ಮಹಲಿಂಗಪುರ

ಶಾಸಕ ಸಿದ್ದು ಸವದಿ ಹೇಳಿಕೆ ಖಂಡನೀಯ: ಹಿಟ್ಟಿನಮಠ

ಶಾಸಕ ಸಿದ್ದು ಸವದಿ ಹೇಳಿಕೆ ಖಂಡನೀಯ: ಹಿಟ್ಟಿನಮಠ

ಮಹಾಲಿಂಗಪುರ 24: ಶುಕ್ರವಾರ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಭಾಜಪದ ಪುರಸಭೆ ಸದಸ್ಯರು ಮಿಲಾಪಿಯಾಗಿ ಕೆಲಸ ಮಾಡಿದ್ದಾರೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಗಂಭೀರವಾಗಿ ಆರೋಪಿಸಿ ಸದಸ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಖಂಡನೀಯವೆಂದು ಭಾಜಪ ಪಕ್ಷದ ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ ಹೇಳಿದರು. 

ಭಾಜಪದ ಪುರಸಭೆಯ ಏಳು ಜನ ಸದಸ್ಯರು ಶನಿವಾರ ಜಿಎಲ್ ಬಿಸಿ ಅತಿಥಿ ಗೃಹದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಜೊತೆ ಕೈ ಜೋಡಿಸಿದ್ದು ಸಾಬೀತಾದರೆ, ನಾವೆಲ್ಲರೂ ಸಾಮೂಹಿಕ ರಾಜೀನಾಮೆಗೆ ಸಿದ್ಧರಿದ್ದು, ತಮ್ಮದೇನಾದರೂ ಲಾಭಿ ಇದ್ದರೆ ಸ್ವತಃ ತಾವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಇಂತಹ ಸಣ್ಣತನದ ಮಾತು ಶಾಸಕ ಸವದಿಯವರಿಂದ ನಾವು ನೀರೀಕ್ಷಿಸಿರಲಿಲ್ಲ. ಈ ಮಾತುಗಳು ಪುರಸಭೆ ಸದಸ್ಯರು ಪಟ್ಟಣದ ಮುಖಂಡರು, ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿದೆ ಎಂದರು. 

ಪುರಸಭೆ ಸದಸ್ಯ ರವಿ ಜವಳಗಿ ಮತ್ತು ಬಿಜೆಪಿ ಹಿರಿಯ ಮುಖಂಡ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ಶುಕ್ರವಾರ ಪುರಸಭೆಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಿಂದ ರಾಷ್ಟ್ರೀಯ ಪಕ್ಷ ಬಿಜೆಪಿಗೆ ಅವಮಾನವಾದಂತಾಗಿದೆ. ಹೇಗೆಂದರೆ, ಪಕ್ಷದ ಒಬ್ಬ ಜವಾಬ್ದಾರಿ ವ್ಯಕ್ತಿ ಮತ್ತು ಜನಪ್ರತಿನಿಧಿಯೂ ಆದ ತೇರದಾಳ ಶಾಸಕ ಸಿದ್ದು ಸವದಿ ಸ್ಥಳೀಯ ಪುರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಒಂದು ಮನೆತನದ ಸದಸ್ಯರ ಅಣತಿಯಂತೆ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ.  

ಇದರಿಂದ ಪಕ್ಷದ ಎಲ್ಲರಿಗೂ ಬೇಜಾರಾಗಿದೆ. ಸ್ವತಃ ಮುಂದಾಗಿ ಭಾಜಪ ಪಕ್ಷದಿಂದ ಸದಸ್ಯರನ್ನು ಕಣಕ್ಕಿಳಿಸಿ ಚುನಾವಣೆ ಮಾಡಬಹುದಿತ್ತು. ಅಗಷ್ಟ 23ರ ನಾಲ್ಕು ದಿನಗಳ ಮುಂಚೆ ಸಭೆ ಕರೆದು, ಚುನಾವಣೆಯ ರೂಪುರೇಷೆ ಮಾಡಬೇಕಾದ ಶಾಸಕರು ಒಬ್ಬ ಪುರಸಭೆ ಸದಸ್ಯನನ್ನೂ ಜೊತೆಯಲ್ಲಿ ತೆಗೆದುಕೊಂಡು ನಾಲ್ಕು ದಿನಗಳ ವರೆಗೆ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂದರೆ ನೀವೆ ಇದರ ಮರ್ಮ ಅರಿಯಿರಿ.ಇವರು ಪ್ರತಿ ಪಕ್ಷ ಕಾಂಗ್ರೆಸ್ ಜೊತೆಗೆ ನೇರವಾಗಿ ಕೈ ಜೋಡಿಸಿದಂತಾಗಲಿಲ್ಲವೆ ? ಈ ವಿಷಯವನ್ನು ಜಿಲ್ಲಾ ಮತ್ತು ರಾಜ್ಯ ವರಿಷ್ಠರ ಗಮನಕ್ಕೆ ತರುತ್ತೇವೆ ಎಂದರು. 

