ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ, ಪರೀಶೀಲನೆ !
ಸಮಯ ಮೀರಿ ಆಸ್ಪತ್ರೆಗೆ ಆಗಮಿಸಿದ ಅರವಳಿಕೆ ತಜ್ಞ ವೈದ್ಯಗೆ ತರಾಟೆ
* ಮೀರಾ ಎಲ್.ತಟಗಾರ
ಮಹಾಲಿಂಗಪುರ 04: ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಬಂದ ಅಹವಾಲುಗಳನ್ನಾಧರಿಸಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.
ಗುರುವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡುವ ಉದ್ದೇಶವನ್ನು ವಿವರಿಸಿ ಮಾತನಾಡಿದ ಅವರು, ಹಲವಾರು ತಿಂಗಳುಗಳಿಂದ ಈ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಸಮಸ್ಯೆಗಳನ್ನು ಅನೇಕ ಜನರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ಉಪಕರಣಗಳು ಇದ್ದೂ ಹೆರಿಗೆ ಹಾಗೂ ಇನ್ನಿತರ ರೋಗಿಗಳಿಗೆ ಇಲ್ಲಿ ಸರಿಯಾಗಿ ಚಿಕಿತ್ಸೆ ಲಭ್ಯ ಇಲ್ಲದೆ ಇರುವುದು ವಿಷಾದಕರ ಸಂಗತಿ.
ಏಕೆಂದರೆ ಬಡವರಿಗಾಗಿ ಮತ್ತು ಜನಸಾಮಾನ್ಯರಿಗಾಗಿ ಇರುವ ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೇವೆ ಲಭಿಸಿಲ್ಲ ಎಂದಾದರೆ ವೈದ್ಯರು, ಸಿಬ್ಬಂದಿಗಳು ಲಕ್ಷಗಲಕ್ಷಗಟ್ಟಲೆ ವೇತನ ಪಡೆಯುತ್ತಿರುವುದು ಸರಕಾರಕ್ಕೆ ಹೊರೆಯೇ ಸರಿ. ಇನ್ನು ನಿಮ್ಮ ಆಸ್ಪತ್ರೆಯಲ್ಲಿ ಏನಾದರೂ ಸಮಸ್ಯೆ ಇದ್ದರೆ ತಿಳಿಸಿ ಅದನ್ನು ನಾವು ಪರೀಶೀಲನೆ ನಡೆಸಿ ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಸಿ.ಎಂ ಮಠಪತಿ ಹಲವಾರು ಸಮಸ್ಯೆಗಳನ್ನು ಪುರಸಭೆ ಅಧ್ಯಕ್ಷರಿಗೆ ತಿಳಿಸಿ ಪರಿಹಾರಕ್ಕೆ ಕೋರಿದರು.
ಪುರಸಭಾ ಸದಸ್ಯ ಬಲವಂತಗೌಡ ಪಾಟೀಲ್ ಮತ್ತು ಮುಖಂಡ ಸುನೀಲಗೌಡ ಪಾಟೀಲ್ ಮಾತನಾಡಿ, ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ವೇಳೆ ಸರಿಯಾಗಿ ಇರುವುದಿಲ್ಲ ಮತ್ತು ಪೇಷಂಟ್ ಗಳಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಇಲ್ಲಿ ಹೆರಿಗೆಯೂ ಅಸಾಧ್ಯ, ಏಕೆಂದರೆ ಪ್ರತಿಯೊಬ್ಬರಿಗೂ ಮಗುವಿನ ಬೆಳವಣಿಗೆ ಸರಿಯಾಗಿಲ್ಲ, ಉದರದಲ್ಲಿ ನೀರಿಲ್ಲ ಮತ್ತು ಬಿಪಿ ಹೆಚ್ಚು ಕಡಿಮೆಯಾಗುತ್ತಿದೆ ನಮ್ಮಲ್ಲಿ ಹೆರಿಗೆ ಅಸಾಧ್ಯ ಎಂದು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡುತ್ತಾರೆ.
