ಮಹಲಿಂಗಪುರ

ಶಾಸಕ ಸವದಿ ಪ್ರೋಟೋಕಾಲ್ ಉಲ್ಲಂಘನೆ ಮಾಡಿ ಶಿವಸಾಯಿ ಸರೋವರ ಉದ್ಘಾಟನೆಗೊಳಿಸಿದ್ದಾರೆ : ಬಲವಂತಗೌಡ

ಶಾಸಕ ಸವದಿ ಪ್ರೋಟೋಕಾಲ್ ಉಲ್ಲಂಘನೆ ಮಾಡಿ ಶಿವಸಾಯಿ ಸರೋವರ ಉದ್ಘಾಟನೆಗೊಳಿಸಿದ್ದಾರೆ :  ಬಲವಂತಗೌಡ

ಮಹಾಲಿಂಗಪುರ  06 : ಪ್ರೋಟೋಕಾಲ್ ಉಲ್ಲಂಘನೆ ಮಾಡಿ ಕೆಂಗೇರಿಮಡ್ಡಿ ಬಡಾವಣೆಯ ಶಿವಸಾಯಿ ಸರೋವರವನ್ನು ತೇರದಾಳ ಶಾಸಕ ಸಿದ್ದು ಸವದಿ ಉದ್ಘಾಟನೆಗೊಳಿಸಿರುವುದು ಸರಿಯಾದ ಕ್ರಮವಲ್ಲವೆಂದು ಸ್ಥಳೀಯ ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ್ ವಿರೋಧ ವ್ಯಕ್ತಪಡಿಸಿ ಮಾತನಾಡಿದರು.  

ಸ್ಥಳೀಯ ಜಿಎಲ್ ಬಿಸಿ ಅತಿಥಿ ಗೃಹದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಯಿ ಸರೋವರ ಎನ್ನುವುದು ಪ್ರತಿಯೊಬ್ಬರ ಆಸ್ತಿ, ಇದನ್ನು ಅಭಿವೃದ್ಧಿಗೊಳಿಸಲು ನಮ್ಮ ತಕರಾರಿಲ್ಲ. ಆದರೆ ಕಾಮಗಾರಿ ಪೂರ್ಣಗೊಂಡ ನಂತರ ಶಿಷ್ಟಾಚಾರಕ್ಕಾದರೂ ಉದ್ಘಾಟನೆ ಕಾರ್ಯಕ್ರಮದ ರೂಪುರೇಷೆಗಾಗಿ ಪುರಸಭೆ ಹಾಗೂ ಸ್ಥಳೀಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿಯಮ ಬದ್ಧವಾಗಿ ನೂತನ ಸರೋವರಕ್ಕೆ ಚಾಲನೆ ನೀಡಬಹುದಾಗಿತ್ತು.  

ಮೇಲಾಗಿ ಭಾನುವಾರ ಹಮ್ಮಿಕೊಂಡ ಈ ಕಾರ್ಯಕ್ರಮದ ಬಗ್ಗೆ ಜಮಖಂಡಿ ಉಪ ವಿಭಾಗಾಧಿಕಾರಿ ಸಹಿತ ಸ್ಥಳೀಯ ಪುರಸಭೆ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಶಾಸಕ ಸವದಿ ಅವರ ಈ ನಡೆ ಸರ್ವಾಧಿಕಾರ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಆದಷ್ಟು ಬೇಗ ಆಗಿರುವ ಲೋಪ ಸರಿಪಡಿಸಿಕ್ಕೊಂಡು ಪ್ರೋಟೋಕಾಲ್ ಉಲ್ಲಂಘನೆಯಾಗದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಶಾಸಕ ಸಿದ್ದು ಸವದಿ ಅವರನ್ನು ತೀವ್ರವಾಗಿ ಆಗ್ರಹಿಸಿದರು. 

