ಬೆಳೆ ವಿಮಾ ಕಂಪನಿಯ ಇಬ್ಬದಿಯ ನೀತಿಗೆ ಸರಕಾರ ಗುದ್ದು ನೀಡಲಿ : ರವೀಂದ್ರಗೌಡ ಎಫ್. ಪಾಟೀಲ
ರಾಣೇಬೆನ್ನೂರು 20 : ರಾಜ್ಯದಲ್ಲಿ ಬರಗಾಲ ಆವರಿಸಿದಾಗ ಸರಕಾರ ಬರಗಾಲ ಪೀಡಿತ ರಾಜ್ಯ ಎಂದು ಘೋಷಿಸಿದಾಗ ಆ ವರ್ಷ ಬಿತ್ತಿದ ಬೆಳೆಗಳೆಲ್ಲವು ಸರ್ವನಾಶವೆಂದೇ ಅರ್ಥ. ಆ ವರ್ಷದಲ್ಲಿ ರೈತರು ತುಂಬಿದ ಎಲ್ಲಾ ಬೆಳೆಗಳಿಗೆ ವಿಮಾ ಹಣವನ್ನು ಬಿಡುಗಡೆ ಮಾಡಬೇಕು, ಮಧ್ಯಂತರ ಪರಿಹಾರವಾಗಿ ಶೇ.25ರಷ್ಟು ವಿಮಾ ಹಣವನ್ನು ತಕ್ಷಣ ಬೆಳೆವಿಮೆ ತುಂಬಿದ ರೈತರ ಖಾತೆಗೆ ಜಮಾ ಮಾಡಬೇಕು, ಉಳಿದ ಶೇ.75ರಷ್ಟು ಹಣವನ್ನು ಮುಂದಿನ ವರ್ಷದ ಜೂನ್ ತಿಂಗಳಲ್ಲಿ ಜಮಾ ಮಾಡಬೇಕೆಂಬುದು ಕೇಂದ್ರ ಸರಕಾರದ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ನಿಯಮ.
ಈ ಹಿಂದೆ ಇಂತಹ ಬರಗಾಲದ ಪರಿಸ್ಥಿತಿಯಲ್ಲಿ ಸರಕಾರ ಬರಗಾಲ ಅಂತಾ ಘೋಷಿಸಿದಾಗ ವಿಮಾ ಕಂಪನಿಗಳು ಈ ನಿಯಮಗಳನ್ನು ಪಾಲಿಸಿ ರೈತರ ಖಾತೆಗೆ ಮಧ್ಯಂತರ ಪರಿಹಾರ ಮತ್ತು ಪೂರ್ಣ ಪರಿಹಾರ ಕೊಟ್ಟಿರುವ ನಿದರ್ಶನಗಳಿವೆ, ಈಗ ಮಧ್ಯಂತರ ಪರಿಹಾರ ಪಡೆದ ರೈತರಿಗೆ ಪೂರ್ಣ ಪರಿಹಾರವನ್ನು ವಿಮಾ ಕಂಪನಿಗಳು ರೈತರ ಖಾತೆಗೆ ಜಮಾ ಮಾಡುವುದು ಬೆಳೆವಿಮಾ ನೀತಿಯಾಗಿದೆ. ಅದನ್ನು ಬಿಟ್ಟು ಈಗ ವಿಮಾ ಕಂಪನಿಗಳು ಬೆಳೆ ಪ್ರಾತ್ಯಕ್ಷತೆಯ (ಕ್ರಾಪ್ಸ್ ಕಟಿಂಗ್ ಎಕ್ಸಪೆರಿಮೆಂಟ್) ನೆಪ ಹೇಳಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿರುವುದು ಇಬ್ಬದಿಯ ನೀತಿಯಾಗಿದೆ ಈ ಕಂಪನಿಗಳಿಗೆ ಸರಕಾರ ಮತ್ತು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಗುದ್ದು ನೀಡಬೇಕೆಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್. ಪಾಟೀಲ ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ರೈತರು ರೊಚ್ಚಿಗೆದ್ದು ಹೋರಾಟ ತೀವ್ರಗೊಳ್ಳುವ ಮುನ್ನ ಬೇಗನೆ ಉಳಿದ ಶೇ.75ರ ಹಣವನ್ನು ಜಮಾ ಮಾಡಿ ಸರಕಾರಗಳು ವಿಮಾ ಕಂಪನಿಗಳು ಗೌರವ ಕಾಯ್ದುಕೊಳ್ಳಬೇಕೆಮದು ಈ ಮೂಲಕ ಎಚ್ಚರಿಸಿದ್ದಾರೆ.