ಎಂ.ಫಿಲ್ ಪಿಹೆಚ್.ಡಿ ಪರೀಕ್ಷೆ ಅ.21 ರಂದು ಮುಕ್ತಾಯ
ಕಲಬುರಗಿ 20 : ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಸಕ್ತ 2023ನೇ ಸಾಲಿನ ಎರಡನೇ ದಿನದ ಎಂ.ಫಿಲ್ ಮತ್ತು ಪಿಹೆಚ್.ಡಿ ಪ್ರವೇಶ ಪರೀಕ್ಷೆ ನಿಗದಿಯಂತೆ ಇಂದು ಬೆ. 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಗೆ ಯಶಸ್ವಿಯಾಗಿ ಮುಕ್ತಾಯ ಗೊಂಡಿತು.
ಮುಖ್ಯ ಆವರಣದಲ್ಲಿರುವ ವಿಜ್ಞಾನ ಕಟ್ಟಡದ ವಿವಿಧ ವಿಭಾಗಗಳ ಸುಮಾರು 25 ಬ್ಲಾಕ್ಗಳಲ್ಲಿ 14 ವಿಷಯಗಳ ಪರೀಕ್ಷೆಗೆ ಅರ್ಜಿ ಸಲ್ಲಿಸದ 589 ಅಭ್ಯರ್ಥಿಗಳಲ್ಲಿ 411 (ಶೇ. 69.78 ರಷ್ಟು) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇಂದು ನಡೆದ ಕೊನೆಯ ದಿನದ ಪರೀಕ್ಷೆಯಲ್ಲಿ ಗೊಂದಲ ಮತ್ತು ಆತಂಕವಿಲ್ಲದೆ ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಕುಲಪತಿ ಪ್ರೊ. ದಯಾನಂದ ಅಗಸರ ಪರೀಕ್ಷೆ ಕೇಂದ್ರಗಳಿಗೆ ಇಂದು ಭೇಟಿ ನೀಡಿ ಪರೀಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರಗಳಲ್ಲಿನ ಹಿರಿಯ ಮೇಲ್ವಿಚಾರಕರು ಹಾಗೂ ಡೀನರುಗಳೊಂದಿಗೆ ಸಮಾಲೋಚನೆ ನಡೆಸಿದರು. ಪರೀಕ್ಷಾ ವೀಕ್ಷಕರು ಸೇರಿದಂತೆ ಪರೀಕ್ಷಾ ಸಮಿತಿ ಮುಖ್ಯಸ್ಥರು ಹಾಗೂ ಶಿಕ್ಷಣ ನಿಕಾಯದ ಡೀನ್ ಪ್ರೊ. ಹೂವಿನಬಾವಿ ಬಾಬಣ್ಣ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಶ್ರೀರಾಮುಲು, ವಾಣಿಜ್ಯ ಮತ್ತು ನಿರ್ವಹಣೆ ನಿಕಾಯದ ಡೀನ್ ಪ್ರೊ. ಬಿ. ವಿಜಯ, ಕಲಾ ನಿಕಾಯದ ಡೀನ್ ಪ್ರೊ. ರಮೇಶ್ ರಾಠೋಡ್, ಆಡಳಿತ ವಿಭಾಗದ ವಿಶೇಷಾಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿ, ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಚಂದ್ರಕಾಂತ್ ಎಂ. ಯಾತನೂರ್, ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ. ಎಂ. ನಡುವಿನಮನಿ ಹಾಗೂ ಪ್ರೊ. ಎಸ್. ಎನ್. ಗಾಯಕವಾಡ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ. ವಿಜಯಕುಮಾರ್, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಎಂ ಜಿ. ಕಣ್ಣೂರು ಮತ್ತಿತರರಿದ್ದರು.
