ಲೇಖನಗಳು

ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಪ್ರತಿ ಹಂತದಲ್ಲಿ ಜೊತೆಯಾಗೋಣ

ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಪ್ರತಿ ಹಂತದಲ್ಲಿ ಜೊತೆಯಾಗೋಣ

ಮಕ್ಕಳು ದೇವರ ಸಮಾನ. ಅವರು ಏನೇ ಮಾಡಿದರೂ ತಪ್ಪು ಎನಿಸದೇ ಮುದ್ದಾಡುತ್ತೇವೆ. ಪಾಲಕರು ಮಕ್ಕಳ ತಪ್ಪುಗಳನ್ನು ಅಷ್ಟಾಗಿ ತಲೆಗೆ ಹಚ್ಚಿಕೊಳ್ಳುವುದಿಲ್ಲ. ಮಕ್ಕಳನ್ನು ಗೌರವಿಸುವ, ಮಕ್ಕಳ ಕಲ್ಯಾಣ, ಜಾಗೃತಿ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಾಧನೆಗಳನ್ನು ಮೆಲುಕು ಹಾಕುವ ಹಿತದೃಷ್ಟಿಯಿಂದ ಪ್ರತಿವರ್ಷ ನವೆಂಬರ್ 20ರಂದು ಅಂತರಾಷ್ಟ್ರೀಯ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಕ್ಕಳ ಹಕ್ಕುಗಳ ಘೋಷಣೆಯನ್ನು 20 ನವೆಂಬರ್ 1959ರಂದು ಮಾಡಿದ್ದರ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 20 ರಂದು ಧೇಯವಾಕ್ಯದೊಂದಿಗೆ ವಿಶ್ವ ಮಕ್ಕಳ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. 2022 ನವೆಂಬರ್ 20ರಂದು ಇನ್ಕೂ-್ಲಷನ್ ಫಾರ್ ಎರ್ವಿ ಚೈಲ್ಡ್‌ ಎಂಬ ಧೇಯವಾಕ್ಯದೊಂದಿಗೆ ಆಚರಣೆ ಮಾಡಲಾಗುವುದು.  

1857 ಜೂನ್ ಎರಡನೇ ಭಾನುವಾರದಂದು ಮಕ್ಕಳ ದಿನವನ್ನು ಆಚರಿಸಲು ಮುಂದಾಗಲಾಗುತ್ತದೆ. ಲಿಯೋನಾರ್ಡೋ ಅವರು ಈ ದಿನವನ್ನು ಗುಲಾಬಿ (ರೋಸ್) ದಿನ ಎಂದು ಕರೆದರು. ಮುಂದೆ ಟರ್ಕಿ ದೇಶದಲ್ಲಿ 1920 ಏಪ್ರೀಲ್ 23 ರಂದು ಮಕ್ಕಳ ದಿನವನ್ನು ಆಚರಣೆ ಪ್ರಾರಂಭಿಸಲಾಯಿತು. 1929ರಲ್ಲಿ ರಾಷ್ಟ್ರೀಯ ಮಕ್ಕಳ ದಿನವೆಂದು ಘೋಷಿಸಿಲಾಯಿತು. 1925ರ ಜಿನೇವಾದಲ್ಲಿ ಮಕ್ಕಳ ಕಲ್ಯಾಣ ಕುರಿತ ವಿಶ್ವ ಸಮ್ಮೇಳನದಲ್ಲಿ  ಅಂತರಾಷ್ಟ್ರೀಯ ಮಕ್ಕಳ ದಿನವನ್ನು ಮೊದಲ ಬಾರಿಗೆ ಘೋಷಣೆ ಮಾಡಲಾಯಿತು. ಅದರಂತೆ 4 ನವೆಂಬರ್ 1949 ರಂದು ಮಾಸ್ಕೋದಲ್ಲಿ ಮಹಿಳೆಯರ ಅಂತರಾಷ್ಟ್ರೀಯ ಡೆಮಾಕ್ರೆಟಿಕ್ ಫೆಡರೇಷನ್‌ನಿಂದ ಜೂನ್ 1 ರಂದು ಮಕ್ಕಳ ರಕ್ಷಣೆಗಾಗಿ ಅಂತರಾಷ್ಟ್ರೀಯ ದಿನವನ್ನು ಆರಂಭಿಸಬೇಕು ಎಂದು ಒತ್ತಾಯಿಸಿತು. 1950 ಜೂನ್ 1 ರಂದು ಕಮ್ಯೂನಿಸ್ಟ್‌ ರಾಷ್ಟ್ರಗಳಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು.  

ಮಕ್ಕಳ ರಕ್ಷಣೆ, ಶಿಕ್ಷಣ, ಆರೋಗ್ಯ ಕಾಪಾಡುವಲ್ಲಿ ಯುನಿಸೆಫ್  

ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಯುನಿಸೆಫ್ ಮಕ್ಕಳ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳಿಗಾಗಿ ಸಾಕಷ್ಟು ಕಾರ್ಯಕ್ರಮಗಳ ಮೂಲಕ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು. ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡುವುದು. ಶೋಷಣೆ, ನಿಂದನೆ, ಬಾಲ ಕಾರ್ಮಿಕ, ಗುಲಾಮಗಿರಿ, ಮಕ್ಕಳ ಅಪಹರಣ, ವೈಶ್ಯಾವಾಟಿಕೆ ಇನ್ನೂ ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳನ್ನು ರಕ್ಷಿಸುವಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ.  

ಭಾರತದಲ್ಲಿ ನವೆಂಬರ್ 14 ರಂದು ಪಂಡಿತ್ ಜವಾಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಮಕ್ಕಳ ದಿನ ಎಂದು ಆಚರಣೆ ಮಾಡಲಾಗುತ್ತದೆ. ಅದರಂತೆ ವಿಶ್ವದ ನಾನಾ ದೇಶಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಮಕ್ಕಳ ದಿನವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಜೂನ್ 1 ರಂದು ಸೋವಿಯತ್ ರಷ್ಯಾದಿಂದ ಸ್ವಾತಂತ್ರ ಪಡೆದ ಸುಮಾರು 25ಕ್ಕೂ ಅಧಿಕ ರಾಷ್ಟ್ರಗಳು ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿವೆ. ಒಟ್ಟಿನಲ್ಲಿ ಮಕ್ಕಳ ಕಲ್ಯಾಣಕ್ಕಾಗಿ ನಾವೆಲ್ಲರೂ ಜೊತೆಯಾಗೋಣ. 

- ನಾಗಪ್ಪ ಕೆ ಮಾದರ  

ಹುಬ್ಬಳ್ಳಿ 

- * * * - 


ಸುದ್ದಿ ಓದಿ