ಸರ್ಕಾರದ ಯೋಜನೆಗಳ ಸದ್ಬಳಕೆಯಿಂದ ಮಹಿಳಾ ಸಮೂಹ ಸಬಲವಾಗಲಿ: ಕೃಷ್ಣ ಟಿ.
ಮಾಂಜರಿ 04: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹತ್ತಾರು ಯೋಜನೆಗಳ ಮೂಲಕ ಮಹಿಳಾ ಸಮೂಹವನ್ನು ಸಬಲೀಕರಣಗೊಳಿಸುವ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳನ್ನು ಒದಗಿಸುವ ಕೆಲಸವನ್ನೂ ಮಾಡುತ್ತಿದ್ದು, ಮಹಿಳೆಯರು ಅವುಗಳ ಸದ್ಬಳಕೆ ಮಾಡಿಕೊಂಡು ಕುಟುಂಬವನ್ನು ಸ್ವಾವಲಂಬನೆಯತ್ತ ಮುನ್ನಡೆಸಬೇಕು ಎಂದು ಯೋಜನೆಯ ಚಿಕ್ಕೋಡಿ ಜಿಲ್ಲಾ ನಿರ್ದೇಶಕ ಕೃಷ್ಣ ಟಿ.ಹೇಳಿದರು.ತಾಲ್ಲೂಕಿನ ಹಿರೇಕೋಡಿ ಗ್ರಾಮದಲ್ಲಿ ಮಾ. 04ರಂದು ಹಮ್ಮಿಕೊಂಡಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಸೃಜನಶೀಲ ಕಾರ್ಯಕ್ರಮದಡಿ ಜ್ಞಾನವಿಕಾಸ ಸೃಜನಶೀಲ ಸದಸ್ಯೆಯರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಮತ್ತು ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಕಾರ್ಡ್ ವಿತರಣೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅವುಗಳ ಮಾಹಿತಿ ಪಡೆದುಕೊಂಡು ಸದುಪಯೋಗ ಮಾಡಿಕೊಳ್ಳಬೇಕು. ಯೋಜನೆಯಿಂದಲೂ ಸದಸ್ಯೆಯರಿಗೆ ಅಗತ್ಯ ಜಾಗೃತಿ ಮೂಡಿಸಲಾಗುತ್ತಿದೆ. ಪರಿಸರ ಜಾಗೃತಿ, ಆರ್ಥಿಕ ಜೋಡಣೆ, ಕೆರೆಕಟ್ಟೆಗಳ ಅಭಿವೃದ್ಧಿ, ಸ್ವ ಉದ್ಯೋಗ ತರಬೇತಿ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ ಅವರು, ತಾಲ್ಲೂಕಿನ ಜೈನಾಪುರ, ಹಿರೇಕೋಡಿ, ನಾಗರಾಳ ಮತ್ತು ನೇಜ್ ಗ್ರಾಮಗಳ 600ರಷ್ಟು ಜ್ಞಾನವಿಕಾಸ ಸೃಜನಶೀಲ ಸದಸ್ಯೆಯರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕಾರ್ಡ್ ಮತ್ತು 60 ರಷ್ಟು ನಿರ್ಮಾಣ ಕಾಮಗಾರಿ ಕಾರ್ಮಿಕರಿಗೆ ಕಾರ್ಡ್ ವಿತರಣೆ ಮಾಡಲಾಗಿದ್ದು, ಮಹಿಳೆಯರು ಅಗತ್ಯವಿದ್ದಾಗ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಾಬರ ಪಟೇಲ್, ಉಪಾಧ್ಯಕ್ಷೆ ಅನಿತಾ ದೇವಡಕರ, ಅನಿತಾ ಬನಗೆ, ಭರತ ದೇವಡಕರ, ಬಸವರಾಜ ಚಿಂಚಣಿ, ಸೇವಾ ಪ್ರತಿನಿಧಿ ಸುನೀತಾ ಮಗದುಮ್, ಸಂಗೀತಾ ಕಾಂಬಳೆ, ಒಕ್ಕೂಟ ಅಧ್ಯಕ್ಷೆ ಶಾರವ್ವ ಕರಗಾಂವೆ ಪಾಲ್ಗೊಂಡಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ತುಳಸಾ ವಿಶ್ವಕರ್ಮ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ಬೇಬಿ ವಿಶ್ವಕರ್ಮ ವಂದಿಸಿದರು.