ಮಹಲಿಂಗಪುರ

ಡೊಳ್ಳಿನ ಪದಗಳ ಗಾಯಕ ವೆಂಕಪ್ಪ ಕೋಣಿಗೆ ಪಾರಿಜಾತ ಕಲಾವಿದೆ ದಿ. ಕೌಜಲಗಿ ನಿಂಗಮ್ಮ ಪ್ರಶಸ್ತಿ

ಡೊಳ್ಳಿನ ಪದಗಳ ಗಾಯಕ ವೆಂಕಪ್ಪ ಕೋಣಿಗೆ ಪಾರಿಜಾತ ಕಲಾವಿದೆ ದಿ. ಕೌಜಲಗಿ ನಿಂಗಮ್ಮ ಪ್ರಶಸ್ತಿ

ವರದಿ: ಹನಮಂತ ನಾವಿ  

ಮಹಾಲಿಂಗಪುರ 27: ಸಮೀಪದ ಮುಧೋಳ ತಾಲೂಕಿನ ರನ್ನ ಬೆಳಗಲಿ ಗ್ರಾಮದ ಡೊಳ್ಳಿನ ಪದಗಳ ಗಾಯಕ ವೆಂಕಪ್ಪ ಹಣಮಂತ ಕೋನ್ಯಾಗೋಳ (ಕೋಣಿ) ಅವರು ರಾಯಭಾಗ ತಾಲೂಕಿನ ಬ್ಯಾಕೋಡ್ ಗ್ರಾಮದ ಶ್ರೀ ಲಕ್ಕಮ್ಮದೇವಿ ಕಲಾ ಪೋಷಕ ಸಂಘ ನೀಡುವ ಖ್ಯಾತ ಪಾರಿಜಾತ ಕಲಾವಿದೆ ದಿ. ಕೌಜಲಗಿ ನಿಂಗಮ್ಮ 2024 ನೇ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

ಜೂನ್ 23ರಂದು ರವಿವಾರ ಬಾಗಲಕೋಟ ಜಿಲ್ಲೆಯ ಬಾದಾಮಿ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ಅಖಿಲ ಕರ್ನಾಟಕ ದ್ವಿತೀಯ ಬಯಲಾಟ ಉತ್ಸವ ಹಾಗೂ 4ನೇಯ ಜಾನಪದ ನೃತ್ಯ ಕಲಾಮೇಳ ಜರುಗಿದರ ಅಂಗವಾಗಿ ನಿಂಗಮ್ಮ ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ ವಿವಿಧ ಪ್ರಶಸ್ತಿಗಳ ವಿತರಣಾ ಸಮಾರಂಭ ನಡೆಯಿತು.ಈ ಸಮಯದಲ್ಲಿ ವೆಂಕಪ್ಪ ಕೋನ್ಯಾಗೋಳ ಡೊಳ್ಳಿನ ಗಾಯನಕ್ಕೆ ಪ್ರಶಸ್ತಿಯನ್ನು ಪಡೆದುಕೊಂಡರು. 

ಕಲಾ ಸೇವೆ: 68 ವಯಸ್ಸಿನ ವೆಂಕಪ್ಪ 2ನೇ ತರಗತಿ ವರೆಗೆ ಮಾತ್ರ ಓದಿದ್ದಾರೆ. ಕೃಷಿಕರಾದರೂ ಕಾಯಕದಲ್ಲಿ ತೊಡಗದೆ ಇವರು 40 ವರ್ಷಗಳಿಂದ ತಂದೆಯ ಡೊಳ್ಳಿನ ನಾದಕ್ಕೆ ಮಾರು ಹೋಗಿ ಡೊಳ್ಳು ಗಾಯನ ಆರಂಭಿಸಿದವರು. ವಿವಿಧ ಸಂಘ, ಸಂಸ್ಥೆಗಳಲ್ಲಿ ಕಲಾ ಸೇವೆ ಸಲ್ಲಿಸಿದ ಇವರು ತಾಳ ವಾದನ, ನಾಟಕಗಳಲ್ಲಿ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿ ಜನ ಮನ್ನಣೆ ಪಡೆದುಕೊಂಡಿದ್ದಾರೆ. 

ದೊರೆತ ಸಮ್ಮಾನಗಳು : ರಾಜ್ಯ ಮಟ್ಟದ ಸನಾದಿ ಅಪ್ಪಣ್ಣ ಕಲಾ ಪ್ರಶಸ್ತಿ, ಸುವರ್ಣ ಸಂಸ್ಕೃತಿ ದಿಬ್ಬಣ, ಜಾನಪದ ಸಂಸ್ಕೃತಿ ಸಂಭ್ರಮ, ನಿಜ ಶರಣ, ಜಾನಪದ ಮೇಳ, ರಾಜ್ಯ ಸಾಂಸ್ಕೃತಿಕ ಉತ್ಸವ, ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಡಾ.ಪಂ ಪುಟ್ಟರಾಜ ಗವಾಯಿ ಸೇವಾ ರತ್ನ ಪ್ರಶಸ್ತಿ, ಮಹಾಲಿಂಗಪುರದ ಜಾನಪದ ಶ್ರೀ ಪ್ರಶಸ್ತಿ, ರಾಜ್ಯ ಮಟ್ಟದ ಅಮೃತ ಮಹೋತ್ಸವ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 

ಸನ್ಮಾನಗಳು : ಬಾದಾಮಿ ತಾಲೂಕಿನ ಜುಮನಟ್ಟಿ ಜಾನಪದ ಕಲಾ ಮೇಳ, ಅಥಣಿ ತಾಲೂಕಿನ ಬೇಡರಹಟ್ಟಿ ಜಾನಪದ ಮೇಳ, ಕರ್ನಾಟಕ ಜಾನಪದ ಪರಿಷತ್ ಮುಧೋಳ ತಾಲೂಕು ಘಟಕ, ಕಲಾವಿದರ ಜಾನಪದ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಮುಧೋಳ, ಕರ್ನಾಟಕ ಜಾನಪದ ಪರಿಷತ್ ಜಮಖಂಡಿ, ಕನ್ನಡ ಸಾಹಿತ್ಯ ಪರಿಷತ್ತ್‌, ಜಿಲ್ಲಾ ಮಟ್ಟದ ಯುವ ಜನ ಮೇಳ, ಚಾಲುಕ್ಯ ಉತ್ಸವ ಬಾಗಲಕೋಟ ಹಬ್ಬ, ಲಕ್ಕುಂಡಿಯಲ್ಲಿ ಜಿಲ್ಲಾ ಮಟ್ಟದ ಕಲಾ ಮೇಳ ಮತ್ತು ನವರಾತ್ರಿ ಸಂಭ್ರಮ ಹೀಗೆ ನೂರಾರು ಗ್ರಾಮ ಪಟ್ಟಣಗಳಲ್ಲಿ ಇವರ ಕಲಾ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು, ಪುರ ಜನರು ಸನ್ಮಾನಿಸಿ ಗೌರವಿಸಿದ್ದಾರೆ. 


ಸುದ್ದಿ ಓದಿ