ಲೋಕ ಅದಾಲತ್ ; ಮಹಿಳಾ ವಕೀಲರ ಕಚೇರಿಯ ಬೋರ್ಡ ಕಿತ್ತ ಪ್ರಕರಣ: ಕರವೇ ಯಿಂದ ಕ್ಷಮೆಯಾಚನೆ
ದಾಂಡೇಲಿ 12 : ದಾಂಡೇಲಿ ಮಹಿಳಾ ವಕೀಲೆ ಜಯಾ ಡಿ.ನಾಯ್ಕರ ಕಚೇರಿಯ ಕನ್ನಡ ನಾಮಫಲಕ ಕಿತ್ತು ಹಾಕಿದ್ದ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಕರವೇ (ನಾರಾಯಣ ಗೌಡ ಬಣ) ದಾಂಡೇಲಿ ಅಧ್ಯಕ್ಷ ಸಾದಿಕ್ ಮುಲ್ಲಾ ಶನಿವಾರ ನಡೆದ ಲೋಕಾದಾಲತ್ ನಲ್ಲಿ ನ್ಯಾಯಾಧೀಶೆ ತೇಜಸ್ವಿನಿ ಸೊಗಲದ ಎದುರು ಕ್ಷಮೆಯಾಚಿಸಿದರು. ಹಾಗೂ ಇತರ ಮೂವರು ಆರೋಪಿಗಳು ನ್ಯಾಯಾಲಯದಲ್ಲಿ ಕ್ಷಮೆ ಕೇಳಿದರು. ಈ ಮೂಲಕ ಕನ್ನಡ ನಾಮಫಲಕ ಕಿತ್ತ ಪ್ರಕರಣ ಲೋಕ ಅದಾಲತ್ ದಾಂಡೇಲಿ ನ್ಯಾಯಾಲಯದಲ್ಲಿ ರಾಜಿ ಮೂಲಕ ಇತ್ಯರ್ಥವಾಯಿತು.
2 ಜನೇವರಿ 2024 ರಂದು ದಾಂಡೇಲಿ ಜೆ.ಎನ್. ರಸ್ತೆಯಲ್ಲಿ ಇಂಗ್ಲಿಷ್ ನಾಮಫಲಕ ಕೀಳುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದಾಂಡೇಲಿ ಘಟಕ ಹಮ್ಮಿಕೊಂಡಿತ್ತು. ಈ ವೇಳೆ ಜೆ.ಎನ್. ರಸ್ತೆಯಲ್ಲಿ ಇರುವ ಶೆಟ್ಟಿ ಲಂಚ್ ಹೋಂ ಪಕ್ಕದಲ್ಲಿ ಇದ್ದ ವಕೀಲೆ ಜಯಾ. ಡಿ.ನಾಯ್ಕ ಅವರ ಕಚೇರಿ ನಾಮಫಲಕವನ್ನು ಕರವೇ ಪದಾಧಿಕಾರಿಗಳು ಕಿತ್ತು ಹಾಕಿದ್ದರು. ಕನ್ನಡದಲ್ಲಿ ಇದ್ದ ವಕೀಲರ ಕಚೇರಿಯ ನಾಮಫಲಕ ಕಿತ್ತದ್ದು ಸುದ್ದಿಯಾಗಿತ್ತು. ವಕೀಲರು ಕಚೇರಿಯಲ್ಲಿ ಇಲ್ಲದ ವೇಳೆ ಕನ್ನಡದ ನಾಮಫಲಕ ಕಿತ್ತು ಹಾಕಿದಕ್ಕೆ ನಗರಸಭೆಯ ಇಬ್ಬರು ಸಿಬ್ಬಂದಿ ಸಾಥ್ ನೀಡಿದ್ದರು.
ಈ ಘಟನೆಯನ್ನು ಪ್ರತಿಭಟಿಸಿ ವಕೀಲೆ ಜಯಾ ನಾಯ್ಕ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪಿಎಸ್ ಐ ದೂರು ಸ್ವೀಕರಿಸಿದರೂ, ಬಾಹ್ಯ ಒತ್ತಡ ಗಳಿಂದ ಎಫ್ ಐ ಆರ್ ದಾಖಲಿಸಿರಲಿಲ್ಲ. ನಂತರ ಛಲ ಬಿಡದ ಮಹಿಳಾ ವಕೀಲರು, ನಾಮಫಲಕ ಕಿತ್ತು ಹಾಕಿದ್ದ ವಿಡಿಯೋ ದಾಖಲೆ ಸಹಿತ ದಾಂಡೇಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ನ್ಯಾಯಾಧೀಶರ ಗಮನಕ್ಕೆ ಕನ್ನಡದ ನಾಮಫಲಕ ಕಿತ್ತ ಬಗ್ಗೆ ನಿವೇದನೆ ಮಾಡಿಕೊಂಡಿದ್ದರು.
ಅಂದಿನ ನ್ಯಾಯಾಧೀಶೆ ರೋಹಿಣಿ ಬಸಾಪುರ ಆದೇಶ ನೀಡಿ, ಪ್ರಕರಣ ದಾಖಲಿಸಿ ತನಿಖೆಗೆ ಆದೇಶ ನೀಡಿದ್ದರು. 2.5 ವರ್ಷ ನ್ಯಾಯಾಲಯದಲ್ಲಿ ನಡೆದ ಪ್ರಕರಣ ಇಂದು ಕರವೇ ಅಧ್ಯಕ್ಷ ಸಾದಿಕ ಮುಲ್ಲಾ ಹಾಗೂ ಇತರರು ಕ್ಷಮೆ ಕೇಳುವ ಮೂಲಕ ಪ್ರಕರಣ ಇತ್ಯರ್ಥವಾಯಿತು. ಕರವೇ ಕ್ಷಮೆ ಕೇಳಿದ ವಿಶೇಷ ಘಟನೆ ದಾಂಡೇಲಿ ಲೋಕಾದಾಲತ್ ನಲ್ಲಿ ದಾಖಲಾಯಿತು. ನ್ಯಾಯಾಲಯದಲ್ಲಿ ಎಪಿಪಿ ರಮೇಶ್ ಬಂಕಾಪುರ, ವಕೀಲ ರಾಘವೇಂದ್ರ ಗಡೆಪ್ಪ , ಕೋರ್ಟ ಸಿಬ್ಬಂದಿ ಸುಭಾಷ್ , ರಾಹುಲ್ ಮಡಿವಾಳ, ಇತರರು ಇದ್ದರು.