ತೈಲಬೆಲೆ ಏರಿಕೆ ವಿರೋಧಿಸಿ ಕಿಸಾನ್ ಕಾಂಗ್ರೆಸ್ ಘಟಕದಿಂದ ಪ್ರತಿಭಟಟನೆ
ಮಹಾಲಿಂಗಪುರ 15 : ಪ್ರಸ್ತುತ ಕೇಂದ್ರದ ಜವಳಿ ಇಲಾಖೆ ಸಚಿವೆ ಸ್ಮೃತಿ ಇರಾನಿ ತೈಲ ಬೆಲೆ ಏರಿಕೆಗೆ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಬಳೆಗಳನ್ನು ಕಳುಹಿಸಲು ತಯಾರಿ ನಡೆಸಿದ್ದರು. ಇವತ್ತು ಆ ಬಳೆಗಳು ಎಲ್ಲಿವೆ, ನಿಮ್ಮ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಮನಸ್ಸೇಕೆ ಮಾಡುತ್ತಿಲ್ಲ ಎಂದು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ ತೇರದಾಳ ಮತಕ್ಷೇತ್ರದ ಕಿಸಾನ್ ಕಾಂಗ್ರೆಸ್ ರಾಜ್ಯ ಸಂಚಾಲಕ ಪದ್ಮಜೀತ ನಾಡಗೌಡ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ತೈಲಬೆಲೆ ಏರಿಕೆ ವಿರೋಧಿಸಿ ಮತಕ್ಷೇತ್ರದ ಕಿಸಾನ್ ಕಾಂಗ್ರೆಸ್ ಘಟಕದಿಂದ ಮಂಗಳವಾರ ನಗರದ ಅವರಾದಿ ಪೆಟ್ರೋಲ್ ಬಂಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಚೌಕಿದಾರನೆಂದು ಜನರಿಗೆ ಸುಳ್ಳು ಹೇಳಿ, ಸಾವಿರಾರು ಕೋಟಿ ಕೊಳ್ಳೆ ಹೊಡೆದು ಹೊರದೇಶಗಳಲ್ಲಿರುವ ಕಪ್ಪುಕುಳಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಎಂಥ ಚೌಕಿದಾರ ಎಂದು ವ್ಯಂಗ್ಯವಾಡಿದರು. ಯುವಕರಿಗೆ 1.10 ಕೋ ಉದ್ಯೋಗ ಸೃಷ್ಟಿ ಮಾಡುತ್ತೇನೆಂದು ಪಕೋಡ ಮಾಡಲು ಹೇಳಿದರು. ಇವತ್ತು ಅಡುಗೆ ತೈಲ 200ರೂಗಳಿಗೆ ಸಮೀಪಿಸಿದೆ. ಲಕ್ಷಾಂತರ ಕೋಟಿ ತೆರಿಗೆ ಹಣ ಸಂಗ್ರಹಿಸಿ, ಕೊರೋನಾ ಸಂಕಷ್ಟ ಕಾಲದಲ್ಲಿ ವ್ಯಾಕ್ಸಿನ್, ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡದೆ ಲಕ್ಷಾಂತರ ಜನ ದೇಶದಲ್ಲಿ ಮೃತರಾಗಿದ್ದಾರೆ. ಈ ತೆರಿಗೆ ಹಣದ ವಿವರ ಜನತೆಯ ಮುಂದೆ ಇಡಿ ಎಂದರು.ಅಲ್ಲದೆ ರಾಮಜನ್ಮಭೂಮಿಯಲ್ಲಿಯೂ ಭ್ರಷ್ಟಾಚಾರ ನಡೆದಿದ್ದು ಸುಪ್ರೀಂ ಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಕೊಡಿಸಬೇಕೆಂದು ಮನವಿ ಮಾಡಿದರು.
