ಲಿಂಗಾಯತರು ಹಾಗೂ ಬಸವಣ್ಣನ ಇಷ್ಟಲಿಂಗ ತಂತ್ರಜ್ಞಾನ
12ನೇ ಶತಮಾನದಲ್ಲಿ ಬಸವಣ್ಣನವರು ಸಂಶೋಧಿಸಿ ತಯಾರಿಸಿದ ಇಷ್ಟಲಿಂಗ ತಂತ್ರಜ್ಞಾನವು ಮನುಷ್ಯನ ಆತ್ಮದ ರಹಸ್ಯ ಹಾಗೂ ಈ ಬ್ರಹ್ಮಾಂಡದ ರಹಸ್ಯ ಅರಿಯಲು ನೀಡಿದ ಸಹಜ ಸರಳವಾದ ತಂತ್ರಸಾಧನೆ. ಅದನ್ನು ಕಡ್ಡಾಯವಾಗಿ ಎದೆಯ ಮೇಲೆ ಧರಿಸುವುದರ ಜೊತೆ ದಿನನಿತ್ಯ ಲಿಂಗ ನೀರಿಕ್ಷೆ ಮಾಡುವುದು ಲಿಂಗಾಯತ ಧರ್ಮದ ಅಡಿಪಾಯ. ಇಷ್ಟಲಿಂಗದ ಸಂಶೋಧನೆಯಿಂದಾಗಿಯೇ ಬಸವಣ್ಣನವರಿಗೆ ನಿರಾಕಾರ ಶಿವನ ಅಸ್ತಿತ್ವ ಅರಿಯಲು ಸಾಧ್ಯವಾಯಿತು. ಇಷ್ಟಲಿಂಗವೇ ಲಿಂಗಾಯತ್ ಧರ್ಮ ಸ್ಥಾಪನೆಗೆ ಮೂಲ ಕಾರಣವಾಯಿತು. ಆದರೆ ಲಿಂಗಾಯತ ಧರ್ಮದ ಆಧುನಿಕ ಯುವ ಪೀಳಿಗೆ ಶರೀರದ ಮೇಲೆ ಕಡ್ಡಾಯವಾಗಿ ಲಿಂಗ ಧರಿಸಲು ಹಿಂದೇಟು ಹಾಕುತ್ತಿದ್ದಾರೆಯೇ? ಆಧುನಿಕ ವಿಜ್ಞಾನ ತಂತ್ರಜ್ಞಾನದ ಈ ವಿಚಿತ್ರವಾದ ಜಗತ್ತಿನಲ್ಲಿ ನಮ್ಮ ಧಾರ್ಮಿಕ ರೂಢಿಗಳು ಯುವ ಪೀಳಿಗೆಯಲ್ಲಿ ಸ್ಥಗಿತಗೊಂಡಿವೆಯೇ? ಶೈಕ್ಷಣಿಕವಾಗಿ ಮುಂದುವರಿದ ಲಿಂಗಾಯತ ಯುವ ಪೀಳಿಗೆ ಇಷ್ಟಲಿಂಗ ಶಿವಯೋಗ ಅರಿಯುವ ಅವಶ್ಯಕತೆಯಿದೆ. ಹಣೆಯ ಮೇಲೆ ವಿಭೂತಿ ಧರಿಸಲು ಸಹ ನಾಚುತ್ತಿರುವ ನಗರದ ಯುವಕರಿಗೆ ಇಷ್ಟಲಿಂಗ ಪೂಜೆಯ ಸತ್ಯಾಸತ್ಯತೆ, ಅದರ ವೈಜ್ಞಾನಿಕ ಮಹತ್ವ ಕುರಿತು ಜಾಗೃತಿ ಮೂಡಿಸುವ ಅಗತ್ಯತೆಯಿದೆ.
12ನೇ ಶತಮಾನದಲ್ಲಿ ದೇವರನ್ನು ಕಾಣುವ ಮಾರ್ಗವನ್ನು, ಆತ್ಮದ ಶಕ್ತಿಯ ಹಾಗೂ ಬ್ರಹ್ಮಾಂಡದ ರಹಸ್ಯ ಅರಿಯಲು ಬಸವೇಶ್ವರರು ಈ ಇಷ್ಟಲಿಂಗ ತಂತ್ರಜ್ಞಾನವನ್ನು 12 ವರ್ಷಗಳ ಸತತ ಸಂಶೋಧನೆಯಿಂದ ತಯಾರಿಸಿದರು.
