ಮುದ್ದೆಬಿಹಾಲ್

ಕನ್ನಡ ಸಾಹಿತ್ಯ ಲೋಕಕ್ಕೆ ಕುಮಾರವ್ಯಾಸನ ಕೊಡುಗೆ ದೊಡ್ಡದು: ಮಳಖೇಡ

ಕನ್ನಡ ಸಾಹಿತ್ಯ ಲೋಕಕ್ಕೆ ಕುಮಾರವ್ಯಾಸನ ಕೊಡುಗೆ ದೊಡ್ಡದು:  ಮಳಖೇಡ

ಮುದ್ದೇಬಿಹಾಳ 11:  ಕನ್ನಡ ಸಾಹಿತ್ಯ ಲೋಕಕ್ಕೆ ಕುಮಾರವ್ಯಾಸನ ಕೊಡುಗೆ ದೊಡ್ಡದು. ವ್ಯಾಸ ಮಹರ್ಷಿಗಳು ಸಂಸ್ಕೃತದಲ್ಲಿ ಬರೆದ ಮಹಾಭಾರತ ಕಥನವನ್ನು ಕನ್ನಡದಲ್ಲಿ ಬರೆದು ಕನ್ನಡಿಗರಿಗೆ ಅದರ ಪರಿಚಯವಾಗುವಂತೆ ಮಾಡಿದ ಕೀರ್ತಿ ಕುಮಾರವ್ಯಾಸನಿಗೆ ಸಲ್ಲುತ್ತದೆ ಎಂದು ನಾಲತವಾಡದ ವೀರೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಆರ್‌.ಮಳಖೇಡ ಹೇಳಿದರು.  

ಶನಿವಾರ  ಪಟ್ಟಣದ ಎಂ.ಜಿ.ಎಂ.ಕೆ. ವಿದ್ಯಾಸಂಸ್ಥೆಯ ಸಭಾಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕವು ಕಾಯಕಯೋಗಿ ಲಿಂ.ಗುರುಬಸವಾರ್ಯ ಮಠ ಮಾಸ್ತರರು, ಲಿಂ.ವಿರೂಪಾಕ್ಷಪ್ಪಗೌಡ ಹಿರೇಗೌಡರ ಮತ್ತು ಪಾರ್ವತಿದೇವಿ ಹಿರೇಗೌಡರ ಇವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯಕ್ಕೆ ಕುಮಾರವ್ಯಾಸರ ಕೊಡುಗೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.  

ಗದುಗಿನ ಕೋಳಿವಾಡದಲ್ಲಿ ಜನಿಸಿದ ನಾರಣಪ್ಪ ಕರ್ನಾಟಕ ಕಥಾಮಂಜರಿ ಅಥವಾ ಕನ್ನಡದ ಮಹಾಭಾರತ ರಚಿಸಿದ. ನಂತರ ನೂರಾರು ಸಾಹಿತಿಗಳು ಮಹಾಭಾರತದ ಬಗ್ಗೆ ದೊಡ್ಡ ದೊಡ್ಡ ಸಾಹಿತ್ಯಕೃತಿ ರಚಿಸಿದ್ದಾರಾದರೂ ಅದು ಕುಮಾರವ್ಯಾಸನ ಕೃತಿಯ ನೆರಳಲ್ಲಿಯೇ ಬರುತ್ತವೆ ಎಂದವರು ಹೇಳಿದರು. ಸಭೆಯನ್ನುದ್ದೇಶಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಎಸ್‌.ಬಿ.ಬಂಗಾರಿ, ಗೌರವ ಕಾರ್ಯದರ್ಶಿ ಶಶಿಕಾಂತ ಮಾಲಗತ್ತಿ, ಎಂ.ಜಿ.ಎಂ.ಕೆ. ಕಾಲೇಜಿನ ಪ್ರಾಚಾರ್ಯರಾದ ಎಸ್‌.ಕೆ.ಹರನಾಳ, ಎಂ.ಜಿ.ಎಂ.ಕೆ. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಜನಾರಾಯಣ ನಲವಡೆ ಮಾತನಾಡಿದರು. ವೇದಿಕೆಯಲ್ಲಿ ರಾಜು ತುಂಬಗಿ, ಆಡಳಿತಾಧಿಕಾರಿ ಮಹೇಶ ತೋಟದ, ಪರಿಷತ್ತಿನ ಖಜಾಂಚಿ ಪ್ರಶಾಂತ ಕಾಳೆ ಮತ್ತಿತರರು ಉಪಸ್ಥಿತರಿದ್ದರು.  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಎಚ್‌.ಹಾಲಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಜಿ.ಎಸ್‌.ವಾಲಿ ಸ್ವಾಗತಿಸಿದರು. ಡಾ.ಪಿ.ಎಚ್‌.ಉಪ್ಪಲದಿನ್ನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ಅಂಗಡಿ ನಿರೂಪಿಸಿದರು.  


ಸುದ್ದಿ ಓದಿ