ಎಂ.ಫಿಲ್ ಮತ್ತು ಪಿಹೆಚ್.ಡಿ ಪರೀಕ್ಷೆ ನಂತರದ ಪ್ರಕ್ರಿಯೆ ವೇಳಾಪಟ್ಟಿ: ಗುಲಬರ್ಗಾ ವಿಶ್ವವಿದ್ಯಾಲಯವು 2023ನೇ ಶೈಕ್ಷಣಿಕ ಸಾಲಿನ 22 ವಿಷಯಗಳ ಎಂ.ಫಿಲ್ ಮತ್ತು ಪಿಹೆಚ್.ಡಿ ಪರೀಕ್ಷೆಯನ್ನು ನಿಯಮಾನುಸಾರ ಪೂರ್ಣಗೊಳಿಸಿದೆ. ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗವು ಎಂ.ಫಿಲ್ ಮತ್ತು ಪಿಹೆಚ್.ಡಿ ಪರೀಕ್ಷೆ ನಂತರದ ಪ್ರಕ್ರಿಯೆ ವೇಳಾಪಟ್ಟಿಯನ್ನು ಅ.18 ರಂದು ಪ್ರಕಟಿಸಿದ್ದು, ಅದರಂತೆ ಅ.21 ರಂದು ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟಿಸಲಿದೆ. ಅ.25 ಮತ್ತು 26 ರಂದು ಉತ್ತರಗಳಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಅಭ್ಯರ್ಥಿಗಳು ಸಲ್ಲಿಸಲು ಅವಕಾಶವಿದೆ. ಅ.31 ರಂದು ಪರಿಷ್ಕೃತ ಕೀ ಉತ್ತರಗಳ ಪ್ರಕಟಿಸಲಿದ್ದು, ನ.4 ರಂದು ಅಂತಿಮ ಫಲಿತಾಂಶವನ್ನು ವಿಶ್ವವಿದ್ಯಾಲಯ ಪ್ರಕಟಿಸಲಿದೆ.
ನ.8 ರಂದು ಎಂ.ಫಿಲ್/ಪಿಹೆಚ್.ಡಿ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಆಯಾ ವಿಭಾಗೀಯ ಮಂಡಳಿಯಿಂದ ಅನುಮೋದಿಸಲಿದ್ದು, ನ. 15 ರಿಂದ 17ರವರೆಗೆ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ನ.20 ಮತ್ತು 21 ರಂದು ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿ ಪ್ರಕಟಿಸಲಿದೆ.
ನ.22 ಮತ್ತು 23 ರಂದು ತಾತ್ಕಾಲಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ನಿಕಾಯಗಳ ಡೀನರಿಂದ ಅನುಮೋದನೆ ಪಡೆದು, ನ.24 ರಂದು ಡೀನರುಗಳಿಂದ ಅನುಮೋದಿತ ಪಟ್ಟಿಯು ವಿಶ್ವವಿದ್ಯಾಲಯದ ಕಚೇರಿಗೆ ಸಲ್ಲಿಕೆಯಾಗಲಿದೆ. ಅನಂತರ ಅಯ್ಕೆಯಾದ ಅಭ್ಯರ್ಥಿಗಳಿಗೆ ನ.29 ರಿಂದ ಡಿ.7 ರವರೆಗೆ ಪ್ರವೇಶ ನೀಡಲಾಗುವುದು. ಡಿ. 8 ರಿಂದ ಅಭ್ಯರ್ಥಿಗಳಿಗೆ ಕೋರ್ಸ್ವರ್ಕ್ ತರಗತಿಗಳನ್ನು ನಡೆಸಲಾಗುವುದು ಎಂದು ಎಂ.ಫಿಲ್ ಮತ್ತು ಪಿಹೆಚ್.ಡಿ ಪರೀಕ್ಷೆ ನಂತರದ ಪ್ರಕ್ರಿಯೆ ವೇಳಾಪಟ್ಟಿ ಪ್ರಕಟಣೆಯಲ್ಲಿ ಕುಲಸಚಿವರು ತಿಳಿಸಿದ್ದಾರೆ.