ಧಾರವಾಡ - ಹುಬ್ಬಳ್ಳಿ

ಗ್ರಂಥಾಲಯಗಳು ಜ್ಞಾನ-ತಂತ್ರಜ್ಞಾನ ಕೇಂದ್ರಗಳಾಗಲಿ

ಗ್ರಂಥಾಲಯಗಳು ಜ್ಞಾನ-ತಂತ್ರಜ್ಞಾನ ಕೇಂದ್ರಗಳಾಗಲಿ

ಲೋಕದರ್ಶನ ವರದಿ 

ಧಾರವಾಡ 25: ಗ್ರಂಥಾಲಯಗಳು ಸಾಂಪ್ರದಾಯಿಕ ಪುಸ್ತಕ ಸಂಗ್ರಹ ಕೇಂದ್ರಗಳಾಗಿ ಉಳಿಯದೆ, ಜ್ಞಾನ ಮತ್ತು ತಂತ್ರಜ್ಞಾನದ ಕೇಂದ್ರಗಳಾಗಿ ರೂಪಾಂತರಗೊಳ್ಳಬೇಕು ಎಂದು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಧಾರವಾಡ ನಿರ್ದೇಶಕ ಡಾ. ಮಹಾದೇವ ಪ್ರಸನ್ನ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿದ್ದ ಕರ್ನಾಟಕ ರಾಜ್ಯ ಗ್ರಂಥಪಾಲಕರ 3ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆಗಳಾಗುತ್ತಿದ್ದು, ಗ್ರಂಥಾಲಯ ಕ್ಷೇತ್ರವೂ ಇದಕ್ಕೆ ಹೊಂದಿಕೊಳ್ಳಬೇಕಾಗಿದೆ.

ಎಐ ಬಳಕೆಯಿಂದ ಅಗತ್ಯ ಮಾಹಿತಿಯನ್ನು ಕ್ಷಣಾರ್ಧದಲ್ಲಿ ವಿಶ್ಲೇಷಿಸಿ ನಿಖರವಾಗಿ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಗ್ರಂಥಾಲಯಗಳು ಜ್ಞಾನ-ತಂತ್ರಜ್ಞಾನ ಕೇಂದ್ರಗಳಾಗಿ ರೂಪಾಂತರಗೊಳ್ಳಬೇಕು ಎಂದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಂ. ಖಾನ್ ಮಾತನಾಡಿ, ಗ್ರಂಥಾಲಯ ಎಂದರೆ ಕೇವಲ ಪುಸ್ತಕ ಸಂಗ್ರಹಿಸುವ ಸ್ಥಳವಲ್ಲ.

ಎಐ ಯುಗದಲ್ಲಿ ಗ್ರಂಥಾಲಯಗಳು ಡೇಟಾ ಕೇಂದ್ರಗಳಾಗಿ, ಗ್ರಂಥಪಾಲಕರು ತಂತ್ರಜ್ಞಾನ ಪರಿಣತರಾಗಿ ಕಾರ್ಯನಿರ್ವಹಿಸಬೇಕಿದೆ. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಂಥಾಲಯಗಳನ್ನು ಉನ್ನತ ದರ್ಜೆಗೆ ಕೊಂಡೊಯ್ಯುವ ಕುರಿತು ಹೊಸ ಪ್ರಯೋಗಗಳು ನಡೆಯಬೇಕು ಎಂದರು.  

ಪ್ರೊ. ಎಸ್‌.ಎಲ್‌. ಸಂಗಮ ಮಾತನಾಡಿ, ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಭೌತಿಕ ಪುಸ್ತಕಗಳನ್ನು ಕೈಯಲ್ಲಿ ಹಿಡಿದು ಓದುವ ಅನುಭವಕ್ಕೆ ತನ್ನದೇ ಆದ ಮಹತ್ವವಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಗ್ರಂಥಾಲಯ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಬೇಕು ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿದರು.

ಸಮ್ಮೇಳನದ ಸಂಚಾಲಕ ಮಹೇಶ ಧ. ಹೊರಕೇರಿ ನಿರೂಪಿಸಿದರು.  ಸಮಾರಂಭದಲ್ಲಿ ಡಾ. ಎ.ಎಂ. ಖಾನ್, ಡಾ. ಎಸ್‌.ಆರ್‌. ಮಹಾದೇವಪ್ರಸನ್ನ, ಡಾ. ಎ.ವೈ. ಅಸುಂಡಿ ಸೇರಿದಂತೆ ಹಲವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಪ್ರಾಧ್ಯಾಪಕರು, ಗ್ರಂಥಪಾಲಕರು, ಸಂಶೋಧನಾರ್ಥಿಗಳು ಮತ್ತು ಗಣ್ಯರು ಭಾಗವಹಿಸಿದ್ದರು. 


ಸುದ್ದಿ ಓದಿ