ಕರ್ನಾಟಕದಲ್ಲಿ ಲಿಂಗಾಯತರ ಸಂಖ್ಯೆ ಅತೀ ಹೆಚ್ಚು. ಆಧುನಿಕ ದಿನಮಾನಗಳಲ್ಲಿ ಇಷ್ಟಲಿಂಗದ ಜ್ಞಾನ ಇದರ ವೈಜ್ಞಾನಿಕತೆ ಬಗ್ಗೆ ಬಹುತೇಕ ಲಿಂಗಾಯತರಲ್ಲಿ ಅರಿವು ಕಡಿಮೆ. ಇಷ್ಟಲಿಂಗ ಒಂದು ಶಕ್ತಿಶಾಲಿ ತಂತ್ರಜ್ಞಾನವೆಂಬ ಅರಿವು ಲಿಂಗಾಯತರಲ್ಲಿ ಹೆಚ್ಚು ಜಾಗೃತಗೊಳ್ಳಬೇಕಿದೆ. ಲಕ್ಷಾಂತರ ಲಿಂಗಾಯತ ಜನರು ಹೆಚ್ಚಿನ ಶಿಕ್ಷಣ ಪಡೆದವರಿದ್ದಾರೆ. ವೈದ್ಯರಿದ್ದಾರೆ. ಇಂಜೀನೀಯರಗಳು, ಪ್ರಾಧ್ಯಾಪಕರು ಇದ್ದಾರೆ. ಆದರೆ ಇಷ್ಟಲಿಂಗವನ್ನು ಪ್ರತಿದಿನ ನೀರೀಕ್ಷೆ ಮಾಡುವವರ ಸಂಖ್ಯೆ ತೀರ ಕಡಿಮೆ. ಕನಿಷ್ಟ ಅರ್ಧಗಂಟೆ ಇಷ್ಟಲಿಂಗ ಶಿವಯೋಗ ಮಾಡಬೇಕಾಗುತ್ತದೆ. ಆಧುನಿಕ ವಿಜ್ಞಾನಿಗಳು ತಮ್ಮ ಜ್ಞಾನವನ್ನು ಅತೀ ಸೂಕ್ತವಾದ ಪ್ರಯೋಗ, ಸೂಕ್ಷ್ಮ ತರಂಗಗಳು, ವಿಕಿರಣಗಳ ಸಾಮೂಹಿಕ ಪ್ರಯತ್ನದ ಮೂಲಕ ಪಡೆದರೆ ಶಿವಯೋಗಿಗಳು, ಅನುಭಾವಿಗಳು ಇಷ್ಟಲಿಂಗದ ನೀರೀಕ್ಷೆಯ ಮೂಲಕ ಅನುಸಂಧಾನ ಹಾಗೂ ಅಂತರಂಗದ ರಹಸ್ಯ ಅರಿಯುತ್ತಾರೆ. ವೈಜ್ಞಾನಿಕ ಪ್ರಯೋಗಗಳನ್ನು ಯಾರೂ ಬೇಕಾದರೂ ಪುನರಾವರ್ತಿಸಬಹುದು. ಆದರೆ ಅಲೌಕಿಕ ಅನುಭವಗಳು ಕೆಲವೇ ಸಾಧಕರಿಗೆ ಕೆಲವೇ ಸಂದರ್ಭಗಳಲ್ಲಿ ಉಂಟಾಗುವವು. ಯಾರಲ್ಲಿ ಈ ಜ್ಞಾನ-ವಿಜ್ಞಾನ ಸಮಸ್ಥಿತಿಯಲ್ಲಿ ಅರಿತು ಶಿವಯೋಗ ಸಾಧನೆ ಮಾಡುವರೋ ಅವರಿಗೆ ಶಿವಲೀಲೆಗಳು, ಅನುಭಾವಗಳು ಉಂಟಾಗುವವು.
ಆಧುನಿಕ ಕಾಲದ ವೈಜ್ಞಾನಿಕ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಷ್ಟಲಿಂಗದ ಮಹತ್ವ, ತಾತ್ವಿಕ ವಿವೇಚನೆ ಹಿಂದಿಗಿಂತಲೂ ಈಗ ಹೆಚ್ಚು ಸತ್ವಯುತವಾಗಬೇಕಾದ ಅನಿವಾರ್ಯತೆ
ಇದೆ. ಲಿಂಗಾಯತ ಸಮಾಜದ ಹಾಗೂ ವೀರಶೈವ ಸಮಾಜದ ಪದ್ಧತಿಗಳು ಬೇರೆ ಬೇರೆಯಾಗಿರುವ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ. ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಜೋರಾಗಿ ಕೇಳಿ ಬಂದಿದೆ. ಲಿಂಗವಂತ ಸಮಾಜದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರಸ್ಥಾನಗಳಲ್ಲಿ ಇಷ್ಟಲಿಂಗ ನೀರೀಕ್ಷೆ ಹಾಗೂ ಅದರ ವೈಜ್ಞಾನಿಕ ಮಹತ್ವ ಹೆಚ್ಚು ಹೆಚ್ಚು ಪ್ರಚಾರಗೊಳ್ಳಬೇಕಿದೆ. ವೈಜ್ಞಾನಿಕ ತಳಹದಿಯಲ್ಲಿ ಲಿಂಗ ತತ್ವವನ್ನು ಅರಿಯಲು ವಿಜ್ಞಾನದ ವಿವಿಧ ಕ್ಷೇತ್ರಗಳ ಪರಿಣಿತರು ಒಟ್ಟಿಗೆ ಸೇರಿ ಸಂಶೋಧನೆ, ಚಿಂತನ-ಮಂಥನ, ಪ್ರಾತ್ಯಕ್ಷಿಕೆ ಕಾರ್ಯಾಗಾರಗಳನ್ನು ಮಾಡಬೇಕಿದೆ. ಇಷ್ಟಲಿಂಗ ನಿರ್ಮಾಣಕ್ಕೆ ಬಳಸುವ ಸಂಘಟಿಕ ವಸ್ತುಗಳು, ಅಷ್ಟಬಂಧಿಗಳನ್ನು ರಾಸಾಯನಶಾಸ್ತ್ರ ಭೌತಶಾಸ್ತ್ರದ ಪ್ರಯೋಗ ಶಾಲೆಗಳಲ್ಲಿ ಅತ್ಯಾಧುನಿಕ ಉಪಕರಣಗಳನ್ನು ಬಳಸಿ, ವಿಶ್ಲೇಷಣಗೊಳಿಸಿ ಅವುಗಳ ವೈಜ್ಞಾನಿಕ ಶಕ್ತಿಗಳನ್ನು ಸಾಬೀತುಗೊಳಿಸಬೇಕಿದೆ.
