ಲಿಂಕ್ ಮಾಡಿ ರಸಗೊಬ್ಬರ ತೆಗೆದುಕೊಳ್ಳುವಂತೆ ವ್ಯಾಪಾರಿ ಒತ್ತಾಯಿಸಿದ ಹಿನ್ನೆಲೆ ರೈತರ ಮತ್ತು ಮಾಲೀಕರ ನಡುವೆ ವಾಗ್ವಾದ
ಲೋಕದರ್ಶನ ವರದಿ
ಕಂಪ್ಲಿ 18: ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿರುವ ರಸಗೊಬ್ಬರ ಅಂಗಡಿ ವ್ಯಾಪಾರಸ್ಥರು ಎಫ್.ಐ.ಡಿ ಮೂಲಕ ರಸಗೊಬ್ಬರ ಖರೀದಿಸಲು ಅಂಗಡಿಗೆ ತೆರಳಿದ್ದ ರೈತನಿಗೆ ಇತರೆ ಉತ್ಪನ್ನ ಲಿಂಕ್ ಮಾಡಿ ತೆಗೆದುಕೊಳ್ಳುವಂತೆ ವ್ಯಾಪಾರಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರು ಮಾಲೀಕರ ನಡುವೆ ವಾಗ್ವಾದ ಬುಧವಾರ ಸಂಜೆ ನಡೆಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ವಿ.ವೀರೇಶ್ ಮಾತನಾಡಿ, ರಸಗೊಬ್ಬರಗಳ ಜೊತೆ ಅವಶ್ಯಕತೆ ಇಲ್ಲದ ಇತರೆ ಗೊಬ್ಬರಗಳ ಖರೀದಿಗೆ ಅಂಗಡಿ ಮಾಲೀಕರು ರೈತರನ್ನು ಒತ್ತಾಯಿಸುವಂತಿಲ್ಲ ಎಂದು ಸರ್ಕಾರದ ಆದೇಶವಿದೆ.
ಈ ಕುರಿತು ತಾಲ್ಲೂಕು ಆಡಳಿತ ಈಚೆಗೆ ಪಟ್ಟಣದಲ್ಲಿ ಅಂಗಡಿ ಮಾಲೀಕರ ಸಭೆ ನಡೆಸಿ ಎಚ್ಚರಿಕೆ ನೀಡಿದ್ದರೂ ಕಡೆಗಣಿಸಲಾಗುತ್ತಿದೆ. ರೈತರಿಗೆ ರಸಗೊಬ್ಬರವನ್ನು ಮಾರಾಟ ಮಾಡುವಾಗ ಲಿಂಕ್ಗೆ ಒತ್ತಾಯಿಸಿದ ರಸಗೊಬ್ಬರ ವ್ಯಾಪಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಗ್ರಾಮದ ವೀರಾರೆಡ್ಡಿ ಎಂಬ ರೈತ ರಸಗೊಬ್ಬರ ಖರೀದಿಸಲು ತೆರಳಿದಾಗ ಇತರೆ ಉತ್ಪನ್ನ ಖರೀದಿಸಬೇಕು ಎನ್ನುವುದರ ಜೊತೆಗೆ ಕೃಷಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತು ನಮ್ಮ ಬಳಿ ವಿಡಿಯೋ ತುಣುಕು ಇದ್ದು, ಅಧಿಕಾರಿಗಳು ಪರೀಶೀಲಿಸಿ ವ್ಯಾಪಾರಿ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟ ಹಮ್ಮಿಕೊಳ್ಳುಲಾಗುವುದು ಎಂದು ಒತ್ತಾಯದ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಮಾತನಾಡಿ, 'ವ್ಯಾಪಾರಿಗಳು ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡುತ್ತಿರುವುದು ಒಂದೆಡೆಯಾದರೆ, ಕಳಪೆ ಗೊಬ್ಬರ ಮಾರಾಟದ ಆರೋಪ ಕೇಳಿಬರುತ್ತಿರುವುದರಿಂದ ಏಕಾಏಕಿ ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಸಗೊಬ್ಬರ ವ್ಯಾಪಾರಿ ರಾಮಕೃಷ್ಣ ರಾಜು ಮಾತನಾಡಿ, ಯೂರಿಯಾ ಗೊಬ್ಬರ ಜೊತೆಗೆ ನಮಗೂ ಇತರೆ ಉತ್ಪನ್ನ ಲಿಂಕ್ ಮಾಡಿ ಕಂಪನಿಯವರು ಪೂರೈಸಿದ್ದಾರೆ. ಆದರೂ ರೈತರ ಮನವೊಲಿಸಿ ಲಿಂಕ್ ಮಾಡಿ ರಸಗೊಬ್ಬರ ಮಾರಾಟ ಮಾಡುತ್ತೇವೆ. ಯಾವುದೇ ಕಾರಣಕ್ಕೂ ರೈತರನ್ನು ಲಿಂಕ್ಗೆ ಒತ್ತಾಯಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು.