿ, ತಲೆಯ ಮೇಲೆ ರೊಟ್ಟಿ ಬುತ್ತಿ ಹೊತ್ತು ಶಿವನಾಮ ಜಪಿಸುತ್ತ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ಸಾಗಿದರು.
ಅಹೋರಾತ್ರಿ ಮಹಾರಥೋತ್ಸವಕ್ಕೆ ಕ್ಷಣಗಣನೆ: ಸೆ.26ರಂದು ಸಂಜೆ ಮಹಾಮಂಗಳಾರತಿಯ ಬಳಿಕ ರಾತ್ರಿ 7 ಗಂಟೆಗೆ ಅಹೋರಾತ್ರಿ ಮಹಾರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಭಕ್ತರ ಜಯಘೋಷ ಹಾಗೂ ಮಂಗಳವಾದ್ಯಗಳ ನಿನಾದದ ನಡುವೆ ಸಾಗುವ ಭವ್ಯ ರಥವು ಸೆ.27ರ ಬೆಳಗಿನ ಜಾವ ಚೆನ್ನಗಿರೇಶ್ವರ ದೇವಸ್ಥಾನ ತಲುಪಲಿದೆ.
ಭಕ್ತಿ, ಪರಂಪರೆ, ಜನಪದ ಸಂಸ್ಕೃತಿಯ ಸಂಗಮ: ಜಾತ್ರೆಯ ಅಂಗವಾಗಿ ಹರಿವಾಣಕಟ್ಟೆ ಲೂಟಿ, ದೀಡ್ ನಮಸ್ಕಾರ, ಭಜನೆ, ಡೊಳ್ಳು ಕುಣಿತ, ಶ್ರೀಕೃಷ್ಣ ಪಾರಿಜಾತ, ಬಯಲಾಟ, ಚೌಡಕಿ ಹಾಗೂ ಗೀಗೀ ಪದಗಳಂತಹ ವಿವಿಧ ಜನಪದ ಕಾರ್ಯಕ್ರಮಗಳು ನಡೆಯಲಿವೆ.