ನಿರ್ಗತಿಕರು ಮತ್ತು ಬಡ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ 50 ರಿಂದ 60 ಸಾವಿರ ಇನ್ನೂ ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಈ ವರ್ಗದವರು ಇಷ್ಟೊಂದು ಹಣ ಎಲ್ಲಿಂದ ತರಬೇಕು ಮತ್ತು ತಾಯಿ ಕಾರ್ಡ್ ವಿಳಂಬದ ಬಗ್ಗೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗಳನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.ಮುಂದೆ ಇದೆ ವರ್ತನೆ ಮುಂದುವರಿಸದೆ ಬಡ ಜನತೆಗೆ ನಿಷ್ಕಲ್ಮಶ ಸೇವೆ ನೀಡಿ ಎಂದು ತಾಕೀತು ಮಾಡಿದರು.
ಒಟ್ಟು ಸಿಬ್ಬಂದಿಗಳು: 19 ಜನ ಖಾಯಂ ಮತ್ತು 22 ಜನ ಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಯಲ್ಲಿ ಒಟ್ಟು 41 ಜನ ಕಾರ್ಯ ನಿರ್ವಹಿಸುತ್ತಿದ್ದು ಇವರು ಪ್ರತಿ ತಿಂಗಳು ಸರ್ಕಾರದ ಲಕ್ಷ ಲಕ್ಷ ವೇತನ ಪಡೆಯುತ್ತಾರೆ. ಇಷ್ಟು ಪಡೆದೂ ಆಸ್ಪತ್ರೆ ಕೆಲವೊಮ್ಮೆ ಬಿಕೋ ಎನ್ನುತ್ತಿರುತ್ತದೆ. ಕಾರಣ ಇಷ್ಟೇ ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದನ್ನೇ ಇವರು ಮರೆತುಬಿಟ್ಟಿದ್ದಾರೆ. ಇವರಿಗೆ ಬಡವರ ಶಾಪ ತಟ್ಟದೆ ಇರದು ಎನ್ನುತ್ತಾರೆ ಸಾರ್ವಜನಿಕರು.
ರಾಜಾರೋಷವಾಗಿ ಹೊರಗೆ ಅಡ್ಡಾಡುವ ವೈದ್ಯ : ಪುರಸಭೆ ಅಧ್ಯಕ್ಷ ಯಲ್ಲನಗೌಡರು ಹಾಜರಾತಿ ಬುಕ್ಕನ್ನು ಪರೀಶೀಲಿಸಿದಾಗ ಮುಂಜಾನೆ 9 ಗಂ.ಗೆ ಉಪಸ್ಥಿತರಿರಬೇಕಾಗಿದ್ದ ಅರವಳಿಕೆ ತಜ್ಞ ವೈದ್ಯ ಸಂಜೀವ್ ಕುಮಾರ್ ತೇಲಿ ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಗೆ ಆಗಮಿಸುತ್ತಾರೆ ಎಂದರೆ ನೀವೆ ಊಹಿಸಿ. ರಜೆ ಮೇಲೆ ಇದ್ದಾರೆಯೇ, ಇದ್ದರೆ ರಜೆ ಪತ್ರ ಕೊಡಿ ಎಂದರೆ ಅದಕ್ಕೂ ಉತ್ತರವಿಲ್ಲ. ಹಾಜರಾತಿ ಬುಕ್ ಗೂ ಸಹಿ ಮಾಡಿಲ್ಲ. ಸರ್ಕಾರ ನೀಡುವ ಸಂಬಳವನ್ನು ಪಡೆದೂ ನಿಯತ್ತಾಗಿ ಕೆಲಸ ಮಾಡದೆ ರಾಜಾರೋಷವಾಗಿ ಮತ್ತೊಂದು ಕಡೆಯಲ್ಲಿ ಇವರು ಕಾಣ ಸಿಗುತ್ತಾರೆ ಎಂದರೆ ಎಂತಾ ವಿಪರ್ಯಾಸ ನೋಡಿ. ಕಣ್ಣಿದ್ದು ಕುರುಡರಂತೆ ಅನೇಕ ಪ್ರಸಂಗಗಳನ್ನು ತನ್ನೊಡಲಲ್ಲಿ ಹೊತ್ತು ಸಮುದಾಯ ಆರೋಗ್ಯ ಕೇಂದ್ರ ಬಡವರ ಪಾಲಿಗೆ ಮೂಕ ವೇದನೆ ಪಡುತ್ತಿದೆ.
