ಮಹಾಲಿಂಗಪುರ ಬಸ್ ನಿಲ್ದಾಣ ಕಳಪೆ ಕಾಮಗಾರಿ ಆರೋಪ : ವಾರದೊಳಗೆ ಸಭೆ ಕರೆದು ಕ್ರಮ ಜರುಗಿಸುವ ಭರವಸೆ.
ಮಹಾಲಿಂಗಪುರ: ಸ್ಥಳೀಯ ಬಸ್ ನಿಲ್ದಾಣದ ಕಾಮಗಾರಿಯ ಬಗ್ಗೆ ಒಂದು ವಾರದೊಳಗೆ ಡಿಸಿ, ಎಂಜಿನಿಯರ್ ಮತ್ತು ಕಂಟ್ರಾಕ್ಟರುಗಳು ಸಭೆಯನ್ನು ಕರೆದು ಪರೀಶೀಲಿಸಿ ಕ್ರಮಕೈಗೊಳ್ಳುವುದಾಗಿ ಹಾಗೂ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿಯಾಗಿ 1.50 ಕೋಟಿ ರೂ. ಮಂಜೂರಾಗಿದ್ದು ನಿಲ್ದಾಣದಲ್ಲಿ ಉತ್ಕೃಷ್ಟ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು.
ಸ್ಥಳೀಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದ್ದು ಮೂಲನಕ್ಷೆಯಲ್ಲಿರುವಂತೆ ಕಟ್ಟಡವನ್ನು ಕಟ್ಟಿರುವುದಿಲ್ಲ ಹಾಗೂ ಕಟ್ಟಡಕ್ಕೆ ಹಳೆಯ ಕಲ್ಲುಗಳನ್ನು ಬಳಸಲಾಗಿದೆ, ಕಾಮಗಾರಿ ವಿಳಂಬವಾಗುತ್ತಿದೆ ಎಂಬ ಹಲವಾರು ಆರೋಪಗಳನ್ನು ಆಲಿಸಿದ ಶಾಸಕರು ಒಂದು ವಾರದೊಳಗಾಗಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದು ಮೂಲ ನಕಾಶೆ ಹಾಗೂ ಕಾಮಗಾರಿಯ ಬಗ್ಗೆ ಸಂಪೂರ್ಣ ವಿವರ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದರು ಹಾಗೂ ಈಗ ಮಂಜೂರಾಗಿರುವ 1.50 ಕೋಟಿ ರೂಪಾಯಿಗಳ ಅನುದಾನದಲ್ಲಿ ಅಂಗಳವನ್ನು ಎತ್ತರಿಸಿ, ಶೌಚಾಲಯಗಳನ್ನು ಸ್ಥಳಾಂತರಿಸಿ ಸುಧಾರಿತ ಶೌಚಾಲಯಗಳನ್ನು ನಿರ್ಮಿಸಿ, ವ್ಯವಸ್ಥಿತ ಶಾಪಿಂಗ್ ಸೆಂಟರ್ ಗಳ ನಿರ್ಮಾಣ ಹಾಗೂ ನಿಲ್ದಾಣದ ಎದುರು ಮುಖ್ಯದ್ವಾರ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳ ಮೂಲಕ ನಿಲ್ದಾಣದ ಸೌಂದರ್ಯ ಹೆಚ್ಚಿಸಿ ಮಹಾಲಿಂಗಪುರದ ಬಸ್ ನಿಲ್ದಾಣವನ್ನು ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡಲಾಗುವುದು ಎಂದರು.
ಪುರಸಭಾ ಸದಸ್ಯ ಚನ್ನಬಸು ಯರಗಟ್ಟಿ, ಮುಖಂಡರಾದ ಶಿವು ಅಂಗಡಿ, ಭೀಮಶಿ ಗೌಂಡಿ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಚಮಕೇರಿ, ಪ್ರಶಾಂತ ಮುಕ್ಕೆನ್ನವರ ಇತರರು ಇದ್ದರು.