ಕ್ಷ-ಕಿರಣ, ನೇರಳಾತೀತ ಕಿರಣ, ರಕ್ತವರ್ಣಾತೀತ ಸ್ಪೆಕ್ಟ್ರಮ್, ಎಲೆಕ್ಟ್ರಾನ್ ವಿವರ್ತನ, ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳನ್ನು ಬಳಸಬೇಕಿದೆ. ಜ್ಯೋತಿ ಭೌತಶಾಸ್ತ್ರ, ಉಷ್ಣ ಚಲನಶಾಸ್ತ್ರ ಅಂತರಿಕ್ಷೆ ಭೂ-ಭೌತಶಾಸ್ತ್ರ ಮತ್ತು ಭೂರಾಸಾಯನಶಾಸ್ತ್ರ ವಿಭಾಗಗಳ ಪರಿಣಿತರನ್ನು ಸಹ ಇಷ್ಟಲಿಂಗ ತಂತ್ರಜ್ಞಾನದಲ್ಲಿ ತೊಡಗಿಸಿಕೊಳ್ಳಬೇಕಿದೆ. ಇಂಥ ಬಹುಮುಖಿಯ ವೈಜ್ಞಾನಿಕ ಅಧ್ಯಯನದಿಂದಾಗಿ ಈ ತಂತ್ರಜ್ಞಾನದ ಶಕ್ತಿ ಆಧುನಿಕ ಜಗತ್ತಿಗೆ ಪರಿಚಯಿಸಬೇಕಿದೆ. ಇಷ್ಟಲಿಂಗದಲ್ಲಿ ಅಳವಡಿಸಲಾಗುವ ಪಾಣಿಪೀಠ ಲಿಂಗಗಳನ್ನು ಕಾಂತಶಿಲೆ, ಚಂದ್ರಕಾಂತ ಶಿಲೆ, ಸೂರ್ಯಕಾಂತ ಶಿಲೆಗಳಲ್ಲಿ ಸರಿಯಾದ ರೀತಿಯಲ್ಲಿ ರೂಪಿಸಲು ಕಾರ್ಯಾಗಾರಗಳ ಕಮ್ಮಟಗಳು ನಡೆಸಬೇಕು. ಈ ರೀತಿ ವೈಜ್ಞಾನಿಕ ತಳಹದಿಯ ಮೇಲೆ ನಿರ್ಮಾಣಗೊಂಡ ಇಷ್ಟಲಿಂಗಗಳನ್ನು ಆಧುನಿಕ ಉಪಕರಣಗಳಿಂದ ಪರೀಕ್ಷಿಸಿ ವಿಶ್ಲೇಷಿಸಿ ದೇಹದ ಮೇಲೆ ಹಾಗೂ ಇಷ್ಟಲಿಂಗವನ್ನು ಧರಿಸಿ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು ಪರೀಶೀಲಿಸಲು ವಿಶ್ವವಿದ್ಯಾಲಯಗಳಲ್ಲಿ ಮಾಡಿರುವ ಕಾರ್ಯಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಿದೆ. ತುಪ್ಪದ ಕಂತೆ ಕಟ್ಟುವ ಪ್ರಮಾಣಿತ ಕ್ರಾಂತಿಕಾರರಿಗೆ ವೈಜ್ಞಾನಿಕ ತರಬೇತಿ ನೀಡುವ ಕಾರ್ಯ ಆಗಬೇಕಿದೆ.
