ಭಾವನೆಗಳಿಲ್ಲದ ಬಾಳು ನಿಜವಾದ ಬದುಕಲ್ಲ: ಡಾ.ಚನ್ನಪ್ಪ
ಬಳ್ಳಾರಿ 22: ಭಾವನೆಗಳಿಲ್ಲದೆ ಬಾಳಿನಲ್ಲಿ ನಿಜವಾದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಹಳ್ಳಿಯ ಜನರು ಮಾಡುತ್ತಾರೆ. ಭಿನ್ನ ಸಂಸ್ಕೃತಿಗಳ ಆಚರಣೆಯ ಆಗರ ಗ್ರಾಮೀಣ ಜನರ ಬದುಕಿನಲ್ಲಿದೆ ಎಂದು ಬಳ್ಳಾರಿಯ ವಿಮ್ಸ್ ಆಡಳಿತಾಧಿಕಾರಿ ಡಾ.ಎ.ಚನ್ನಪ್ಪ ಅವರು ಹೇಳಿದರು.
ಸ್ಥಳೀಯ ರೇಡಿಯೋ ಪಾರ್ಕ್ನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಡಾ. ಸಂಪಿಗೆ ನಾಗರಾಜರವರ ವೇದಾವತಿ ತೀರದಲ್ಲಿ ಕಾದಂಬರಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಬಹುಸಂಸ್ಕೃತಿಯ ಗ್ರಾಮೀಣ ಬದುಕಿನಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನವಾಗುವುದು. ಗ್ರಾಮೀಣ ಬದುಕಿನ ಪಲ್ಲಟಗಳ ಆಧುನಿಕತೆಯ ವೇಗವು ಯಾವ ರೀತಿಯಲ್ಲಿ ಬದಲಾವಣೆಗೊಂಡು ಹಳ್ಳಿಗಳು ಸಂಘರ್ಷದ ಹಾದಿಯಲ್ಲಿವೆ ಎಂಬುದನ್ನು ಈ ಕೃತಿಯು ಕಟ್ಟಿಕೊಟ್ಟಿದೆ. ಈ ಕೃತಿಯ ಉದ್ದಕ್ಕೂ ಗಾಂಧಿತತ್ವದ ಬೆಳಕು ಕಂಡು ಬರುತ್ತದೆ. ಈ ಕೃತಿಯು ಒಂದು ಹಳ್ಳಿಯ ಬದುಕನ್ನಷ್ಟೇ ಅಲ್ಲ, ಇಂದಿನ ಗ್ರಾಮ ಭಾರತದ ಜನರ ಮನಸ್ಸಿನ ಧಾವಂತಗಳ ಕನ್ನಡಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ ಮಾತನಾಡಿ, ಕಾದಂಬರಿಯು ಗಡಿಭಾಗದ ಅನೇಕ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಹೇಗೆ ಹೊರರಾಜ್ಯದವರು ಇಲ್ಲಿ ನೆಲೆಸಿ ಗುತ್ತಿಗೆ ಕಾಮಗಾರಿಗಳನ್ನು ನಡೆಸುವ ಮೂಲಕ ದಬ್ಬಾಳಿಕೆ ಮಾಡುತ್ತಾರೆ ಎಂಬುದನ್ನು ಲೇಖಕರು ಸೂಚ್ಯವಾಗಿ ವಿವರಿಸುತ್ತದೆ. ಬಳ್ಳಾರಿ ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆ, ವಿಮಾನ ನಿಲ್ದಾಣದಂತಹ ಸಮಕಾಲೀನ ಸಂಗತಿಗಳ ಮೇಲೆ ಕಾದಂಬರಿ ಬೆಳಕು ಚೆಲ್ಲುತ್ತದೆ ಎಂದರು.
ಕಾದಂಬರಿಕಾರ ಡಾ.ಸಂಪಿಗೆ ನಾಗರಾಜ ಅವರು ಮಾತನಾಡಿ, ಕಾದಂಬರಿಯು ಸ್ಥಳೀಯ ಜಗತ್ತನ್ನು ಪರಿಚಯಿಸುತ್ತದೆ. ಹಳ್ಳಿಯ ಬದುಕಿನ ಏರಿಳಿತಗಳ ಚಿತ್ರಣವನ್ನು ಕೃತಿಯಲ್ಲಿ ದಾಖಲು ಮಾಡಿದ್ದೇನೆ. ಸಹೃದಯರು ಕೃತಿಯನ್ನು ಓದಿ ಆಸ್ವಾದಿಸಬೇಕೆಂದು ಕೋರಿದರು.
ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಮಲ್ಲಿಕಾರ್ಜುನ, ವಕೀಲ ಬಂಡ್ರಾಳು ಎಂ.ಮೃತ್ಯುಂಜಯ ಸ್ವಾಮಿ, ಯುವ ಮುಖಂಡ ಕೆ.ಆರ್.ಮಲ್ಲೇಶ್, ಲೇಖಕ ಡಾ.ಬಿ.ಆರ್.ಮಂಜುನಾಥ, ಕೆ.ಎಂ.ಮಂಜುನಾಥ, ಗೌರವ ಕೋಶಾಧ್ಯಕ್ಷ ಟಿ.ಎಂ.ಪಂಪಾಪತಿ ಉಪಸ್ಥಿತರಿದ್ದರು. ಆರಂಭದಲ್ಲಿ ವಿದ್ಯಾರ್ಥಿನಿ ಸ್ವರ್ಣಾಂಜಲಿ ಪ್ರಾರ್ಥಿಸಿದರೆ, ಅನಿತ ಉತ್ತನೂರು ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಡಾ.ಸಿ.ಕೊಟ್ರಪ್ಪ ವಂದಿಸಿದರು.