ಬ್ಲಡ್ ಸ್ಟೋರೇಜ್ ಸಮಸ್ಯೆ : ಬಡವರ ಅನುಕೂಲಕ್ಕಾಗಿ ಉಚಿತ ರಕ್ತದ ಪಾಕೀಟುಗಳನ್ನು ಸಂಗ್ರಹಿಸುವ ಫ್ರಿಡ್ಜ್ ಲಭ್ಯವಿದ್ದರೂ ಖಾಲಿ ಖಾಲಿ. ಹಲವಾರು ವರ್ಷಗಳಿಂದಿರುವ ಸಮಸ್ಯೆ ಕೂಡ ಇದು, ನಿವಾರಣೆಯಾದರೆ ಬಡವರಿಗೆ ದುಬಾರಿ ಬೆಲೆ ತೆತ್ತು ತಾಲೂಕು ಮತ್ತು ಇನ್ನಿತರ ಕಡೆಗಳಿಗೆ ಹೋಗಿ ಬ್ಲಡ್ ಪಾಕೆಟ್ ಗಳನ್ನು ತರುವುದು ತಪ್ಪಿ ಸಮಯಕ್ಕೆ ಒದಗಿ ಅಗತ್ಯ ಜೀವಗಳು ಪ್ರಾಣಾಪಾಯದಿಂದ ಪಾರಾಗುತ್ತವೆ. ಆದ್ದರಿಂದ ಈ ಸಮಸ್ಯೆಯನ್ನು ಬೇಗ ಪರಿಹರಿಸಲು ಸಾರ್ವಜನಿಕರು ಪುರಸಭಾಧ್ಯಕ್ಷರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗುರುಲಿಂಗಯ್ಯ ಮಠಪತಿ, ಮಂಜು ಬಕರೆ, ಮಹಾಲಿಂಗ ಯ.ಪಾಟೀಲ್ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿ ಉತ್ತಮ ವ್ಯವಸ್ಥೆ ಇದೆ ಯಾವುದೇ ತೊಂದರೆ ಇಲ್ಲ. ತಾಯಿ ಕಾರ್ಡ್ ಮಾಡಲಿಕ್ಕೆ ಮಾತ್ರ ಸಮುದಾಯ ಸಂರಕ್ಷಣಾಧಿಕಾರಿ ಇಬ್ಬರನ್ನು ನೇಮಕ ಮಾಡಬೇಕು.ಉಳಿದಂತೆ ಆವರಣದಲ್ಲಿ ಬ್ರಿಕ್ಸ್, ಬೆಳಕಿನ ವ್ಯವಸ್ಥೆ, ಮತ್ತು ಮಳೆ, ಗಾಳಿ, ಬಿಸಿಲಿನಿಂದ ಸಾರ್ವಜನಿಕರಿಗೆ ಸೆಲ್ಟರ್ (ತಂಗುದಾಣ)ನಿರ್ಮಾಣ ಅವಶ್ಯವಿದೆ. ಇವುಗಳನ್ನು ಪೂರೈಸಲು ಪುರಸಭೆಗೆ ಮನವಿ ಮಾಡಿದರು.
ಡಾ.ಸಿ ಎಂ.ವಜ್ಜರ್ಮಟ್ಟಿ.
ಮುಖ್ಯ ವೈದ್ಯಾಧಿಕಾರಿ ಆರೋಗ್ಯ ಸಮುದಾಯ ಕೇಂದ್ರ ಮಹಾಲಿಂಗಪುರ.