ಇದೆ ಸಂದರ್ಭದಲ್ಲಿ ಇನ್ನೋರ್ವ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ತೇರದಾಳ ಕ್ಷೇತ್ರದಿಂದ ಶಾಸಕ ನಾಲ್ಕು ದಶಕಗಳಿಂದ ರಾಜ್ಯ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಶಾಸಕ ಸವದಿ ಅವರು ಕಾನೂನನ್ನೆ ಗಾಳಿಗೆ ತೂರಿ ಅಧಿಕಾರ ಮಾಡುತ್ತಿರುವುದು ಸರಿಯಲ್ಲ. ನಮ್ಮ ಉಸ್ತುವಾರಿ ಸಚಿವರು, ಸ್ಥಳೀಯ ಪುರಸಭೆ ಸ್ಥಾಯಿ ಸಮಿತಿ ಚೇರ್ಮನ್ ಮತ್ತು ಸದಸ್ಯರನ್ನು ಗಣನೆಗೆ ತೆಗೆದುಕೊಳ್ಳದೆ ಕಾರ್ಯ ನಿರ್ವಹಿಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಶಾಸಕ ಸವದಿ ಅವರನ್ನು ಪ್ರಶ್ನಿಸಿದರು. ದಯವಿಟ್ಟು ಶಾಸಕರು ಗಮನಿಸಬೇಕು ಸರ್ಕಾರಿ ಯಾವುದೇ ಕೆಲಸವಿರಲಿ ನಿಮ್ಮ ಅಡಿಯಲ್ಲಿಯೇ ಮಾಡುತ್ತ ಬಂದಿದ್ದೇವೆ, ಆದ್ದರಿಂದ ಒಂದು ತಿಂಗಳಲ್ಲಿ ನಿಯಮಬದ್ಧವಾಗಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡು ಆಗಿರುವ ಲೋಪ ತಿದ್ದಿಕ್ಕೊಳ್ಳಬೇಕೆಂದು ಕೊಣ್ಣೂರ ಶಾಸಕರನ್ನು ಒತ್ತಾಯಿಸಿದರು. 

ಮುಖಂಡರಾದ ಮಲ್ಲಪ್ಪ. ಸಿಂಗಾಡಿ, ಈಶ್ವರ ಚಮಕೇರಿ, ದುಂಡಪ್ಪ ಕಂಕಣವಾಡಿ, ಲಕ್ಷ್ಮಣ ದೇಸಾರಟ್ಟಿ, ಮಲ್ಲಪ್ಪ ಭಾವಿಕಟ್ಟಿ, ಪ್ರಕಾಶ ಮಮದಾಪೂರ, ಮುಸ್ತಾಕ್ ಚಿಕ್ಕೋಡಿ, ರಾಜು ಗೌಡಪ್ಪಗೋಳ, ರಾಜು ಭಾವಿಕಟ್ಟಿ, ಬಸವರಾಜ ರಾಯರ, ವಿಜುಗೌಡ ಪಾಟೀಲ್, ಅಬ್ದುಲ್ ಮ.ಭಾಗವಾನ, ಸಿದ್ದು ಬೇನೂರ, ವಿಠ್ಠಲ ಸಂಶಿ, ಎಸ್ ಎನ್ ಪಾಟೀಲ್, ಸುನೀಲಗೌಡ. ಪಾಟೀಲ್, ದೇವ್ರೇಶ ಉಳ್ಳೇಗಡ್ಡಿ, ಸುರೇಶ ಬಿದ್ರಿ, ಮಹಾಲಿಂಗ ಮಾಳಿ, ದಾದಾ ಕರೋಶಿ, ಅರವಿಂದ ಮಾಲಬಸರಿ, ನಜೀರ್ ಝಾರೆ, ವಿಠ್ಠಲ ಹೊಸ್ಮನಿ, ರಿಯಾಜ್ ಪೆಂಡಾರಿ, ಪ್ರಕಾಶ ಉಳ್ಳೇಗಡ್ಡಿ, ನಾಗೇಶ ನಾಯಿಕ, ಸತ್ಯಪ್ಪ ಹುದ್ದಾರ, ದಾದಾ ಸನದಿ ಇನ್ನೂ ಮುಂತಾದವರಿದ್ದರು. 


ಸುದ್ದಿ ಓದಿ