ಸಾಕ್ಷರತೆ ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬು
ಕುಂತ ನಿಂತ ಸಭಾದಾಗ
ಕೂಡಿದಂತ ಮಂದ್ಯಾಗ
ಕೈಮುಗಿದು ಹೇಳತೇನಿ
ಒಂದ ಮಾತ ಅದ, ಬದುಕಿನ ಮಾತಽಽ
ಅಕ್ಷರ ಅನ್ನೋದು ಶಿಕ್ಷಣದ ಮೂಲ
ಉಸಿರನ್ನೋದು ನಮ್ಮ ಜೀವದ ಮೂಲ
ಅಕ್ಷರ ಕಲಿತರೆ ಮಾತ್ರ ನಮಗೆ ಬುದ್ಧಿಶಕ್ತಿ ಬೆಳೆತೈತಿ
ಬೆಳಕು ಕಾಣತೈತಿ
ಗಿಯ್ಯಗಿಯ್ಯಗಾಗಿಯ್ಯ....
ಈ ಗೀ...ಗೀ ಪದವು ಅಕ್ಷರ ಮಹತ್ವವನ್ನು ಹೇಳಿದೆ. ನಾವಿಂದು ಹೊಸ ಯುಗದ ಹೊಸ್ತಿಲಲ್ಲಿದ್ದೇವೆ. ಸಾಕ್ಷರತೆಯ ಮೂಲಕ ಅಭಿವೃದ್ಧಿ ಹೊಂದಿದ ನಾಡನ್ನು ಕಟ್ಟಲು ಸನ್ನದ್ಧರಾಗಿದ್ದೇವೆ. 1988 ರಲ್ಲಿ ರಾಷ್ಟ್ರೀಯ ಸಾಕ್ಷರತಾ ಮಿಶನ್ ದೇಶದಲ್ಲಿ ಅಸ್ತಿತ್ವಕ್ಕೆ ಬಂತು. 1990 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಾಕ್ಷರತಾ ವರ್ಷ ಎಂದು ಸಾರಲಾಯಿತು. ಕೇರಳದ ಎರ್ನಾಕುಲಂ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಂಪೂರ್ಣ ಸಾಕ್ಷರತಾ ಆಂದೋಲನ ಪ್ರಾರಂಭವಾಯಿತು. ಅಲ್ಲಿ ಅದ್ಭುತವಾದ ಪ್ರಗತಿ ಸಾಧಿಸಿದ್ದರಿಂದ ದೇಶದ ಇತರ ಜಿಲ್ಲೆಗಳಲ್ಲಿ 1993-94ರಲ್ಲಿ ಸಾಕ್ಷರತಾ ಆಂದೋಲನವು ಜನಾಂದೋಲನವಾಗಿ ಇಂದಿನ ಸಾಕ್ಷರತಾ ಪ್ರಗತಿಗೆ ನಾಂದಿಯಾಯಿತು.
1912ರಲ್ಲಿ ಮೈಸೂರು ಪ್ರಾಂತ್ಯದಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರು 7000 ರಾತ್ರಿ ಶಾಲೆಗಳನ್ನು ಪ್ರಾರಂಭಿಸುವ ಮೂಲಕ ಈ ನಾಡಿನ ಸಾಕ್ಷರತೆಯ ಇತಿಹಾಸದಲ್ಲಿ ಸ್ಮರಣೀಯವಾಗಿದ್ದಾರೆ. ಅವರ ಜೊತೆ ಬಿ.ಎಂ.ಶ್ರೀಕಂಠಯ್ಯನವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಶಿಕ್ಷಕ ವೃಂದದವರು ಸೈಕಲ್ ಮೇಲೆ ಜಾಥಾ ಮೂಲಕ ಕಲಿಕಾ ವಾತಾವರಣ ನಿರ್ಮಿಸಿದರು.