ಕಳೆದ 7ವರ್ಷಗಳಿಂದ ಕೇಂದ್ರ ಸರ್ಕಾರ 47ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಇಂಧನ ಬೆಲೆ ಹೆಚ್ಚಿಸಿದ್ದರ ಪರಿಣಾಮ ಪೆಟ್ರೋಲ್ ದರ 100ರ ಗಡಿ ದಾಟಿ ಅಜೇಯವಾಗುಳಿದಿದೆ. ಇದರಿಂದ ಬಡವ, ನೇಕಾರ, ರೈತ, ಮಧ್ಯಮವರ್ಗದವರ ಜೇಬಿನ ಮೇಲೆ ಹೊರೆ ಬೀಳುತ್ತಿದೆ. ಇದನ್ನು ಗಮನಿಸದೇ ದೇಶದ ದೊಡ್ಡ ದೊಡ್ಡ ಪೆಟ್ರೋಲಿಯಂ ಉದ್ದಿಮೆದಾರರ ಶ್ರೀಮಂತಿಕೆಯನ್ನೇ ಸರ್ಕಾರ ಹೆಚ್ಚಿಸುತ್ತಿದ್ದು ಇದು ಖಂಡನೀಯ.ಅಂದು ಚುನಾವಣೆಯಲ್ಲಿ ಬಾಬಾ ರಾಮದೇವ್, ಅರ್ನಾಬ್ ಗೋಸ್ವಾಮಿ 30- 35 ರೂಗಳಲ್ಲಿ ಪೆಟ್ರೋಲ್ ನೀಡುತ್ತೇವೆ ಎಂದು ಮುಗ್ಧ ಜನರನ್ನು ಪುಸಲಾಯಿಸಿ ಮತ ಪಡೆದರು. ಇವರು ಸುಳ್ಳು ಹೇಳುವುದೇ ಇವರ ಕಾಯಕವಾಗಿದೆ. ಆದಷ್ಟು ಬೇಗ ಬೆಲೆ ನಿಯಂತ್ರಣಕ್ಕೆ ತರಬೇಕೆಂದು ಕೇಂದ್ರವನ್ನು ಒತ್ತಾಯಿಸಿದರು.
ಬನಹಟ್ಟಿಯ ಕಾಂಗ್ರೆಸ್ ಹಿರಿಯ ಧುರೀಣ ಶಂಕರ ಸೋರಗಾವಿ ಮಾತನಾಡಿ, ಅಂದು ನಮ್ಮ ಯುಪಿಎ ಸರ್ಕಾರವಿದ್ದಾಗ ಕೇವಲ 1 ಅಥವಾ 2 ರೂಗಳ ಬೆಲೆ ಏರಿಕೆಯಾದ್ರೆ, ಇದೇ ಬಿಜೆಪಿಯವರು ಬೀದಿಗಿಳಿದು ಹೋರಾಟ ಮಾಡಿದ್ರು. ಅಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ಪೆಟ್ರೋಲ್ ದರ ಕೂಡ ಈಗಿನಕ್ಕಿಂತಲೂ ಎರಡರಷ್ಟು ಹೆಚ್ಚಿಗೆ ಇತ್ತು. ಇವತ್ತು ಬಿಜೆಪಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅತಿಯಾದ ತೆರಿಗೆ ಹೆಚ್ಚಿಸಿ ಸಾರಿಗೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆಗಳ ಮೇಲೂ ದುಷ್ಪರಿಣಾಮ ಬೀರಿ ರೈತ, ಕಡುಬಡವ ಹಾಗೂ ಮಧ್ಯಮವರ್ಗದವರ ಆದಾಯ ಹಾಗೂ ಖರ್ಚು-ವೆಚ್ಚಗಳು ಸರಿದೂಗದೇ ಇವರ ಬದುಕು ಬೀದಿಗೆ ಬಿದ್ದಿವೆ ಕೇಳುವವರಿಲ್ಲ. ಈಗಲಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಚ್ಚೆತ್ತು ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಕಡಿಮೆ ಮಾಡಿ ಇಲ್ಲ ಉಗ್ರ ಹೋರಾಟ ಎದುರಿಸಿ ಎಂದರು.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಯಲ್ಲನಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಬಲವಂತ ಗೌಡ ಪಾಟೀಲ್, ಬಸವರಾಜ ಬುರುಡ, ವಿಜುಗೌಡ ಪಾಟೀಲ್, ಸುನಿಲಗೌಡ ಪಾಟೀಲ್, ರಾಜು ಗೌಡಪ್ಪಗೋಳ, ಪರಸು ಮೇತ್ರಿ, ವಿಠ್ಠಲ್ ಕುಳಲಿ, ಅರ್ಜುನ್ ದೊಡಮನಿ, ದುಂಡಪ್ಪ ಕರಿಗಾರ್, ನೀಲೇಶ್ ದೇಸಾಯಿ, ಚೇತನ್ ಕಲಾಲ, ಅಶೋಕ್ ತಳವಾರ, ಮಹಾಲಿಂಗ ಮಾಳಿ, ಆನಂದ ಬಂಡಿ ಇನ್ನು ಮುಂತಾದವರಿದ್ದರು.