ಲಿಂಗಾಯತರೆಂದು ಹೇಳಿಕೊಳ್ಳುವ ಬಹಳಷ್ಟು ಜನರು ಧರ್ಮ ಜೀವನ ಸ್ವರೂಪವಾದಿ ಇಷ್ಟಲಿಂಗವನ್ನು ಧರಿಸಿ ಇಷ್ಟಲಿಂಗ ನೀರೀಕ್ಷೆ ನಡೆಸುತ್ತಿಲ್ಲ. ಮತ್ತೆ ವಿದ್ಯಾವಂತರೆನಿಸಿಕೊಂಡಿರುವ ಲಕ್ಷಾಂತರ ಜನ ಲಿಂಗಾಯತರು, ವೈದ್ಯರು, ಇಂಜೀನೀಯರ್ಗಳು ಸಹ ಇಷ್ಟಲಿಂಗ ನೀರೀಕ್ಷೆ ಮಾಡುತ್ತಿಲ್ಲ. ತಾಸುಗಟ್ಟಲೇ ಬಸವಣ್ಣನವರ ತತ್ವ ಸಿದ್ಧಾಂತ ವಚನಗಳ ಬಗ್ಗೆ ಮಾತನಾಡುವವರಲ್ಲಿ ಕೆಲವರು ಇಷ್ಟಲಿಂಗ ಧರಿಸಿಕೊಳ್ಳದಿರುವ ಉದಾಹರಣೆಗಳಿವೆ. ಬಹುತೇಕ ಲಿಂಗಾಯತರು ಧರಿಸಿಕೊಂಡವರು ಲಿಂಗ ನೀರೀಕ್ಷೆ ಸಹ ಮಾಡುವುದಿಲ್ಲ. ಇಷ್ಟಲಿಂಗ ತಯಾರಿಸಲು ಬಸವೇಶ್ವರರು 12 ವರ್ಷಗಳ ಕಾಲ ಸಂಶೋಧನೆ ಮಾಡಿದ್ದು ಸತ್ಯ. ಈ ಲಿಂಗ ವಿವಿಧ ರೀತಿಯ ಪ್ರಯೋಗಗಳಡಿಯಲ್ಲಿ ಹಾದು ಕೊನೆಯಲ್ಲಿ ಸತ್ಯವಾದ ನಿಖರವಾದ ತಂತ್ರಜ್ಞಾನವನ್ನು ಬಸವೇಶ್ವರರು ಸಾಬೀತು ಮಾಡಿದ್ದಾರೆ.
ಇಷ್ಟಲಿಂಗ ತಯಾರಿಸಲು ಬಳಸುವ ಅಷ್ಟಬಂಧಿಗಳು ಎಂಟು ಬಗೆಯ ವಸ್ತುಗಳನ್ನು ಈಗಲೂ ಸರಿಯಾದ ಪ್ರಮಾಣದಲ್ಲಿ ಬಳಸಿ ತಯಾರಿಸುತ್ತಿರುವ ಬೆಳಗಾವಿಯ ವಿಜ್ಞಾನಿ ಅರವಿಂದ ಪಾರುಶೆಟ್ಟಿ ಅವರು ಕಳೆದ ಐದಾರು ವರ್ಷಗಳಲ್ಲಿ ಸಾವಿರಾರು ಇಷ್ಟಲಿಂಗಗಳನ್ನು ವಿತರಿಸಿದ್ದಾರೆ. ಈ ಲಿಂಗಗಳಿಂದಾದ ಅನುಭವಗಳನ್ನು ಸಹ ದಾಖಲಿಸಿದ್ದಾರೆ. ಹೊಸಪೇಟೆಯ ಖ್ಯಾತ ಮನೋವೈದ್ಯರಾದ ಡಾ.ವಿಜಯಕುಮಾರ ಹಾಗೂ ಡಾ.ಅರವಿಂದ ಪರುಶೆಟ್ಟಿ ಅವರು ಹೊಸಪೇಟೆಯಲ್ಲಿ ಇಷ್ಟಲಿಂಗ ಕುರಿತು ಅನೇಕ ರೀತಿಯಲ್ಲಿ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಿನ ವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಇಷ್ಟಲಿಂಗ ತಂತ್ರಜ್ಞಾನದ ಸ್ವರೂಪವನ್ನು ವೈಜ್ಞಾನಿಕವಾಗಿ ಸ್ಪಷ್ಟವಾಗಿ ಸಾಬೀತುಪಡಿಸಲು ತಪ್ಪಿದಲ್ಲಿ ನಮ್ಮ ಇಂದಿನ, ಮುಂದಿನ ಪೀಳಿಗೆಗಳಲ್ಲಿ ಲಿಂಗಾಯತ ಧರ್ಮಾಚರಣೆಗಳೆಲ್ಲವೂ ಕುರುಡು ನಂಬಿಕೆಯಾಗಿ ಅರ್ಥಹೀನವೆನಿಸಬಹುದಾಗಿದೆ.