ಭಾರತ ಹಳ್ಳಿಗಳ ದೇಶ. ಬಹುತೇಕ ಜನರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿ ನಿರಕ್ಷರಿಗಳಾಗಿದ್ದಾರೆ. ಅನಕ್ಷರತೆ ಭಾರತದಂತಹ ಬಹುದೊಡ್ಡ ದೇಶಕ್ಕೆ ಒಂದು ಶಾಪ ಎಂದು ಭಾವಿಸಲಾಗಿದೆ. ಗಾಂಧೀಜಿಯವರ ಮಾತು ಭಾರತ ದೇಶ ಸರ್ವಾಂಗೀಣ ಅಭಿವೃದ್ಧಿಗೆ ಸಾಕ್ಷರತೆ ಮಾತ್ರ ಪೂರಕವೆಂದು ಹೇಳಿದರು. ಒಂದು ದೇಶ ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಉತ್ತಮ ಸ್ಥಾನ ಪಡೆಯಬೇಕಾದರೆ ಸಾಕ್ಷರತೆ ಮೊದಲ ಮಾನದಂಡವಾಗಿದೆ.
2011ರಲ್ಲಿ ದೇಶವು ಶೇ. 74.4 ರಷ್ಟು ಸಾಕ್ಷರವಾಗಿತ್ತು, ಇದರಲ್ಲಿ ಪುರುಷರು ಶೇ.82.14, ಮಹಿಳೆಯರು ಶೇ.65.4 ಸಾಕ್ಷರತೆಯ ಪ್ರಮಾಣ ಹೊಂದಿದ್ದರು. 15 ವರ್ಷ ಮೇಲ್ಪಟ್ಟ ವಯೋಮಾನದ ಅನಕ್ಷರಸ್ಥರ ಸಂಖ್ಯೆ 25.76 ಕೋಟಿ ಇತ್ತು. ಇದರಲ್ಲಿ ಪುರುಷರು 9.08 ಕೋಟಿ, ಮಹಿಳೆಯರು 16.68 ಕೋಟಿ ಇದ್ದಾರೆ. ವಿಶ್ವದ ಒಟ್ಟು ವಯಸ್ಕ ಅನಕ್ಷರಸ್ಥರ ಜನಸಂಖ್ಯೆಯಲ್ಲಿ ಶೇ.35 ರಷ್ಟು ಜನ ಭಾರತೀಯರಿದ್ದಾರೆ. ವಿಶ್ವದಲ್ಲಿ ಇಂದಿಗೂ 750 ದಶಲಕ್ಷ ಅನಕ್ಷರಸ್ಥರಿದ್ದಾರೆ. 258 ದಶಲಕ್ಷ ಮಕ್ಕಳು ಹಾಗೂ ಯುವಜನರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದಿಂದ ಹೊರಗುಳಿದಿದ್ದಾರೆ.
ಕರ್ನಾಟಕ ರಾಜ್ಯದ 31 ಜಿಲ್ಲೆಗಳಲ್ಲಿ ಧಾರವಾಡ ಜಿಲ್ಲೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಸಾಕ್ಷರತಾ ಪ್ರಮಾಣದಲ್ಲಿ ಉತ್ತಮ ಸಾಧನೆ ಮಾಡಿದೆ. 2011 ರ ಜನಗಣತಿಯ ಪ್ರಕಾರ ಜಿಲ್ಲೆಯ ಸಾಕ್ಷರತಾ ಪ್ರಮಾಣ ಶೇ.80 ಪ್ರಗತಿ ಸಾಧಿಸಿದೆ. ಈಗ ಈ ಪ್ರಮಾಣ ಇನ್ನೂ ಹೆಚ್ಚಳವಾಗಿದೆ.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯು 2019-20ನೇ ಸಾಲಿನಲ್ಲಿ 4742 ವಯಸ್ಕ ಅನಕ್ಷರಸ್ಥರಿಗೆ ಕಲಿಕೆಯ ಗುರಿ ಹಾಕಿಕೊಂಡು, ಸಂಜೆ ಅವರ ಬಿಡುವಿನ ವೇಳೆಯಲ್ಲಿ ಕಲಿಸುವ ಪ್ರಕ್ರಿಯೆ ಮೂಲಕ ಶೇ.100 ರಷ್ಟು ಗುರಿ ಸಾಧಿಸಿದೆ.
2021-22ನೇ ಸಾಲಿನಲ್ಲಿ ವಿನೂತನ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಅಮರಗೋಳದ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅನಕ್ಷರಸ್ಥ ಹಮಾಲರಿಗೆ, ಧಾರವಾಡ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಅನಕ್ಷರಸ್ಥ ಶಿಕ್ಷಾ ಬಂಧಿಗಳಿಗೆ, ರಾಯಾಪೂರದ ನಿರಾಶ್ರಿತರು ಸೇರಿ ಒಟ್ಟು 240 ಜನರನ್ನು ಸಾಕ್ಷರಸ್ಥರನ್ನಾಗಿ ಮಾಡಲಾಗಿದೆ.
