ಬದುಕಿನ ಅಡತಡೆಗಳನ್ನು ಮೀರಿ ಮಹಿಳೆಯರು ಓದು, ಬರಹ ಮೈಗೂಡಿಸಿಕೊಂಡಿರುವದು ಹೆಮ್ಮೆಯ ವಿಷಯ : ಲೀಲಾವತಿ ಪ್ರಸಾದ
ಬೆಳಗಾವಿ, ಜ, 29 : ಕವೀತ್ರೆಯರು ತಮ್ಮ ಬದುಕಿನ ಎಲ್ಲಾ ಅಡೆತಡೆಗಳನ್ನು ಮೀರಿ, ತಮಗಾಗಿ ಸಮಯವನ್ನು ಮೀಸಲಿಟ್ಟು ಸಾಹಿತ್ಯ ಸೇವೆಯಲ್ಲಿ ತೊಡಗುತ್ತಿರುವುದು ಹೆಮ್ಮೆಯ ವಿಚಾರ ಎಂದು ಮಾಜಿ ಸಚಿವೆ, ಸಾಹಿತಿ ಲೀಲಾವತಿ ಪ್ರಸಾದ ಹೇಳಿದರು.
ನಗರದ ಎಸ್.ಜಿ ಬಾಳೇಕುಂದ್ರಿ ತಾಂತ್ರಿಕ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ 22ನೇ ರಾಷ್ಟ್ರೀಯ ಅಖಿಲ ಭಾರತ ಕವಯತ್ರಿಯರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಹಲವು ಕ್ಷೇತ್ರಗಳಲ್ಲಿ ಮಹಿಳಾ ತಮ್ಮ ಶಕ್ತಿಯನ್ನು ತೋರಿಸುವ ಮೂಲಕ ಹೆಣ್ಣು ಸಮಾಜದ ಕಣ್ಣು ಎಂಬುದನ್ನು ಅರ್ಥ ಮಾಡಿದ್ದಾರೆ ಎಂದರು.
ಸ್ತ್ರೀಯರು ಜೀವನದ ಜಂಜಾಟದಲ್ಲಿ ಕುಟುಂಬದ ನಿರ್ವಹಣೆಯೊಂದಿಗೆ ತಮ್ಮ ಅನುಭವನ್ನು ಬರವಣಿಗೆಯ ಜೊತೆ ಬದುಕಿನ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿತುವದು ಸಂತಸದ ವಿಷಯ ಎಂದು ಹೇಳಿದರು.
ಪುರಷರ ಸಮನಾದ ಕಾರ್ಯ ಜೊತೆ ಪ್ರತಿಯೊಬ್ಬ ಮಹಿಳೆಯರು ಓದು ಮತ್ತು ಬರಹಕ್ಕೆ ಮೀಸಲಿಡಬೇಕು. ಓದುವುದು - ಬರೆಯುವುದು ರೂಢಿಸಿಕೊಂಡು ಸರಸ್ವತಿ ಪುತ್ರಿಯರಾಗಬೇಕು ಎಂದು ಹೇಳಿದರು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಾವಿ ನಾಗನೂರು ಮಠದ ಡಾ. ಅಲ್ಲಮಪ್ರಭು ಶ್ರೀಗಳು ಅವರು, ಕಿತ್ತೂರು ನೆಲದ ಬೆಳಗಾವಿಯಲ್ಲಿ ಇಂದು ದೇಶದ ವಿವಿಧ ರಾಜ್ಯಗಳ ಕವಯತ್ರಿಯವರ ಕಲೆ ಮತ್ತು ಸಂಸ್ಕೃತಿಯ ಪಾಂಡಿತ್ಯ ಹಾಗೂ ಕೃತಿ ಅನಾವರಣ ಆಗುತ್ತಿರುವುದು ಹೆಮ್ಮೆಯ ವಿಚಾರ. ಬೆಳಗಾವಿ ಜಿಲ್ಲೆಯಲ್ಲಿ ಮೊದಲನೇ ಬಾರಿಗೆ ನಡೆಯುತ್ತಿರುವ ರಾಷ್ಟ್ರ ಮಟ್ಟದ ಕವಯತ್ರಿಯರಿ ಸಮ್ಮೇಳನವು ಒಂದು ಉತ್ತಮ ವೇದಿಕೆಯಾಗಿದೆ.
ವಿವಿಧ ರಾಜ್ಯಗಳಿಂದ ಆಗಮಿಸಿದ ಮಹಿಳಾ ಸಾಧಕಿಯರು ಈ ನೆಲದ ಆತಿಥ್ಯವನ್ನು ಸ್ವೀಕರಿಸಬೇಕು. ಬೆಳಗಾವಿ ಮಹಿಳೆಯರು ಎಲ್ಲಾ ರಂಗದಲ್ಲಿಯೂ ತಮ್ಮ ಚಾಪನ್ನು ಮೂಡಿಸಿದ್ದಾರೆ ಎಂದರು. ಇಂದಿನ ಯುವ ಬರಹಗಾರರಿಗೆ ಶಿವಶರಣೆಯರ ಹಾಗೂ ವಚನಗಳ ಪಿತಾಮಹರ ವಚನ ಗ್ರಂಥಗಳು ಆಧಾರವಾಗಿದ್ದು, ಮುಂದಿನ ಭವಿಷ್ಯಕ್ಕೆ ಉತ್ತಮ ಬರಹಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ, ಪಶ್ಚಿಮ ಬಂಗಾಲ, ಓಡಿಸ್ಸಾ, ಅಸ್ಸಾಂ, ಕೇರಳ ಸೇರಿದಂತೆ ಅನೇಕ ರಾಜ್ಯದಿಂದ ಕವಯತ್ರಿಯರು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣದಲ್ಲಿ ಭಾಗವಹಿಸಿ ತಮ್ಮ ಗ್ರಂಥಗಳ ವಿಚಾರವನ್ನು ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ 300 ಕವಯತ್ರಿಯರು ಭಾಗವಹಿಸಿದ್ದರು, ಮೊದಲ ಕವಿಗೋಷ್ಠಿಯಾದ ಕಾವ್ಯಾಧಾರದಲ್ಲಿ ಕವನ ವಾಚನದಲ್ಲಿ 50 ಜನ ಭಾಗವಹಿಸಿದರು. 2ನೆ ಕವಿಗೋಷ್ಠಿಯಾದ ಬಹುಭಾಷಾ ಕವನ ವಾಚನದಲ್ಲಿ ಭಾಷೆ ಮರೆತು ಬಾಂಧವ್ಯ ಬೆಸೆಯುವಂತೆ 50 ಜನ ಭಾಗವಹಿಸಿ ತಮ್ಮ ವಾಚನ ಪ್ರಸ್ತುತ ಪಡಿಸಿದರು. ಸಂಸದೆ ಮಂಗಲಾ ಸುರೇಶ್ ಅಂಗಡಿ, ಎಐಪಿಸಿಯ ಗೌರವ ಸಂಸ್ಥಾಪಕರಾದ ಡಾ. ಲಾರಿ ಅಜಾದ್ ಹಾಗೂ ಉಪಾಧ್ಯಕ್ಷೆ ಮತ್ತು ಸಂಯೋಜಕಿಯಾದ ಜೋತಿ ಬದಾಮಿ, ಎ.ಐ.ಫಿ.ಸಿಯ ಗೌರವ ಕಾರ್ಯದರ್ಶಿರಾದ ಡಾ. ವಿಜಯಲಕ್ಷ್ಮೀ ಕೋಸಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.