ಆಧುನಿಕ ಜಗತ್ತು ಹೊಸ ಹೊಸ ತಂತ್ರಜ್ಞಾನಗಳ ಜೊತೆ ಸಾಗುತ್ತಿರುವಾಗ ವೈಜ್ಞಾನಿಕ ಹಿನ್ನಲೆಯಲ್ಲಿ ಇಷ್ಟಲಿಂಗದ ತಂತ್ರಜ್ಞಾನವನ್ನು ಈಗಿನ ಯುವಪೀಳಿಗೆಯಲ್ಲಿ ಪರಿಚಯಿಸುವ ಅಗತ್ಯವಿದೆ. ಇಷ್ಟಲಿಂಗದಲ್ಲಿ ಕಾರ್ಬನ್ ಹಾಗೂ ಸಿಲಿಕಾನ್ ಈ ಎರಡು ಮೂಲವಸ್ತುಗಳ ಸಂಬಂಧವನ್ನು ತಿಳಿದುಕೊಳ್ಳಬೇಕಿದೆ. ಇವುಗಳನ್ನು ನಿರವಯ ಹಾಗೂ ಸಾವಯಾವ ಎನ್ನಬಹುದು. ಶಿವ ಹಾಗೂ ಶಕ್ತಿಗೆ ಹೋಲಿಸಬಹುದು. ಪರೀಪೀಠಲಿಂಗದ ಸಂಯುಕ್ತ ಸಿಲಿಕಾನ್ ಹಾಗೂ ಹೊರಗಿನ ಕಾರ್ಬನ್ ಕಂಟಿಯು ಶಿವ-ಶಕ್ತಿಗಳಂತೆ ಬೀಜವೃಕ್ಷ ನ್ಯಾಯದಂತೆ ನಿರವಯಾವ-ಸಾವಯಾವ ನಿರಾಕಾರ-ಸಾಕಾರಗಳ ಪೂಜಾತಂತ್ರವಾಗಿದೆ.
ಇಷ್ಟಲಿಂಗಕ್ಕೆ ಕಪ್ಪಾದ ಇಂಗಳಿಕಯುಕ್ತ ಹಾಗೂ ತುಪ್ಪದ ಕಂತಿಯ ಕವಚ ದೃಷ್ಟಿಯೋಗದಲ್ಲಿ ಹೆಚ್ಚಿನ ಪರಿಣಾಮಕಾರಿಯಾಗಿದೆ. ಇದು ತ್ರಾಟಕ ಯೋಗದಲ್ಲಿಯೂ ಉತ್ತಮ ಫಲಕಾರಿಯಾಗಿದೆ. ಈ ಇಷ್ಟಲಿಂಗದ ಅಂತರ್ಗತ ಸಿಲಿಕಾನ್ ಹಾಗೂ ಕಾರ್ಬನ್ ಮಾನವನ ದೇಹದ ಎರಡು ಮಹತ್ವದ ಅಂಶಗಳು ಶಿವ-ಶಕ್ತಿ ಮೇಳೈಸಿದಂತೆ ಸಿಲಿಕಾನ್ ಕಾರ್ಬನ್ಗಳ ಒಟ್ಟು ಪರಿಣಾಮವು ಇಷ್ಟಲಿಂಗ ಶಿವಯಾಗದ ಫಲಕಾರಿಯಾಗಿ ಮನಸ್ಸನ್ನು ನಿಗ್ರಹಿಸುತ್ತವೆ. ದೃಷ್ಟಿಯಾಗದಿಂದ ಮನಸ್ಸಿನ ಕೇಂದ್ರಿಯ ನರಮಂಡಲ ವ್ಯೂಹದ ಮೇಲೆ ಹಿಡಿತ ಸಾಧಿಸಿ ಮೆದುಳಿನಲ್ಲಿರುವ ಪಿನಿಯನಲ್ ಗ್ರಂಥಿಯು ಮೆಲಾಥಿನ್ ಎಂಬ ಅಮೃತವನ್ನು ಸೃವಿಸಿ ಕುಂಡಲಿನ ಶಕ್ತಿಯ ಆರು ಚಕ್ರಗಳು ಜಾಗೃತವಾಗಿ ಸಾಧಕನು ತ್ರಿಕಾಲ ಜ್ಞಾನಿಯಾಗುತ್ತಾನೆ. ಆತ್ಮದ ಹಾಗೂ ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಯುತ್ತಾ ತನ್ನ ನೆಲೆಯನ್ನು ಕಂಡುಕೊಳ್ಳುತ್ತಾನೆ.