ಭಾಜಪ ಪಕ್ಷದ ಪುರಸಭೆ ಸದಸ್ಯರಾದ ರಾಜು ಚಮಕೇರಿ ಮತ್ತು ಪ್ರಹ್ಲಾದ್ ಸಣ್ಣಕ್ಕಿ ಮಾತನಾಡಿ, ಶಾಸಕ ಸವದಿ ಸ್ವತಃ ಕಾಂಗ್ರೆಸ್ ಜೊತೆಯಲ್ಲಿ ನೇರವಾಗಿ ಕೈ ಜೋಡಿಸಿರುವುದು ಅನೇಕ ವಿದ್ಯಮಾನಗಳಿಂದ ಪುಷ್ಠಿ ದೊರೆತಂತಾಗಿದೆ. ಬಿಜೆಪಿ ಪುರಸಭೆಯ ಸದಸ್ಯರು ನಾವೆಲ್ಲರೂ ಚುನಾವಣೆಯಂದು ಪಟ್ಟಣದಲ್ಲಿಯೇ ಇದ್ದೇವೆ. ಇವರು ಒಬ್ಬ ಪುರಸಭೆ ಸದಸ್ಯನನ್ನು ಬೆಂಗಳೂರಲ್ಲಿ, ಒಬ್ಬ ಗೋವಾದಲ್ಲಿಟ್ಟುಕ್ಕೊಂಡು ಅಷ್ಟೇ ಅಲ್ಲದೆ ಮತದಾನದಲ್ಲಿ ಶಾಸಕ ಹಾಗೂ ಸಂಸದರು ಭಾಗಿಯಾಗಿ ಚುನಾವಣೆ ನಡೆಸಬಹುದಾಗಿತ್ತು ಇವರೆ ಬೇರೆ ಊರುಗಳಲ್ಲಿ ವಾಸ್ತವ್ಯ ಹೂಡಿದ್ದಾರೆಂದರೆ ಇವರ ಜಾಣ ನಡೆ ತಾವು ಊಹಿಸಬಹುದು. ಸೋಲು ಗೆಲುವು ಸಾಮಾನ್ಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಮುಖ್ಯ. ಇದನ್ನರಿಯದ ಶಾಸಕ ಸವದಿ ಒಂದು ಗ್ರಾಮ ಪಂಚಾಯತ್ ಸದಸ್ಯನಾಗಲೂ ಲಾಯಕ್ಕಿಲ್ಲ ಎಂದು ಖಾರವಾಗಿ ನುಡಿದರು.  

ಪುರಸಭೆ ಒಟ್ಟು 23 ಸದಸ್ಯರಲ್ಲಿ ಮೊದಲೆರಡು ಅವಧಿಗೆ ಭಾಜಪ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ. ಕೊನೆಯ 15 ತಿಂಗಳ ಅವಧಿಗೆ ಅಗಷ್ಟ 23 ರಂದು ಶುಕ್ರವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ 9 ಸದಸ್ಯರು, ಬಂಡಾಯ ಅಭ್ಯರ್ಥಿಗಳು ಮೂವರು ಹಾಗೂ ಒಬ್ಬ ಪಕ್ಷೇತರ ಸದಸ್ಯರೊಟ್ಟಿಗೆ 13 ಸಂಖ್ಯಾ ಬಲ ಹೊಂದಿ ಪುರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯಿತು. 

ಈ ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ಪ್ರಹ್ಲಾದ ಸಣ್ಣಕ್ಕಿ, ಬಸವರಾಜ ಚಮಕೇರಿ, ರವಿ ಜವಳಗಿ, ಮುಖಂಡರಾದ ಮಹಾಲಿಂಗಪ್ಪ ಕೋಳಿಗುಡ್ಡ, ಚನ್ನಪ್ಪ ರಾಮೋಜಿ, ಮಹಾಲಿಂಗ ಮುದ್ದಾಪುರ, ಶಿವಾನಂದ ಹುಣಶ್ಯಾಳ ಇದ್ದರು. 


ಸುದ್ದಿ ಓದಿ