ರೋಗಿಗಳ ಜೀವ ರಕ್ಷಣೆಗೆ ರಕ್ತದಾನ ಮಾಡುವುದು ಅತ್ಯಂತ ಪುಣ್ಯ ಕಾರ್ಯವಾಗಿದೆ ಎಂದು ಶಾಸಕ ಡಿ.ಎಂ. ಐಹೊಳೆ
ರಾಯಬಾಗ 03: ಗುರುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ರೋಗಿಗಳ ಜೀವ ಉಳಿಸಲು ರಕ್ತದ ಅವಶ್ಯಕತೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಶಿಬಿರದಲ್ಲಿ ಶಿಕ್ಷಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದವರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಚಿಕ್ಕೋಡಿ ಎಡಿಎಚ್ ಡಾ. ಎಸ್.ಎಂ. ಪಾಟೀಲ, ಡಿಎಫ್‌ಒ ರಾಜೇಶ್ವರಿ ಈರನಟ್ಟಿ, ತಾಪಂ ಇಒ ಅರುಣ ಮಾಚಕನೂರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್. ಚಂದರಗಿ, ಮುಖ್ಯ ವೈದ್ಯಾಧಿಕಾರಿ ಡಾ. ವಿನೋದ ಗಸ್ತಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.