ಫಕೀರೇಶ್ವರ ಮಠಕ್ಕೆ ಸಂಸದ ಜಗದೀಶ ಶೆಟ್ಟರ ಭೇಟಿ
ಶಿರಹಟ್ಟಿ, 20: ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪರಂಪರೆಯನ್ನು ಹೊಂದಿರುವ ಜಗದ್ಗುರು ಫಕ್ಕೀರೇಶ್ವರ ಮಠಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ನೂತನ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು ಕುಟುಂಬ ಸಮೇತ ರವಿವಾರ ಭೇಟಿ ನೀಡಿ ಉಭಯ ಶ್ರೀಗಳ ದರ್ಶನಾಶೀರ್ವಾದ ಪಡೆದರು.
ನಂತರ ಅವರು ಮಾತನಾಡಿ, ಶಿರಹಟ್ಟಿಯ ಶ್ರೀ ಜಗದ್ಗುರು ಫಕ್ಕೀರೇಶ ಮಠಕ್ಕೆ ಹಾಗೂ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ನಾನು ಬೆಳಗಾವಿ ಸಂಸದನಾಗಿ ಆಯ್ಕೆಯಾದ ನಂತರ ಶ್ರೀಮಠಕ್ಕೆ ಭೇಟಿ ನೀಡುವ ಸಂಕಲ್ಪ ಮಾಡಿಕೊಂಡಿದ್ದರಿಂದ ಇಂದು ನಾನು ಭೇಟಿ ನೀಡಿ ಕತೃಗಳ ಹಾಗೂ ಉಭಯ ಶೀಗಳ ದರ್ಶನಾಶೀರ್ವಾದ ಪಡೆದು ಪುನಿತನಾಗಿದ್ದೇನೆ ಎಂದರು.
ನೀವು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಸೋಲನ್ನು ಅನುಭವಿಸಿದ್ದಿರಿ, ನಿಮಗೆ ಕಾಂಗ್ರೆಸ್ ಸರಕಾರ ಎಂಎಲ್ಸಿ ಮಾಡಿದ್ದರೂ ಸಹ ನೀವು ಕಾಂಗ್ರೆಸ್ ತೊರೆದು ಬಿಜೆಪಿ ಸೇರೆ್ಡಗೊಂಡಿರಲ್ಲ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ನಾನು ಜನಸಂಘದಿಂದ ಬಂದವನು. ನಾನು ಮರಳಿ ಮಾತೃ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿಯ ಹಿರಿಯ ನಾಯಕರು ನನಗೆ ಟಿಕೇಟ್ ನೀಡಿದ್ದರೂ, ನನಗೆ ಈ ಭಾಗದ ಜನತೆ ಅತೀ ಹೆಚ್ಚು ಮತಗಳನ್ನು ನೀಡಿ ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಜವಾಬ್ದಾರಿ ನನ್ನ ಮೇಲಿದೆ ಅದನ್ನು ಚಾಚು ತಪ್ಪದೇ ನಿಭಾಯಿಸುತ್ತೇನೆ ಎಂದು ಭರವಸೆ ಕೊಟ್ಟರು.
ರಾಜ್ಯ ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳಿಗೆ ಹಣ ನೀಡಿ ಈಗ ಖಜಾನೆಖಾಲಿಯಾಗಿದೆ, ಅದ್ದರಿಂದ ತರಾತುರಿಯಿಂದ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಯನ್ನು ಏರಿಸಿದ್ದು ಯಾವ ಪುರಷಾರ್ಥಕ್ಕೆ, ಕಾಂಗ್ರೆಸ್ನ ಐದು ಗ್ಯಾರಂಟಿಗಳಿಂದ ಅಭಿವೃದ್ದಿಗಳು ಮಾತ್ರ ಶೂನ್ಯವಾಗಿವೆ, ಅಲ್ಲದೇ ಕ್ಷೇತ್ರದ ಜನರಿಗೆ ಉತ್ತರ ಕೊಡಲು ಆಗುತ್ತಿಲ್ಲ. ಕೂಡಲೇ ಗ್ಯಾರಂಟಿಗಳನ್ನು ಬಂದ ಮಾಡುವಂತೆ ಕೆಲವು ಶಾಸಕರು ಬಹಿರಂಗವಾಗಿ ಹೇಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಸಮಯದಲ್ಲಿ ಪತನಗೊಂಡರು ಆಶ್ಚರ್ಯ ಪಡಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಈ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಚಂದ್ರಕಾಂತ ನೂರಶೆಟ್ಟರ. ಜಾನು ಲಮಾಣಿ. ಫಕ್ಕೀರೇಶ ರಟ್ಟಿಹಳ್ಳಿ. ಅಜ್ಜು ಪಾಟೀಲ, ಅಕ್ಬರ ಯಾದಗಿರಿ, ಮಂಜುನಾಥ ಸೊಂಟನೂರ ಹಾಗೂ ಅನೇಕರು ಕಾರ್ಯಕರ್ತರು ಇದ್ದರು.