ಕುರುಗೋಡು: ವಿಜೃಂಭಣೆಯಿಂದ ನಡೆದ "ಜನಪರ ಉತ್ಸವ" ಸಾಂಸ್ಕೃತಿಕ ಕಾರ್ಯಕ್ರಮ
ಬಳ್ಳಾರಿ,ನ.26: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುರುಗೋಡು ತಾಲ್ಲೂಕು ಆಡಳಿತ ಹಾಗೂ ಪುರಸಭೆ ಇವರ ಸಂಯುಕ್ತಾಶ್ರಯದಲ್ಲಿ ಕುರುಗೋಡು ಪಟ್ಟಣದ ಶ್ರೀ ದೊಡ್ಡಬಸವೇಶ್ವರ ದೇವಸ್ಥಾನ ಮುಂಭಾಗ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ "ಜನಪರ ಉತ್ಸವ" ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಬಳಿಕ ಮಾತನಾಡಿದ ಅವರು, ಅನಾದಿ ಕಾಲದಿಂದ ಕಲೆ, ಸಂಸ್ಕೃತಿ, ಸಂಭ್ರಮವನ್ನು ಬಿಂಬಿಸುವ ಜನಪದ ಕಲೆಗಳು, ಸರ್ವಕಾಲಕ್ಕೂ ಮನರಂಜನೆಯನ್ನು ನೀಡುವುದರ ಜೊತೆಗೆ ನಮ್ಮ ಭವ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿವೆ ಎಂದು ಹೇಳಿದರು. ಇಂದಿನ ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಇಂತಹ ಕಲೆಗಳನ್ನು ಕಲಿತು, ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಂದಿನ ಪೀಳಿಗೆಗೂ ತಲುಪಿಸುವ ಕೆಲಸ ಮಾಡಬೇಕು. ಸಾಂಸ್ಕೃತಿಕ ಕಲೆಗಳ ಮೇಲಿರುವ ಆಸಕ್ತಿಯಿಂದ ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಲೆಯಲ್ಲಿ ತೊಡಗಿಸಿಕೊಂಡವರು, ಉಳಿದವರಿಗಿಂತ ತಮ್ಮ ವ್ಯಕ್ತಿತ್ವದಲ್ಲಿ ಭಿನ್ನವಾಗಿರುತ್ತಾರೆ. ಅಂತವರು ಸಜ್ಜನಿಕೆ, ಸೌಮ್ಯತೆ, ಸಾಮಾಜಿಕ ಕಾಳಜಿ ಉಳ್ಳವರಾಗಿರುತ್ತಾರೆ ಎಂದರು. ಇಂದಿನ ವಿದ್ಯಾರ್ಥಿಗಳಿಗೆ ಇಂತಹ ಕಲೆಗಳ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ಆ ಮೂಲಕ ಮಕ್ಕಳಲ್ಲಿ ಕೌಶಲ್ಯ, ಜ್ಞಾನ, ಮೌಲ್ಯ ವೃದ್ಧಿಸಲು ಸಾಧ್ಯವಾಗುತ್ತದೆ. ಸಂಸ್ಕೃತಿ, ಸಾಂಸ್ಕೃತಿಕ ಕಲೆಯ ಪರಿಚಯದಿಂದ ವ್ಯಕ್ತಿತ್ವದಲ್ಲಿ ಬದಲಾವಣೆ ತರಲು ಸಾಧ್ಯ. ನಾಟಕ, ಯಕ್ಷಗಾನ, ಮುಂತಾದ ಕಲೆಗಳನ್ನು ಕಿರಿಯರಿಗೆ ಪರಿಚಯಿಸುವುದು ಅತಿ ಮುಖ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಂಗೀಲು, ಕೊಳಲುವಾದನ, ಕಂಸಾಳೆ, ವೀರಗಾಸೆ, ಪೂಜಾ ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಡೊಳ್ಳು ಕುಣಿತ, ಆಟಿ ಕಳಂಜ, ಬೇಡರ ಕುಣಿತ, ಕರಗ, ಕೋಲಾಟ, ಭರತನಾಟ್ಯ ಸಮೂಹ ನೃತ್ಯ, ತೊಗಲುಗೊಂಬೆಯಾಟ, ಜಾನಪದ ಸಮೂಹ ನೃತ್ಯ, ಪಟ ಕುಣಿತ, ನಂದಿಧ್ವಜ, ಚಿಲಿಪಿಲಿ ಗೊಂಬೆ ಮುಂತಾದ ಕಲಾ ತಂಡಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ಮನಸೊರೆಗೊಂಡವು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೊನ್ನುರಪ್ಪ, ತಹಸೀಲ್ದಾರ ರಾಘವೇಂದ್ರ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.