2022-23ನೇ ಸಾಲಿನಲ್ಲಿ ಸಾಕ್ಷರತಾ ಕಾರ್ಯಕ್ರಮದ ಮೂಲಕ ಲಿಂಕ್ ಪಂಚಾಯತಿ ಅನುದಾನದಲ್ಲಿ ಒಟ್ಟು 10,360 ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸಲು 13 ಗ್ರಾಮ ಪಂಚಾಯತಿಗಳನ್ನು ಗುರುತಿಸಲಾಗಿದೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿ 1000 ಗ್ರಾಮ ಪಂಚಾಯತಿಗಳನ್ನು ಸಂಪೂರ್ಣ ಸಾಕ್ಷರತಾ ಗ್ರಾಮ ಪಂಚಾಯತಿಗಳೆಂದು ಘೋಷಣೆ ಮಾಡಿದ್ದಾರೆ. ಇದು 2 ವರ್ಷದ ಕಾರ್ಯಕ್ರಮವಾಗಿದೆ. ಧಾರವಾಡ ಜಿಲ್ಲೆಯ 38 ಗ್ರಾಮ ಪಂಚಾಯತಿಗಳ 28,900 ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವ ಗುರಿ ಹೊಂದಲಾಗಿದೆ.
ನವಭಾರತ ಸಾಕ್ಷರತಾ ಕಾರ್ಯಕ್ರಮದಡಿ ಪಟ್ಟಣ ಪಂಚಾಯತಿ, ಪುರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಕ್ಷರಸ್ಥ ಪೌರಕಾರ್ಮಿಕರು, ಮಾಜಿ ದೇವದಾಸಿಯರು, ತೃತೀಯ ಲಿಂಗದವರು, ನಿರಾಶ್ರಿತ ಅನಕ್ಷರಸ್ಥರು, ಕಾರಾಗೃಹದ ಅನಕ್ಷರಸ್ಥರು, ಕಟ್ಟಡ ಕೂಲಿ ಕಾರ್ಮಿಕರು, ಕೊಳಚೆ ಪ್ರದೇಶದ ನಿವಾಸಿಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ 20,070 ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವ ಗುರಿ ಹೊಂದಲಾಗಿದೆ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನದಂದು ಜಿಲ್ಲೆಯಾದ್ಯಂತ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು.
ಸಾಕ್ಷರತೆಯ ಹೆಚ್ಚಳವು ನಾಡಿನ ಅಭಿವೃದ್ಧಿಯಾಗಿದೆ. ಅಕ್ಷರ ಸಂಪತ್ತು ಅಕ್ಷಯ ಸಂಪತ್ತು. ಅನಕ್ಷರಸ್ಥರ ಋಣ ತೀರಿಸುವ ಹೊಣೆ ಕಲಿತವರದಾಗಿದೆ. ಕಳೆಯು ಬೆಳೆಗೆ ಹಾನಿಯಾದರೆ, ಅನಕ್ಷರತೆ ನಮ್ಮ ಬಾಳಿಗೆ ಹಾನಿಯುಂಟು ಮಾಡುತ್ತದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಶಿಕ್ಷಣವೆಂದರೆ ಬರಿ ಓದಲ್ಲಾ, ಕೇವಲ ಪುಸ್ತಕ ಜ್ಞಾನವೂ ಅಲ್ಲಾ. ಅದು ಮಾನವಿಯತೆಯ ವಿಕಾಸ. ಮನೆ ಬೆಳಗಲು ದೀಪ ಅವಶ್ಯವಿರುವಂತೆ ನಮ್ಮ ಮನ ಬೆಳಗಲು ಅಕ್ಷರ ಬೇಕು. ವಯಸ್ಕರ ಶಿಕ್ಷಣ ರಾಷ್ಟ್ರದ ಅಭ್ಯುದಯಕ್ಕೆ ಅತ್ಯಗತ್ಯ, ನಾವೆಲ್ಲ ಸಾಕ್ಷರ ಸಮಾಜ ನಿರ್ಮಿಸೋಣ ಅಕ್ಷರ ಸಂಸ್ಕೃತಿಯನ್ನು ಬೆಳೆಸೋಣ.
- ಎ.ಎ. ಖಾಜಿ
ಧಾರವಾಡ
- * * * -