ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಭವನ ಏಕತಾ ಮಹಲ್ ಆಗಲಿ: ಉಳ್ಳೇಗಡ್ಡಿ
ಮಹಾಲಿಂಗಪುರ 07: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಭವನ ಪಂಚಮಸಾಲಿ ಸಮುದಾಯವನ್ನು ಒಂದಾಗಿಸುವ ಏಕತಾ ಮಹಲ್ ಆಗಲೆಂದು ನಿವೃತ್ತ ಪ್ರಾಚಾರ್ಯ ಎಸ್.ಎಂ.ಉಳ್ಳೇಗಡ್ಡಿ ಹೇಳಿದರು.
ಸ್ಥಳೀಯ ರನ್ನಬೆಳಗಲಿ ಸರಹದ್ದಿನಲ್ಲಿರುವ ವೀರರಾಣಿ ಕಿತ್ತೂರು ಚೆನ್ನಮ್ಮ ಸಾಂಸ್ಕೃತಿಕ ಭವನದಲ್ಲಿ ರನ್ನಬೆಳಗಲಿ ಪಪಂ ನೂತನ ಸದಸ್ಯರಾಗಿ ಆಯ್ಕೆಯಾದ ಪಂಚಮಸಾಲಿ ಸಮಾಜದ ಅಭ್ಯರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದ ಹಿರಿಯ ಮುಖಂಡರಾದ ಡಾ.ಎ.ಆರ್.ಬೆಳಗಲಿ, ಸಿದ್ದು ಕೊಣ್ಣೂರ ಮಾತನಾಡಿ ತಾವು ಯಾವುದೇ ಪಕ್ಷದಲ್ಲಿರಿ ಸಮುದಾಯದ ವಿಷಯದಲ್ಲಿ ರಾಜಕೀಯ ಮಾಡಬೇಡಿ ಇದರಿಂದ ಸಮಾಜಕ್ಕೆ ಒಳಿತಾಗುವುದಿಲ್ಲ. ಎಲ್ಲರೂ ಒಂದಾಗಿ ಸಮುದಾಯವನ್ನು ಅಭಿವೃದ್ಧಿಪಥದತ್ತ ಸಾಗಿಸೋಣ ಎಂದರು.
ಹನಮಂತ ಶಿರೋಳ ಪ್ರಾಸ್ತಾವಿಕ ಮಾತನಾಡಿ, ಅಂದಾಜು 5.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಾಂಸ್ಕೃತಿಕ ಭವನಕ್ಕೆ ಈಗಾಗಲೇ 1.50 ಕೋಟಿ ವ್ಯಯವಾಗಿದೆ. ಶಾಸಕ ಸಿದ್ದು ಸವದಿ ಹಾಗೂ ಸಮಾಜದ ಇತರ ನಾಯಕರ ಯತ್ನದಿಂದ ಸರಕಾರ 1.50 ಕೋಟಿ ಅನುದಾನ ಮಂಜೂರು ಮಾಡಿದೆ. ಸಮಾಜದ ಗಣ್ಯರು ಕೂಡ ಲಕ್ಷಾಂತರ ರೂ.ದೇಣಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಪಂಚಮಸಾಲಿ ಸಮಾಜದ ಪ.ಪಂ ಸದಸ್ಯರಾದ ಕಾಶಿಬಾಯಿ ಪುರಾಣಿಕ, ಸಹನಾ. ಸಿದ್ದು. ಸಾಂಗ್ಲಿಕರ, ಮುತ್ತಪ್ಪ ಸಣಹಟ್ಟಿ ಹಾಗೂ ನೂತನ ಯುವ ವೈದ್ಯ ಡಾ. ಹರೀಷ್ ಬೆಳಗಲಿ ಅವರನ್ನು ಸನ್ಮಾನಿಸಲಾಯಿತು. ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ಡಾ.ಎ.ಆರ್.ಬೆಳಗಲಿ, ಹಿರಿಯರಾದ ಶ್ರೀಶೈಲಪ್ಪ ಉಳ್ಳಾಗಡ್ಡಿ, ಬಸಪ್ಪ ಕೊಪ್ಪದ, ಈರ್ಪ ದಿನ್ನಿಮನಿ, ಮಹಾಲಿಂಗಪ್ಪ ಕಂಠಿ, ಡಾ.ಅಶೋಕ ದಿನ್ನಿಮನಿ, ವಿಜಯ ಕುಳಲಿ, ಹನಮಂತ ಕೊಣ್ಣೂರ, ಚನ್ನಪ್ಪ ಪಟ್ಟಣಶೆಟ್ಟಿ, ಬಸವರಾಜ ಮೇಟಿ, ಬ್ಯಾಂಕ್ ವ್ಯವಸ್ಥಾಪಕ ಉರಬಿನ್ನವರ, ಡಾ. ಮಹೇಶ ನಾಗನೂರ, ಎಸ್.ಕೆ.ಗಿಂಡೆ ಇದ್ದರು.