ಮಹಲಿಂಗಪುರ

ಶರಣರ ಬದುಕು, ಬಾಳಿಗೆ ಬೆಳಕು: ಸಹಜಾನಂದಶ್ರೀ

ಶರಣರ ಬದುಕು, ಬಾಳಿಗೆ ಬೆಳಕು: ಸಹಜಾನಂದಶ್ರೀ

ಮಹಾಲಿಂಗಪುರ: ನಾವು ಹುಟ್ಟಿದ ಭೂಮಿಯ ಮೇಲೆ ಶರಣರು ಹುಟ್ಟಿದರು, ನಾವು ತಿನ್ನುವ ಆಹಾರವನ್ನೇ ಅವರು ತಿಂದರು, ಶರಣರ ಬದುಕು ಸ್ಫೂರ್ತಿದಾಯಕ ವಾಗಿದ್ದು, ನಮ್ಮೆಲ್ಲರ ಬಾಳಿಗೆ ಬೆಳಕಾಗಬೇಕು ಎಂದು ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಗಿರಿಮಲ್ಲೇಶ್ವರ ಆಶ್ರಮದಲ್ಲಿ ಲಿಂ.ಶರಣಬಾಲಚಂದ್ರಣ್ಣ ಚೆಣ್ಣಿ ರವರ 13ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡ ಶರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಳೆಗೆಬೇಕು ಎಂಬ ಹಂಬಲ ಶರಣರಿಗಿರಲಿಲ್ಲ, ಅತಿ ಆಸೆಗೆ ಯಾವತ್ತು ಮನಸ್ಸು ಮಾಡಲಿಲ್ಲ, ಇದ್ದಿದರಲ್ಲೇ ಸಂತೃಪ್ತ ಬದುಕು ಸಾಗಿಸಿದವರು ಬಸವಾದಿ ಶರಣರು ಎಂದರು.ಬಡತನ ಎಂಬುದು ಶರಣರಿಗಿಲ್ಲ, ಸತ್ಯ, ಶುದ್ಧ ಕಾಯಕ, ಸರಳ ಬದುಕು , ನುಡಿದಂತೆ ನಡೆಯುವ ಪರಂಪರೆ ಶರಣರದ್ದಾಗಿತ್ತು ಎಂದು ನುಡಿದರು.

ಶಿಕ್ಷಕ ಹುಮಾಯೂನ ಸುತಾರ ಮಾತನಾಡಿ, ನಮ್ಮ ಅಮೂಲ್ಯ ಶರೀರವನ್ನು ಪರರ ಹಿತಕ್ಕಾಗಿ ಮೀಸಲಿಟ್ಟು, ವಿಶ್ವ ಕುಟುಂಬ ಒಂದೇ ಎಂಬ ಭಾವ ಉಳ್ಳ ಕನಸು ಶರಣರದ್ದಾಗಿತ್ತು ಎಂದರು.ಅಸಮಾನತೆಯನ್ನು ಹೋಗಲಾಡಿಸಿ, ದೀಕ್ಷಾ ಸಂಸ್ಕಾರ ಕೊಟ್ಟು ಎಲ್ಲರಲ್ಲೂ ಸಮಾನತೆಯನ್ನು ಬಿತ್ತಿದವರು ಬಸವಣ್ಣನವರು ಎಂದು ತಿಳಿಸಿದರು.

ನೂರಾರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ ಬಸವಣ್ಣನವರ ಹಾದಿಯಲ್ಲಿ ನಡೆದ ಚೆಣ್ಣಿ ಅವರ ಕಾಯಕ ಜೀವಿಯ ಬದುಕು ಇತರರಿಗೆ ಮಾದರಿ ಎಂದು ಒತ್ತಿ ಹೇಳಿದರು.

ಪ್ರೊ.ಬಿ.ಎಚ್.ಮಾರಧ ಪ್ರಸ್ತಾವಿಕವಾಗಿ ಮಾತನಾಡಿ, ಲೋಕವಿರೋಧಿ ಶರಣ ಯಾರಿಗೂ ಹೆದರುವುದಿಲ್ಲ, ತಮ್ಮ ದೇಹವನ್ನೇ ಪರೋಪಕಾರಕ್ಕಾಗಿ ಮೀಸಲಿಟ್ಟು, ಬಸವ ತತ್ವದ ಹಿನ್ನೆಲೆಯಲ್ಲಿ ದೇಹದಾನ ಮಾಡಿದ್ದು, ಸಾರ್ಥಕ ಬದುಕಿನ ಶರಣ ಬಾಲಚಂದ್ರ ಚೆಣ್ಣಿ, ಎಂದರು.

ಸ್ವತಃ ನನಗೆ ಶರಣ ಸಂಸ್ಕಾರವನ್ನು ನೀಡಿ, ಸಮಾಜದಲ್ಲಿ ಮಾತನಾಡುವ ಕಲೆ ಕಲಿಸಿದ್ದು ಬಾಲಚಂದ್ರ ಚೆಣ್ಣಿ ಎಂದು ಹಾಡಿ ಹೊಗಳಿದರು.

ಸಮಾಜ ಸೇವಕ ಚನ್ನಬಸು ಹುರಕಡ್ಲಿ ಅವರಿಗೆ 2023 ನೇ ಸಾಲಿನ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಮಹಾಶರಣ ಸುಜ್ಞಾನ ಸಂಸ್ಥೆಯ ಅಧ್ಯಕ್ಷ ಪ್ರೋ.ಬಿ.ಎಸ್.ನೇಗಿನಾಳ, ರಚಿಸಿ ಹಾಡಿದ ಸಿದ್ದೇಶ್ವರ ಸ್ವಾಮೀಜಿ ಅವರ ಜೀವನ ಚರಿತ್ರೆಯ ಕುರಿತ ಗೀತೆಯನ್ನು ಲೋಕಾರ್ಪಣೆ ಮಾಡಲಾಯಿತು. ಅಧ್ಯಕ್ಷತೆಯನ್ನು ಬಾಲಚಂದ್ರಣ್ಣ ಚೆಣ್ಣಿ ಪ್ರತಿಷ್ಠಾನದ ಅಧ್ಯಕ್ಷ ಗೋಲೇಶ ಅಮ್ಮಣಗಿ ವಹಿಸಿದ್ದರು. ನೇಕಾರ ಮುಖಂಡ ಅಂಬಾದಾಸ್ ಕಾಮೂರ್ತಿ, ಯಲ್ಲನಗೌಡ ಪಾಟೀಲ, ಬಂದು ಪಕಾಲಿ, ಮಹೇಶ ಇಟ್ಟಕನ್ನವರ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಜಿ.ಎಸ್.ಗೊಂಬಿ, ಶಿವಾನಂದ ನೇಗಿನಾಳ, ಕಾನಿಪ ಅಧ್ಯಕ್ಷ ಮಹೇಶ ಆರಿ, ಯಲ್ಲಪ್ಪ ಭಾಗೋಜಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಹೊಳೆಬಸು ಹಡಪದ ಪ್ರಾಥರ್ಿಸಿದರು, ಲಕ್ಷ್ಮಣ ಕಿಶೋರ ಸ್ವಾಗತಿಸಿದರು, ಶಿಕ್ಷಕ ಬಸವರಾಜ ಮೇಟಿ ನಿರೂಪಿಸಿದರು, ಪ್ರೋ.ಭೀಮಶಿ ನೇಗಿನಾಳ ವಂದಿಸಿದರು 

ಸುದ್ದಿ ಓದಿ