ತಾಂತ್ರಿಕ ವಿದ್ಯಾರ್ಥಿಗಳು ರಾಷ್ಟ್ರ ಪ್ರಗತಿಯ ರಾಯಭಾರಿಗಳಾಗಲಿ
ಕೆಎಲ್ಇ ಪಾಲಿಟೆಕ್ನಿಕ್ನ ವಾರ್ಷಿಕ ಸ್ನೇಹಸಮ್ಮೇಳನ ಕಾರ್ಯಕ್ರಮದಲ್ಲಿ ಗೋಪೇಶ್ವರದಾಸ ಆಶಯ
ಮಹಾಲಿಂಗಪುರ 02: ವಿದ್ಯಾರ್ಥಿಗಳು ಉತ್ತಮ ಬದುಕಿನ ರೂವಾರಿಗಳಗಬೇಕು, ಅದರಲ್ಲೂ ತಾಂತ್ರಿಕ ವಿದ್ಯಾರ್ಥಿಗಳು ರಾಷ್ಟ್ರ ಪ್ರಗತಿಯ ರಾಯಭಾರಿಗಳಾಗಬೇಕು ಎಂದು ಬೃಂದಾವನ ಗುರುಕುಲದ ರೂವಾರಿ ಗೋಪೇಶ್ವರದಾಸ ಕಮತಿ ಹೇಳಿದರು.
ಸ್ಥಳೀಯ ಕೆಎಲ್ಇ ಡಿಪ್ಲೋಮಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಯಶಸ್ವೀ ಎಂಬ ವಾರ್ಷಿಕ ಸ್ನೇಹಸಮ್ಮೇಳನ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ಭವಿಷ್ಯತ್ತಿನ ಬಗ್ಗೆ ಭಯ ತೊರೆದು ಆತ್ಮವಿಶ್ವಾಸದಿಂದ ಪ್ರಯತ್ನ ಮಾಡಬೇಕು. ಪ್ರತಿಫಲ ಯಾವುದೇ ಬಂದರೂ ಸ್ವೀಕರಿಸುವ ಗಟ್ಟಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಮೀರವಾಡಿಯ ಜಿಬಿಎಲ್ ಕಂಪನಿಯ ಜನರಲ್ ಮ್ಯಾನೇಜರ್, ಸೈಂಟಿಸ್ಟ್ ಡಾ.ರಮೇಶ ಶೆಟ್ಟರ ಮಾತನಾಡಿ, ಕಾಲೇಜು ನಿಮಗೇನು ಕೊಟ್ಟಿದೆಯೋ ಅದನ್ನು ಸರಿಯಾಗಿ ಬಳಸಿಕೊಂಡು ಆ ಕಾಲೇಜಿಗೆ ನೀವು ಉತ್ತಮ ಫಲಿತಾಂಶದ ಉಡುಗೊರೆ ಕೊಡಬೇಕು. ಸಾಧನೆ ಮಾಡಿ ಹೆತ್ತವರಿಗೂ, ಜ್ಞಾನವಿತ್ತವರಿಗೂ ಕೀರ್ತಿ ತರಬೇಕು ಎಂದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಘನವೆತ್ತ ಭಾರತದ ತಾಂತ್ರಿಕ ವಿದ್ಯಾರ್ಥಿಗಳು ನೀವಾಗಿದ್ದೀರಿ. ನಿಮ್ಮ ಭವಿಷ್ಯ ನಿರೂಪಿಸಿಕೊಳ್ಳುವುದರೊಂದಿಗೆ ಭವ್ಯ ಭಾರತದ ಭವಿಷ್ಯತ್ತು ನಿರ್ಮಿಸುವ ಜವಾಬ್ದಾರಿ ವಹಿಸಿಕೊಳ್ಳಿ ಎಂದರು. ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಮಾತನಾಡಿದರು.
ಸಿಪಾಯಿಗಳಿಗೆ ಗೌರವ ಸಲ್ಲಿಸಿದರು:
ವೇದಿಕೆ ಮುಂಭಾಗದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಮೊದಲು ಕಾಲೇಜಿನಲ್ಲಿ ಸಢೇವೆ ಸಲ್ಲಿಸುತ್ತಿರುವ ಎಲ್ಲ ಸಿಪಾಯಿಗಳಿಗೆ, ಸ್ವಚ್ಚತಾ ಸಿಬ್ಬಂದಿಗೆ ವೇದಿಕೆ ಮೇಲೆ ಕರೆದು ಸಾಮೂಹಿಕವಾಗಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಅವರಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯ ತಿಳಿಸಲಾಯಿತು.
ಎಲ್ಲ ವಿಭಾಗಗಳ ಅಂತಿಮವರ್ಷದ ವಿದ್ಯಾರ್ಥಿಗಳಿಗೆ ಎಕ್ಸೀಕ್ಯೂಟಿವ್ ಬ್ಯಾಗ್ ನೀಡುವ ಮೂಲಕ ಮುಂದಿನ ಓದ್ಯೋಗಿಕ ಜೀವನಕ್ಕೆ ಶುಭ ಹಾರೈಸಲಾಯಿತು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಇದೇ ಕಾಲೇಜಿನ ವಿದ್ಯಾರ್ಥಿ ರಾಹುಲ್ ಪತ್ತಾರ ರಚಿಸಿ, ಹಾಡಿ ಸಿದ್ದಪಡಿಸಿರುವ ಟೆನ್ಶನ್ ಎಂಬ ಪಾಪ್ ಮತ್ತು ರಾ್ಯಪ್ ಸಾಂಗ್ ಬ್ರೋಚರ್ ಬಿಡುಗಡೆ ಮಾಡಲಾಯಿತು.
ಪ್ರಾಚಾರ್ಯ ಎಸ್.ಐ.ಕುಂದಗೋಳ, ಉಮೇಶ ಹಾದಿಮನಿ, ಸುಭಾಸ್ ಮೂಶಿ, ಅನಿಕೇತ ತಾರದಾಳೆ, ಪ್ರಿಯಾ ಸೋನಾರ, ಲಕ್ಷ್ಮೀ ನಾಯಕ, ಚೈತ್ರಾ ಹುದ್ದಾರ, ಲಕ್ಷ್ಮೀ ಅಂಗಡಿ, ವಂದನಾ ಪಸಾರ, ಅಮಿತ ಜಾಧವ, ಮಹಾದೇವಿ ಅಂಬಿ, ಸವಿತಾ ಗೊಂದಿ, ಸವಿತಾ ಬೀಳಗಿ, ಅಂಜನಾ ಮಾಲಜ, ಮಂಜುನಾಥ ಅರಕೇರಿ, ಪ್ರವೀಣ ಅವರಾದಿ, ನಿರ್ಮಲಾ ಫಕೀರಪುರ, ಈಶ್ವರ ಹೂಲಿ, ಚೇತನ ಕುಂದರಗಿ, ಪ್ರಕಾಶ ಬಡಿಗೇರ, ಗೀತಾ ಉಪಾಸೆ, ಶಿಲ್ಪಾ ಬೀರನಗಡ್ಡಿ ಹಾಗೂ ಸಿಬ್ಬಂದಿ ಇದ್ದರು.