ಕೆರೆ ಜಮೀನು ಒತ್ತುವರಿ ಆರೋಪ, ಯಾವುದೇ ತನಿಖೆಗೆ ಸಿದ್ದ : ಸಚಿವ ಕೃಷ್ಣಬೈರೇಗೌಡ
ಸುವರ್ಣ ಸೌಧ : ಗರಡುಪಾಳ್ಯದ ಬಳಿಯ ಕೆರೆಯ ಜಮೀನು ಒತ್ತುವರಿ ಮಾಡಿರುವ ಕುರಿತು ಆರೋಪ ಕೇಳಿಬಂದಿದ್ದು, ಅದರಲ್ಲಿ ನನ್ನ ಹೆಸರು ಕೂಡಾ ತಳಕು ಹಾಕಲಾಗಿದೆ. ಒಂದು ವೇಳೆ ಒಂದು ಇಂಚು ಕೆರೆ ಜಮೀನು ಒತ್ತುವರಿ ಮಾಡಿದ್ದು ಸಾಬೀತಾದರೆ ಜಮೀನು ಬಿಟ್ಟುಕೊಡಲು ಸಿದ್ದನಿದ್ದೇನೆ, ಅಲ್ಲದೆ ಯಾವುದೇ ತನಿಖೆ ನಡೆಸಿ ಸಹಕರಿಸಲು ನಾನು ತಯಾರಿದ್ದೇನೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಶುಕ್ರವಾರ ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿದರು.
ಶುಕ್ರವಾರ ಮಧ್ಯಾಹ್ನ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕರಾದ ಆರ್. ಅಶೋಕ ಹಾಗೂ ಸುನಿಲಕುಮಾರ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಂಬAಧಿಸಿದAತೆ ಸ್ಪಷ್ಟನೆ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಮೈಸೂರು ರಸ್ತೆಯಲ್ಲಿರುವ ಗರುಡಪಾಳ್ಯದ ಬಳಿಯಲ್ಲಿ ಮೈಸೂರು ಮಹಾರಾಜ್‌ರಿಗೆ ಸೇರಿದ್ದ ಜಮೀನನ್ನು ನಮ್ಮ ತಾತಾ ಚೌಡೆಗೌಡ ಅವರು 1953 ರಲ್ಲಿ ಜಮೀನು 10 ವರ್ಷ ಲೀಜ್ ಪಡೆದು, ಬಳಿಕ 256 ಎಕರೆ ಜಮೀನು ಖರೀದಿಸಿದ್ದರು.
ಅಂದು ನಾನು ಹುಟ್ಟಿರಲಿಲ್ಲ. ಆದರೆ ಅದು ನಮ್ಮ ಕುಟುಂಬಸ್ಥರ ಸ್ವಂತ ಜಮೀನಾಗಿದ್ದು, ನಮ್ಮ ಚಿಕ್ಕಪ್ಪ ಸೇರಿ ಕೆಲವರು ಕೃಷಿ ವ್ವವಸಾಯ ಮಾಡಿದ್ದಾರೆ. ಅದರ ಬಳಿಯಲ್ಲಿ ಎರಡು ಕೆರೆಗಳಿವೆ. ಆದರೆ ಆ ಕೆರೆಗಿಂತಲೂ 15 ಅಡಿ ಎತ್ತರ ಜಮೀನು ಇದೆ. ಈ ಕೆರೆಗಳನ್ನು ನಾವು ಸ್ವಚ್ಚತೆ ಮಾಡಿ ನೀರು ಉಪಯೋಗಿಸುತ್ತೇವೆ. ಈ ಕೆರೆಯ ಒಂದು ಇಂಚು ಜಮೀನು ಒತ್ತುವರಿ ಮಾಡಿದ್ದು ಸಾಬೀತಾದರೆ ಜಮೀನು ಬಿಟ್ಟುಕೊಡಲು ನಾನು ಸಿದ್ದನಿದ್ದೇನೆ ಎಂದರು.
ಅಲ್ಲದೆ ನಾನು ಸಾರ್ವಜನಿಕ ಜೀವನದಲ್ಲಿ ಇರುವದರಿಂದ ನನ್ನನ್ನು ಕಂಡರೆ ಆಗದಿರುವವರು ಇದನ್ನು ಬಿಂಬಿಸಿದ್ದಾರೆ. ಈ ಕುರಿತು ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಆರ್. ಅಶೋಕ ಅವರ ಜೊತೆಗೆ ಚರ್ಚಿಸಿ, ಬಳಿಕ ಯಾವ ತನಿಖೆ ನಡೆಸಬೇಕು ಎಂದು ನೀವೇ ತೀರ್ಮಾಣ ತೆಗೆದುಕೊಂಡರೆ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ ಅವರಲ್ಲಿ ಸಚಿವ ಕೃಷ್ಣಬೈರೇಗೌಡ ವಿನಂತಿಸಿಕೊಂಡರು.