ಬೋನಿಗೆ ಬಿದ್ದ ಚಿರತೆ; ಗ್ರಾಮಸ್ಥರ ಆತಂಕ ನಿವಾರಣೆ
ಹೊವಿನಹಡಗಲಿ, ಜು.30: ತಾಲೂಕಿನ ಕೋಟಿಹಾಳ, ಕತ್ತೆಬೆನ್ನೂರು ಹಾಗೂ ಮಕರಬ್ಬಿ ಗ್ರಾಮಗಳ ನಡುವಿನ ಹುಣಸಿಕಟ್ಟಿ ಹಳ್ಳದ ಬಳಿ ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಬುಧವಾರ ಬೆಳಗಿನ ಜಾವ ಚಿರತೆಯೊಂದು ಬಿದ್ದಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಬೆಳಿಗ್ಗೆ ಸುಮಾರು 5ರಿಂದ 6 ಗಂಟೆಯೊಳಗೆ ಚಿರತೆ ಬೋನಿಗೆ ಬಿದ್ದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಬೆಳಿಗ್ಗೆ 7.30ರ ಸುಮಾರಿಗೆ ಅದನ್ನು ಗಮನಿಸಿದ್ದಾರೆ. ಹಿರಿಯ ಅಧಿಕಾರಿಗಳ ಸೂಚನೆ ಹಾಗೂ ಮಾರ್ಗದರ್ಶನದಂತೆ ಚಿರತೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬೀರಬ್ಬಿ ಸಮೀಪದ ಕ್ರಾಸ್ಗುಡ್ಡ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಚಿರತೆಯನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ವಿವಿಧ ಸ್ಥಳಗಳಲ್ಲಿ ಬೋನುಗಳನ್ನು ಅಳವಡಿಸಿತ್ತು. ಅದರ ಫಲವಾಗಿ ಚಿರತೆ ಬೋನಿಗೆ ಸಿಕ್ಕಿದ್ದು, ಮುಂದಿನ ಕ್ರಮವಾಗಿ ಅದನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡುವ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.