ಬಳ್ಳಾರಿ ನಗರದ ಮೂಲಭೂತ ಸೌಲಭ್ಯಗಳ ಕೊರತೆ
ಬಳ್ಳಾರಿ 09:ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ, ಮೇಯರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅನೇಕ ಬೇಡಿಕೆಗಳ ಕುರಿತು ಮೇಯರ್ ಅವರೊಂದಿಗೆ ಸುಧೀರ್ಘವಾದ ಚರ್ಚೆ ನಡೆಸಿ ಪಾಲಿಕೆಯ ವ್ಯಾಪ್ತಿಗೆ ಬರುವ ಎಲ್ಲಾ ಸಮಸ್ಯೆಗಳ ಕುರಿತು ನಿರ್ದಿಷ್ಟ ಪರಿಹಾರ ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿಯ ಸಂಚಾಲಕರಾದ ಸೋಮಶೇಖರ ಗೌಡ ಅವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಬಳ್ಳಾರಿಯಲ್ಲಿ ಆದ್ಯತೆಯ ಮೇರೆಗೆ ಯಾವುದೆ ಕೆಲಸಗಳು ನಡೆಯುತ್ತಿಲ್ಲ. ಸುಧಾ ಕ್ರಾಸ್ ಓವರ್ ಬ್ರಿಡ್ಜ್, ರಿಂಗ್ ರಸ್ತೆ ಇವು ಜನರ ಬಹುಕಾಲದ ಬೇಡಿಕೆಯಾಗಿದ್ದರೂ, ಇವುಗಳ ಬಗ್ಗೆ ಸರಿಯಾದ ಯೋಜನೆಯಿಲ್ಲ.
ಇಂದಿಗೂ ಅನೇಕ ಬಡಾವಣೆಗಳಲ್ಲಿ ಕುಡಿಯುವ ನೀರಿನೊಂದಿಗೆ ಚರಂಡಿ ನೀರು ಮಿಶ್ರಿತವಾಗಿ ಬರುತ್ತಿದೆ. ನೀರು ಸರಬರಾಜನ್ನು ಕರ್ನಾಟಕ ನೀರು ಸರಬರಾಜು ಹಾಗೂ ಒಳಚಂಡಿ ಇಲಾಖೆ (ಕೆಯುಡಬ್ಲ್ಯುಎಸ್) ನಿಂದ ಮಹಾನಗರಪಾಲಿಕೆಯು ವಹಿಸಿಕೊಂಡಾಗಿನಿಂದ ಇಂತಹ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗಿವೆ. ಬೀದಿ ನಾಯಿಗಳ ಹಾಗೂ ಬಿಡಾಡಿ ದನಗಳ ಕಾಟವಂತೂ ತೀವ್ರವಾಗಿದೆ. ಸ್ವಚ್ಛತೆಯನ್ನು ಕೂಡ ಕಡೆಗಣಿಸಲಾಗುತ್ತಿದೆ. ಬಳ್ಳಾರಿ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳು ಕೂಡ ಅತ್ಯಂತ ಜರೂರಾಗಿದೆ. ರಸ್ತೆ ನಿರ್ಮಾಣ ಸೇರಿದಂತೆ ಒಟ್ಟಾರೆ ಹೇಳಬೇಕೆಂದರೆ ಜನರ ಅವಶ್ಯಕತೆಗೆ ತಕ್ಕಂತೆ ವೈಜ್ಞಾನಿಕವಾಗಿ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಬದಲಿಗೆ ಸಾರ್ವಜನಿಕರ ಕೋಟ್ಯಾಂತರ ರೂಪಾಯಿ ತೆರಿಗೆ ಹಣವು ಅನಾವಶ್ಯಕ ಯೋಜನೆಗಳಿಗೆ, ಪಟ್ಟಭದ್ರ ಹಿತಾಸಕ್ತಿಗಳ ಉದೇಶಕ್ಕಾಗಿ ಖರ್ಚಾಗುತ್ತಿದೆ. ರಾಯಲ್ ವೃತ್ತದಲ್ಲಿ ಈ ಹಿಂದೆ ಹೊಸದಾಗಿ ಕಟ್ಟಿದ್ದ ಗಡಿಯಾರ ಕಂಬವನ್ನು ಕೆಡವಿ, 6.5 ಕೋಟಿ ಖರ್ಚು ಮಾಡಿ, ಈಗ ಮತ್ತೊಂದು ಕಂಬ ಕಟ್ಟುವ ಅವಶ್ಯಕತೆಯಿತ್ತೇ? ಎನ್ನುವುದೇ ದೊಡ್ಡ ಪ್ರಶ್ನೆ. ಈ ಕಾಮಗಾರಿಯು ಸಹ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿರುವ ಕಾರಣ, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಒಟ್ಟರೆಯಾಗಿ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ, ಎಲ್ಲಾ ಸರ್ಕಾರಗಳು ಜನರ ಕನಿಷ್ಠ ಅವಶ್ಯಕತೆ ಪೂರೈಸಲು ವಿಫಲವಾಗಿವೆ ಎಂದರು.
ಈ ಸಂಸರ್ಭದಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ಉದ್ದಿಹಾಳ್, ನೀರು ಸರಬರಾಜು ಇಲಾಖೆಯ ನಿವೃತ್ತ ನೌಕರರಾದ ಮುರ್ತುಜಾ ಸಾಬ್, ನಿವೃತ್ತ ಉಪನ್ಯಾಸಕರಾದ ನರಸಣ್ಣ, ಡಾ.ಪ್ರಮೋದ್, ಶಾಂತಾ, ನಾಗರತ್ನ, ಶರ್ಮಾಸ್, ವಿದ್ಯಾ, ಗುರುರಾಜ್, ಬಾಬು, ಚಂದ್ರಶೇಖರ್, ಶಬ್ಬೀರ್, ನಾಗಮ್ಮ ಮುಂತಾದವರು ಉಪಸ್ಥಿತರಿದ್ದರು.