ಕೌಜಲಗಿ ನಿಂಗಮ್ಮ ರಂಗಮಂದಿರ ಭೂತ ಬಂಗಲೆಯಾಗುವುದು ಬೇಡ, ಕಲಾ ದೇಗುಲವಾಗಲಿ: ಸಿದ್ದು ಸವದಿ.
ಮಹಾಲಿಂಗಪುರ 23: ಸ್ಥಳೀಯ ಪಾರಿಜಾತ ಕಲಾವಿದೆ ಕೌಜಲಗಿ ನಿಂಗಮ್ಮ ರಂಗಮಂದಿರಕ್ಕೆ ಶುಕ್ರವಾರ ಮುಖಂಡರೊಂದಿಗೆ ಭೇಟಿ ನೀಡಿ ಪರೀಶೀಲಿಸಿದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಕಳಪೆ ಕಾಮಗಾರಿಯ ಬಗ್ಗೆ ಸಿಡಿಮಿಡಿಗೊಂಡು ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಏಳು ವರ್ಷಗಳ ಹಿಂದೆ ಟೆಂಡರ್ ಕರೆದು ಪ್ರಾರಂಭಗೊಂಡ ಕಾಮಗಾರಿ ಇನ್ನೂ ಮುಗಿಯದಿರುವ ಬಗ್ಗೆ ಹಾಗೂ ಎಸ್ಟಿಮೇಟ್ ಉಲ್ಲಂಘಿಸಿ ಮಾಡಿರುವ ಆಸನಗಳು, ಸಾಕಷ್ಟು ಸದ್ದು ಮಾಡುವ ಫ್ಯಾನ್ ಅಳವಡಿಕೆ, ಕಳಚಿ ಬೀಳುತ್ತಿರುವ ಪಿಓಪಿ, ಮಳೆ ನೀರು ಸೋರಿ ಗೋಡೆಗಳೆಲ್ಲ ಒದ್ದೆಯಾಗಿರುವುದು ಸೇರಿದಂತೆ ಅನೇಕ ಲೋಪಗಳ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ ಅವರು, ಆಧುನಿಕ ತಂತ್ರಜ್ಞಾನದ ಶಬ್ದ ರಹಿತ ಫ್ಯಾನ್ ಅಳವಡಿಕೆ , ಸೋರದಂತೆ ಕೋಬಾ ಹಾಗೂ ಎಸ್ಟಿಮೇಟ್ ಕಾಪಿಯಲ್ಲಿರುವಂತೆ ಆಸನ ವ್ಯವಸ್ಥೆ ಮತ್ತು ಭವನಕ್ಕೆ ಪ್ರತ್ಯೇಕ ಸೂಕ್ತ ರಸ್ತೆ ಆಗಬೇಕು ಅಲ್ಲಿಯವರೆಗೆ ಹಸ್ತಾಂತರ ಮತ್ತು ಉದ್ಘಾಟನೆ ಬೇಡ ಎಂದರು.
ಭವನ ನಿರ್ಮಾಣಕ್ಕೆ 2012-13 ರಲ್ಲಿ 10 ಲಕ್ಷ, 2013-14 ರಲ್ಲಿ 1 ಕೋಟಿ, 2017-18 ರಲ್ಲಿ 2ಕೋಟಿ 5 ಲಕ್ಷ ಒಟ್ಟು 3 ಕೋಟಿ 15 ಲಕ್ಷ ರೂಪಾಯಿ ಈಗಾಗಲೇ ಬಿಡುಗಡೆಯಾಗಿದ್ದು ಕಾಮಗಾರಿ ಕಳಪೆ ಮತ್ತು ವಿಳಂಬವಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್. ಹೇಮಲತಾ ಮತ್ತು ಅಭಿಯಂತರ ಎಸ್. ಎಸ್. ಸಾವನ್ ಅವರಿಗೆ ಸೂಚಿಸಿದರು.
ಪಿಯುಸಿ ಕಾಲೇಜು ಕಾಮಗಾರಿ ವೀಕ್ಷಣೆ : ರಂಗಮಂದಿರಕ್ಕೆ ಹೊಂದಿಕೊಂಡಿರುವ ಪಿಯುಸಿ ಕಾಲೇಜು ನೂತನ ಮತ್ತು ಹಳೆಯ ಕಟ್ಟಡಗಳನ್ನು ಪರೀಶೀಲಿಸಿದರು. ಛಾವಣಿ ಮೇಲೆ ನಿಂತ ಮಳೆ ನೀರು ಗಮನಿಸಿ ಅದಕ್ಕೆ ಕೋಬಾ ಮಾಡಲು ಮತ್ತು ತರಗತಿಗಳಲ್ಲಿ ಗ್ರೀನ್ ಬೋರ್ಡ್ ಅಳವಡಿಕೆಗೆ ಸೂಚಿಸಿ ಅಡುಗೆ ಕೋಣೆಯನ್ನೂ ಸಹ ಶೀಘ್ರವಾಗಿ ಮಂಜೂರು ಮಾಡುವ ಭರವಸೆಯನ್ನು ನೀಡಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಸನಗೌಡ ಪಾಟೀಲ, ಬಿಜೆಪಿ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಪುರಸಭಾ ಮಾಜಿ ಅಧ್ಯಕ್ಷ ಜಿ. ಎಸ್. ಗೊಂಬಿ, ವೀರಪ್ಪ ದಿನ್ನಿಮನಿ, ಪುರಸಭಾ ಸದಸ್ಯರಾದ ಶೇಖರ್ ಅಂಗಡಿ, ಚನ್ನಬಸು ಯರಗಟ್ಟಿ, ರಾಜು ಚಮಕೇರಿ, ರವಿ ಜವಳಗಿ, ಪ್ರಕಾಶ ಜೀರಗಾಳ, ಎಪಿಎಂಸಿ ನಿರ್ದೇಶಕ ಶಂಕರಗೌಡ ಪಾಟೀಲ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಚಮಕೇರಿ, ಪ್ರಶಾಂತ್ ಮುಕ್ಕೆನ್ನವರ, ಜಮೀರ ಯಕ್ಸಂಬಿ, ಶಿವಾನಂದ ಹುಣಶ್ಯಾಳ, ಚನ್ನಪ್ಪ ರಾಮೋಜಿ, ಮಹೇಶ ಮುಕುಂದ, ವಿಕ್ರಮ ಕುಳ್ಳೂರ ಪುರಸಭಾ ಮುಖ್ಯಾಧಿಕಾರಿ ಎಚ್. ಎಸ್. ಚಿತ್ತರಗಿ, ಅಭಿಯಂತರ ಡಿ. ಬಿ. ಪಠಾಣ ಇತರರು ಇದ್ದರು.
ಮಹಾಲಿಂಗಪುರ ಕೌಜಲಗಿ ನಿಂಗಮ್ಮ ರಂಗಮಂದಿರ ಭೂತ ಬಂಗಲೆಯಾಗುವುದು ಬೇಡ, ಈ ಭಾಗದ ಕಲಾವಿದರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಬೇಕು ಹಾಗಾಗಿ ಸಂಪೂರ್ಣ ಗುಣಮಟ್ಟ ಕಾಮಗಾರಿ ಮುಕ್ತಾಯವಾದ ನಂತರ ಹಸ್ತಾಂತರ ಮತ್ತು ಉದ್ಘಾಟನೆ ಮಾಡಲಾಗುವುದು
ಸಿದ್ದು ಸವದಿ,
ಶಾಸಕರು, ತೇರದಾಳ ಮತ ಕ್ಷೇತ್ರ.