ಈ ಅಷ್ಟಬಂಧಿಗಳು ಓಷಧಿಯ ಗುಣಗಳನ್ನು ಹೊಂದಿದ್ದು ದೇಹದ ಮೇಲೆ ಪರಿಣಾಮ ಬೀರುತ್ತವೆ. ಗೇರು, ಶಿಲಾರಸ, ಇಂಗಳೇಕ, ರಾಳ, ಅರಗು, ರುಮಾ-ಮಸ್ತಕಿ, ಅಂಜನ, ಚಂದ್ರಕಾಂತ ಶಿಲೆ, ಸೂರ್ಯಕಾಂತ ಶಿಲೆಗಳನ್ನು ಸರಿ ಪ್ರಮಾಣದಲ್ಲಿ ಹಾಕಿ ಇಷ್ಟಲಿಂಗ ನಿರ್ಮಿಸಲಾಗುತ್ತಿದೆ ಎನ್ನುತ್ತಾರೆ ಡಾ.ಅರವಿಂದ ಪರುಶೆಟ್ಟಿ.
ಆಧುನಿಕ ಜಗತ್ತಿನ ತಂತ್ರಜ್ಞಾನದಲ್ಲಿ ಸಿಲಿಕಾನ್ ಹೆಚ್ಚಿನ ಮಹತ್ವ ಪಡೆದಿದೆ. ಆದರೆ ಬಸವಣ್ಣನವರು 12 ನೇ ಶತಮಾನದಲ್ಲಿ ಈ ಸಿಲಿಕಾನ್ ಮಹತ್ವ ಅರಿತು ಇಷ್ಟಲಿಂಗದಲ್ಲಿ ಹಾಕಿದ್ದಾರೆ. ಭೂಮಿಯಲ್ಲಿ 26 ಪ್ರತಿಶತಃ ಭಾಗ ಈ ಮೂಲವಸ್ತು ಇದೆ. ಇದು ನರಮಂಡಲದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಇದು ನಿರವಯಾನ, ಶಿವನ ಸ್ವರೂಪವಾಗಿದೆ. ಕಾರ್ಬನ್ ಸಾವಯವ ವಸ್ತು ಇಷ್ಟಲಿಂಗದ ಹೊರಗಿನ ಕಂಟಿ ಕವಚ. ಇದು ಶಕ್ತಿಯ ರೂಪವಾಗಿದೆ.
ರಾತ್ರಿ 12 ಗಂಟೆಯಿಂದ ಬೆಳಿಗ್ಗೆ 6 ಗಂಟೆಯ ಒಳಗೆ ಇಷ್ಟಲಿಂಗ ಶಿವಯೋಗ ನಡೆಸಲು ಸೂಕ್ತ ಸಮಯವೆಂದು ಶರಣರು ತಮ್ಮ ವಚನದಲ್ಲಿ ತಿಳಿಸಿದ್ದಾರೆ. ಗಾಂಧಾರಿ ಮಾಂಧಾರಿ ಎಂಬ ಅಹೋ ರಾತ್ರಿಯಲ್ಲಿ ಲಿಂಗಪೂಜೆ ಕೈಗೊಳ್ಳಬೇಕೆನ್ನುತ್ತಾರೆ. ಹಗಲೊಂದು ಸತ್ಯ, ರಾತ್ರಿಯೊಂದು ಸತ್ಯ, ಈ ಕತ್ತಲು ಬೆಳಕಿನ ಆಟದ ರಹಸ್ಯವೇ ಈ ಜಗತ್ತಿನ ವಿಸ್ಮಯ. ಬೆಳಿಗ್ಗೆ 3 ರಿಂದ 6 ರ ಒಳಗೆ ಈ ಬ್ರಹ್ಮಾಂಡದಲ್ಲಿ ವಿಚಿತ್ರವಾದ ವಿಸ್ಮಯಗಳು ನಡೆಯುತ್ತವೆ. ತಾರಾಮಂಡಲ, ಗ್ಯಾಲಕ್ಸಿಯಿಂದ ಶಕ್ತಿಯುತವಾದ ಎಲೆಕ್ಟ್ರಾನ್ಗಳು ಸೂಕ್ಷ್ಮ ತರಂಗಗಳು ಭೂಮಿಗೆ ಬೀಳುತ್ತಿರುತ್ತವೆ. ಈ ಸಮಯದಲ್ಲಿ ಇಷ್ಟಲಿಂಗ ನೀರೀಕ್ಷೆ ಮಾಡುವುದರಿಂದ ಈ ಕಪ್ಪು ಕಾಂತಿಯ ಲಿಂಗವು ಈ ಶಕ್ತಿಯುತವಾದ ತರಂಗಗಳನ್ನು ಹೀರಿಕೊಂಡು ನಮ್ಮ ಕಣ್ಣಿನ ದೃಷ್ಟಿಯ ಮೂಲಕ ಮಿದುಳಿಗೆ ತಲುಪಿ ಇಡೀ ನರವ್ಯೂಹ ಮಂಡಲಕ್ಕೆ ಶಕ್ತಿ ತಲುಪಿಸುತ್ತದೆ. ಈ ಬೆನ್ನು ಹುರಿಯಲ್ಲಿಯ ಕುಂಡಲಿನ ಶಕ್ತಿ ಸಪ್ತ ಚಕ್ರಗಳು ಜಾಗೃತಗೊಳ್ಳಲು ಆರಂಭಿಸುತ್ತವೆ. ಇದರಿಂದ ಸಾಧಕನು ಶರೀರವು ಸದಾ ಜಾಗೃತಗೊಂಡು ಶಕ್ತಿಯುತವಾಗುತ್ತದೆ. ಹೀಗಾಗಿಯೇ ಶರಣರು ತಮ್ಮ ಚೈತನ್ಯವನ್ನು ಅರಿತವರು.
