ಹಿಂಸಾಚಾರ ನಿಷೇಧ ಕಾಯ್ದೆ ಜಾರಿಯಾಗಲಿ: ಭಾಸಗಿ
ಮಹಾಲಿಂಗಪುರ 22: ವಕೀಲರ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ 2023 ರ ಮಾದರಿಯಲ್ಲಿ ಪತ್ರಕರ್ತರ ಮೇಲಿನ ಹಿಂಸಾಚಾರ ನಿಷೇಧ ಅಧಿನಿಯಮ ಜಾರಿಯಾಗಬೇಕು ಎಂದು ಪತ್ರಕರ್ತ ಪರಶುರಾಮ ಭಾಸಗಿ ಹೇಳಿದರು.
ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಳೀಯ ಘಟಕದಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಪತ್ರಕರ್ತರು ಸಹ ಅನ್ಯಾಯವನ್ನು ಪ್ರಶ್ನಿಸಿ ನ್ಯಾಯಕ್ಕಾಗಿ ಹೋರಾಡುತ್ತಾರೆ. ಸರ್ಕಾರದ ಲೋಪ- ದೋಷಗಳನ್ನು ಎತ್ತಿ ತೋರಿಸುತ್ತಾರೆ. ಹಗರಣಗಳನ್ನು ಬಯಲಿಗೆ ಎಳೆಯುತ್ತಾರೆ. ಅವರು ಸಹ ಜೀವ ಬೆದರಿಕೆ, ಒತ್ತಡ, ಕರ್ತವ್ಯಕ್ಕೆ ಅಡ್ಡಿಯಾಗುವಂಥ ಕೃತ್ಯಗಳನ್ನು ಎದುರಿಸುತ್ತಾರೆ. ಹೀಗಾಗಿ, ಸರ್ಕಾರ ಪತ್ರಕರ್ತರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪತ್ರಕರ್ತರ ಮೇಲಿನ ಹಿಂಸಾಚಾರ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎಂದರು.
ಪತ್ರಕರ್ತರು ವೃತ್ತಿ ಧರ್ಮ ಪಾಲಿಸಬೇಕು. ತಮ್ಮದೇ ನೈತಿಕ ಮೌಲ್ಯಗಳ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಪ್ರತಿದಿನ ಪತ್ರಿಕೆಗಳು ಮೌಲ್ಯ ಹೊತ್ತು ಜನರ ಬಳಿ ಹೋಗಬೇಕು. ಅಂದಾಗ ಪತ್ರಕರ್ತರು, ಪತ್ರಿಕೆಗಳ ಮೌಲ್ಯ ಹೆಚ್ಚಾಗಲಿದೆ. ಮೌಲ್ಯ ಇಲ್ಲದ ಪತ್ರಿಕೆ ಅದೊಂದು ಪತ್ರಿಕೆಯಲ್ಲ. ಕೇವಲ ರದ್ದಿ ಮಾತ್ರ ಎಂದರು.
ಶಾಸಕ ಸಿದ್ದು ಸವದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪತ್ರಕರ್ತರಿಗೆ ಸಮಾಜದಲ್ಲಿ ಮಹತ್ವದ ಸ್ಥಾನವಿದ್ದು, ಅವರಿಗೆ ಹೊಣೆಗಾರಿಕೆಯೂ ದೊಡ್ಡದಿದೆ. ಹೀಗಾಗಿ, ಜನರು ತಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪತ್ರಕರ್ತರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಜೇಸಿ ಇಂಗ್ಲೀಷ್ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪತ್ರಿಕೆಗಳ ರೂಪಕ ಪ್ರದರ್ಶಿಸಿದರು. ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿದರು. ಕಲಾವಿದ ಶಿವಾನಂದ ಬಿದರಿ ರೈತ ಗೀತೆ ಹಾಡಿದರು. ಚಿಮ್ಮಡದ ವಿರಕ್ತಮಠದ ಪ್ರಭು ಸ್ವಾಮೀಜಿ ಸಾನಿಧ್ಯ, ಘಟಕದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ಧಲಬಂಜನ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಎಸ್.ಎಸ್.ಈಶ್ವರ್ಪಗೋಳ, ಘಟಕದ ಕಾರ್ಯದರ್ಶಿ ಹಣಮಂತ ನಾವಿ ಇದ್ದರು.
ಜಯರಾಮಶೆಟ್ಟಿ ಸ್ವಾಗತಿಸಿದರು. ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮಣ ಕಿಶೋರ ವಂದಿಸಿದರು. ನಾರಣಗೌಡ ಉತ್ತಂಗಿ ನಿರೂಪಿಸಿದರು.