ಸಚಿವ ಉಮೇಶ ಕತ್ತಿ ಮತ್ತೊಂದು ಎಡವಟ್ಟು !
ಮಾಸ್ಕ್ ಹಾಕದೇ ಸಭೆ ನಡೆಸಿ ಬೇಜವಾಬ್ದಾರಿ ತೋರಿರುವುದಕ್ಕೆ ಟೀಕೆ
ಮಹಾಲಿಂಗಪುರ 20: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿಯವರು ಸದಾ ವಿವಾದಾತ್ಮಕ ಹೇಳಿಕೆ ಮತ್ತು ನಡೆಗಳ ಮೂಲಕ ವಿರೋಧಿಗಳಿಗೆ ಆಹಾರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಹೊಸದೇನಲ್ಲ.
ಇತ್ತೀಚೆಗೆ ಬನಹಟ್ಟಿಯಲ್ಲಿ ನೀಡಿದ ನೀವು ಸತ್ತರೂ ನಾನು ಬದುಕಬೇಕು ಎಂಬ ಹೇಳಿಕೆ ಮತ್ತು ಬೆಳಗಾವಿಯಲ್ಲಿ ಪಡಿತರ ಫಲಾನುಭವಿಗಳ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳು ರಾಜ್ಯಾದ್ಯಂತ ತೀವ್ರ ಟೀಕೆಗೆ ಗುರಿಯಾಗಿ ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದವು.
ಇವು ಜನಮಾನಸದಿಂದ ಮರೆಯಾಗುವ ಮೊದಲೇ ಸಮೀಪದ ಸೈದಾಪುರ ಗ್ರಾಮದಲ್ಲಿ ನಡೆದ ಪರೀಶೀಲನಾ ಮತ್ತು ಕಿಟ್ ವಿತರಣೆ ಸಭೆಯಲ್ಲಿ ಶಾಸಕ ಸಿದ್ದು ಸವದಿ, ಉಪ ವಿಭಾಗಾಧಿಕಾರಿ, ತಹಸಿಲ್ದಾರ್, ಪೋಲೀಸ್ ವೃತ್ತ ನೀರೀಕ್ಷಕ, ಬಿಇಓ, ಗ್ರಾಮ ಪಂಚಾಯಿತಿ ಆಡಳಿತ ಯಂತ್ರ ಮತ್ತು ಕೊರೋನಾ ವಾರಿಯರ್ಸ್ ಗಳಾದ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸಮ್ಮುಖದಲ್ಲಿ ಮಾಸ್ಕ್ ಹಾಕದೇ ಸಭೆ ನಡೆಸಿ ಬೇಜವಾಬ್ದಾರಿ ತೋರಿರುವುದು ತೀವ್ರ ಟೀಕೆಗೆ ಗುರಿಯಾಗಿದ್ದು ಸಾಮಾಜಿಕ ಜಾಲ ತಾಣಗಳಲ್ಲಿ ಮಾಸ್ಕ ಹಾಕದ ಭಾವಚಿತ್ರ ವೈರಲ್ ಆಗಿದೆ.
ಕೊರೋನಾ ಸಂಕಷ್ಟ ಹಾಗೂ ಸರಕಾರ ಕೈಗೊಂಡ ಕ್ರಮಗಳ ಬಗ್ಗೆ ತಾಸುಗಟ್ಟಲೆ ಭಾಷಣ ಬಿಗಿಯುವ ಸಚಿವರು, ನಾಯಕರು, ಮುಖಂಡರು ತಾವೇ ಆರೋಗ್ಯ ನಿಯಮಗಳನ್ನು ಗಾಳಿಗೆ ತೂರಿದರೆ ಹೇಗೆ ? ಹೀಗಾದಲ್ಲಿ ತಮ್ಮ ಸರ್ಕಾರ ಕೊರೋನಾ ಬಗ್ಗೆ ತೆಗೆದುಕೊಂಡ ಕಾಳಜಿ ಜನಸಾಮಾನ್ಯರು ಒಪ್ಪುವರೇ ? ಸರ್ಕಾರ ತೆಗೆದುಕೊಂಡಿರುವ ಕ್ರಮೋಪಾಯಗಳು ನಿಮಗೆ ಅನ್ವಯವಾಗುವುದಿಲ್ಲವೇ ? ಜನರಿಗೊಂದು ಕಾನೂನು ನಿಮಗೊಂದು ಕಾನೂನೇ ? ಜನಸಾಮಾನ್ಯ ಮಾಸ್ಕ್ ಇಲ್ಲದೇ ಓಡಾಡಿದರೆ ನಿಮ್ಮದೇ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿ ದಂಡ ಬಿಗಿಯುತ್ತಾರೆ. ಜವಾಬ್ದಾರಿ ಸ್ಥಾನದಲ್ಲಿರುವ ತಾವು ಈ ರೀತಿಯ ವರ್ತನೆ ಮಾಡಿರುವುದು ಕಾನೂನಿಗೆ ಮಾಡಿದ ಅಪಚಾರವಲ್ಲವೇ ? ಶಾಸಕರು, ಎಸಿ, ತಹಶೀಲ್ದಾರ್ , ಪೋಲೀಸ್ ಆರಕ್ಷಕ ಮುಂತಾದವರ ಸಮ್ಮುಖದಲ್ಲಿ ಮಾಸ್ಕ್ ಇಲ್ಲದೆ ಭಾಗವಹಿಸಿರುವುದು ಬೇಲಿ ಎದ್ದು ಹೊಲ ಮೇಯ್ದಂತೆ ಎಂದು ತೇರದಾಳ ಮತ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಕಟುವಾಗಿ ಟೀಕಿಸಿದ್ದಾರೆ.