ಓಂ ನಮ: ಶಿವಾಯ ಈ ಬೀಜಮಂತ್ರ ಅತೀ ಶಕ್ತಿಯುತವಾದ ಮಹಾಮಂತ್ರವೆಂದು ಭಾರತದಲ್ಲಿ ಲಕ್ಷಾಂತರ ವರ್ಷಗಳಿಂದ ಸಾಬೀತು ಮಾಡಲಾಗಿದೆ. ಇಷ್ಟಲಿಂಗ ಶಿವಯೋಗದ ಸಮಯದಲ್ಲಿ ಲಿಂಗನೀರೀಕ್ಷೆಯ ಜೊತೆಗೆ ಓಂ ನಮ: ಶಿವಾಯ ಮಂತ್ರೋಚ್ಚಾರಣೆ ಸಹ ಬಹಳ ಪರಿಣಾಮಕಾರಿ. ಎಡಗೈಯಲ್ಲಿ ಇಷ್ಟಲಿಂಗವನ್ನಿಟ್ಟು ನೀರೀಕ್ಷೆ ಮಾಡಬೇಕು. ನಮ್ಮ ಕಣ್ಣಿನ ದೃಷ್ಟಿ ಹಾಗೂ ಲಿಂಗದ ನಡುವೆ ಯಾವುದೇ ಹೂವುಗಳನ್ನು, ಬಿಲ್ವ ಪತ್ರೆಗಳನ್ನು ಇಡಬಾರದು. ದೃಷ್ಟಿಯೋಗ ನಿರಂತರವಾಗಬೇಕಾದಲ್ಲಿ ಯಾವುದೇ ರೀತಿಯ ಅಡೆತಡೆಗಳು ಇರಬಾರದು. ಎಡಗೈ, ಕಣ್ಣು, ಹೃದಯ ಹಾಗೂ ಮಿದುಳಿನ ಈ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಆಧುನಿಕ ವಿಜ್ಞಾನ ಸಹಾಯಕವಾಗುತ್ತದೆ.
ಇಷ್ಟಲಿಂಗ ಶಿವಯೋಗವು ಒಂದು ಶಕ್ತಿಯುತವಾದ ತಂತ್ರಜ್ಞಾನವೆನ್ನುವುದನ್ನು ಶರಣರ ಶಿವಯೋಗಿಗಳು ಸಾಬೀತುಪಡಿಸಿದ್ದಾರೆ. ಆಧುನಿಕ ಲಿಂಗಾಯತ ಯುವ ಪೀಳಿಗೆ ಈ ವೈಜ್ಞಾನಿಕತೆಯ ದೃಷಿಯಿಂದ ಇಷ್ಟಲಿಂಗವನ್ನು ಅರಿತು ದಿನನಿತ್ಯ ಶಿವಯೋಗ ಕೈಗೊಂಡಲ್ಲಿ ಆತ್ಮದ ಶಿವಲೀಲೆಗಳನ್ನು, ಚಮತ್ಕಾರಗಳನ್ನು ಅನುಭವಿಸಬಹುದಾಗಿದೆ.
ಭಾರತದಲ್ಲಿ ಸಾವಿರಾರು ವರ್ಷಗಳಿಂದ ಈ ಬ್ರಹ್ಮಾಂಡದ ರಹಸ್ಯ ವಿಸ್ಮಯಗಳ ಬಗ್ಗೆ ಅರಿಯಲು ನಮ್ಮ ಹಲವಾರು ಯೋಗಿಗಳು, ಸಂತರು, ಋಷಿಮುನಿಗಳು,
ಶಿವಶರಣರು ಕಾಲಕಾಲಕ್ಕೆ ನೂರಾರು ರೀತಿಯ ಸಾಧನಾ ಮಾರ್ಗಗಳನ್ನು ತೋರಿಸಿದ್ದಾರೆ.
ಅಂತೆಯೇ ಭೌತಿಕ ಹಾಗೂ ಅಭೌತಿಕ ಸತ್ಯಾಸತ್ಯತೆಗಳನ್ನು ಆತ್ಮದ ಹಾಗೂ ಬ್ರಹ್ಮಾಂಡದ ರಹಸ್ಯಗಳನ್ನು ಅರಿತಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನಿಗಳ ಸಾಧನೆ ಅಪ್ರತಿಮವಾದದ್ದು. ಖಗೋಳ ವಿಜ್ಞಾನಿಗಳು ಬಾಹ್ಯಾಕಾಶದಲ್ಲಿ ನಡೆಯುವ ವಿಸ್ಮಯಗಳನ್ನು ಈಗ ನಮ್ಮೆದುರಿಗೆ ಬಿಚ್ಚಿಡುತ್ತಿದ್ದಾರೆ.
ಅಮೇರಿಕದ ನಾಸಾ ವಿಜ್ಞಾನಿಗಳು ಪ್ರತಿದಿನ ಕ್ಷಣ ಕ್ಷಣಕ್ಕೂ ಕೂತುಹಲಕಾರಿ ಅಂಶಗಳನ್ನು ಸಾಕ್ಷಿಗೊಳಿಸುತ್ತಿದ್ದಾರೆ. ಯೋಗದಲ್ಲಿ ಬಲ್ಲಿದರಾದ ಶಿವಶರಣರು, ಮಹಾತ್ಮರು ತಮ್ಮ ದಿವ್ಯಜ್ಞಾನ, ದಿವ್ಯದೃಷ್ಟಿಗಳಿಂದ ಶತಮಾನಗಳ ಹಿಂದೆಯೇ ಸೂರ್ಯ, ಚಂದ್ರ, ಭೂಮಿ ಸೇರಿದಂತೆ ಅನ್ಯಗ್ರಹಗಳು, ವಿವಿಧ ಗ್ಯಾಲಕ್ಷಿಗಳ ಬಗ್ಗೆ ಭಯಾನಕ ಘಟನೆಗಳ ಬಗ್ಗೆ ಕಾಲಜ್ಞಾನದ ಮೂಲಕ ತಿಳಿಸಿದ್ದಾರೆ. ಆಧುನಿಕ ವಿಜ್ಞಾನಿಗಳ ಪ್ರಕಾರ ಈ ಆಕಾಶದಲ್ಲಿ ಸುಮಾರು ಇಪ್ಪತ್ತು ಸಾವಿರ ಕೋಟಿ ಸೂರ್ಯರನ್ನೊಳಗೊಂಡ ಒಂದು ತಾರಾಮಂಡಲವು (ಗ್ಯಾಲಕ್ಷಿ) ಅಂತಹ ತಾರಾಮಂಡಲಗಳು ಸುಮಾರು ಹತ್ತು ಲಕ್ಷ ಕೋಟಿ ಕೋಟಿಗಳಷ್ಟಿವೆ. ಬೆಳಕಿನ ವೇಗದಲ್ಲಿ ಕೋಟ್ಯಾಂತರ ವರ್ಷಗಳು ಹೋದವು. ಅದೆಷ್ಟೋ ಯುಗಗಳು ಕಳೆದವು. ಈ ಬ್ರಹ್ಮಾಂಡದ ನಿಗೂಢ ರಹಸ್ಯ ಅರಿಯಲು ವಿಜ್ಞಾನಿಗಳಿಗೆ ಸಾಧ್ಯವಾಗುವುದಿಲ್ಲ. ಈ ಅನಂತಕೋಟಿ ತಾರಾಮಂಡಲದ ಬ್ರಹ್ಮಾಂಡವನ್ನು ಮನೋವೇಗದ ಮೂಲಕ ದಿವ್ಯದೃಷಿಯಿಂದ ಶಿವಯೋಗಿಗಳು ಇಷ್ಟಲಿಂಗ ತಂತ್ರಜ್ಞಾನದ ಮೂಲಕ ನೋಡಬಲ್ಲವರಾಗಿದ್ದರು. ಶಿವಯೋಗಿಗಳು ಎಷ್ಟು ನಿಖರವಾಗಿ ಇಂತಿಷ್ಟು ಅಂತರದಲ್ಲಿ ಇಂತಹ ಲೋಕಗಳಿವೆ. ಹಾಗೂ ವಿಚಿತ್ರ ಜೀವಿಗಳು ಅಲ್ಲಿಯ ಪರಿಸರಗಳ ಬಗ್ಗೆ ತಿಳಿಸಿದ್ದಾರೆ. ಈ ಅನುಭವವನ್ನು ತಮ್ಮ ತಮ್ಮ ವಚನಗಳಲ್ಲಿ ದಾಖಲಿಸಿದ್ದಾರೆ. ಇಷ್ಟಲಿಂಗ ಶಿವಯೋಗ ಒಂದು ನಿಖರವಾದ ಖಚಿತವಾದ ಅತೀ ಸರಳ ತಂತ್ರವಿದ್ಯೆ.
- ಮಂಜುನಾಥ ಸುಳ್ಳೊಳ್ಳಿ
ಹಿರಿಯ ಸಹಾಯಕ ನಿರ್ದೇಶಕರು
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ
ಧಾರವಾಡ
- * * * -