ಮಹಲಿಂಗಪುರ

ಮುತಾಲಿಕ್ ಅವರಿಗೆ ಕಾರ್ಕಳ ಕ್ಷೇತ್ರದ ಬಿ ಫಾರಂ ನೀಡಲು ಶ್ರೀರಾಮ ಸೇನೆ ಆಗ್ರಹ

ಮುತಾಲಿಕ್ ಅವರಿಗೆ ಕಾರ್ಕಳ ಕ್ಷೇತ್ರದ ಬಿ ಫಾರಂ ನೀಡಲು ಶ್ರೀರಾಮ ಸೇನೆ ಆಗ್ರಹ

ಮಹಾಲಿಂಗಪುರ: ಕಾರ್ಕಳ ಕ್ಷೇತ್ರದ ಮತದಾರರ ಅಪೇಕ್ಷೆಯಂತೆ ಮೋದೀಜಿಯವರ ಕೈ ಬಲಪಡಿಸಲು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮೋದ್ ಮುತಾಲಿಕ್ ಅವರಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಬಿ ಫಾರಂ ನೀಡುವಂತೆ ಶ್ರೀರಾಮ ಸೇನಾ ರಾಜ್ಯಪ್ರಧಾನ ಕಾರ್ಯದರ್ಶಿ  ಮಹಾಲಿಂಗಪ್ಪ ಗುಂಜಿಗಾವಿ ಆಗ್ರಹಿಸಿದರು. 

ಸ್ಥಳೀಯ ಜಿಎಲ್ಬಿಸಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುತಾಲಿಕ್ ಅವರು ಕಳೆದ 47 ವರ್ಷಗಳಿಂದ ಮನೆ ಮಠ ಬಿಟ್ಟು ಬ್ರಹ್ಮಚಾರಿಯಾಗಿ ದೇಶ ಮತ್ತು ಧರ್ಮಕ್ಕಾಗಿ ಹಗಲಿರುಳು ಹೋರಾಡುತ್ತಿದ್ದಾರೆ. ಈ ಹಿಂದೆ ಸಿಕ್ಕ ಸಾಕಷ್ಟು ರಾಜಕೀಯ ಅವಕಾಶಗಳನ್ನು ತಿರಸ್ಕರಿಸಿ ಸಂಘಟನೆ ಮತ್ತು ಸಮಾಜ ಬಡಿದೆಬ್ಬಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಅವರ ಪಾತ್ರ ಅಗ್ರಗಣ್ಯ.

ಪ್ರಸಕ್ತ ಸನ್ನಿವೇಶದಲ್ಲಿ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಹಿಂದೂ ನಾಯಕರು ಮತ್ತು ಕಾರ್ಯಕರ್ತರ ಕಡೆಗಣನೆ ಮುಂತಾದ ಕುಲಗೆಟ್ಟ ಪರಿಸ್ಥಿತಿಗಳಲ್ಲಿ ಪ್ರಮೋದ್ ಮುತಾಲಿಕ್ ಅವರು ಸೂಕ್ತ ವ್ಯಕ್ತಿ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರ ತೀರ್ಮಾನಿಸಿದ್ದು,ಅವರಿಗೆ ಬಿ ಫಾರ್ಮಿ  ನೀಡಬೇಕು ತಪ್ಪಿದಲ್ಲಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿಸುತ್ತಿದ್ದು ಬಿಜೆಪಿ ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಹಾಕದೆ ಮುತಾಲಿಕ್ ಅವರನ್ನು ಬಿಜೆಪಿ ಬೆಂಬಲಿಸಬೇಕು, ಇಡೀ ರಾಜ್ಯದ ಶ್ರೀರಾಮ ಸೇನಾ ಬಲವನ್ನು ಮುತಾಲಿಕ್ ಅವರ ಗೆಲುವಿಗೆ ಹಾಕುವುದಾಗಿ ಹೇಳಿದ ಅವರು, ರಾಜ್ಯ ಮತ್ತು ರಾಷ್ಟ್ರ ನಾಯಕರು, ಪಕ್ಷದ ವರಿಷ್ಠರು ಮುತಾಲಿಕ್ ಅವರನ್ನು ಬೆಂಬಲಿಸಬೇಕೆಂದರು. 

ಶ್ರೀರಾಮ ಸೇನಾ ಜಿಲ್ಲಾಧ್ಯಕ್ಷ ಅನಿಲ ಕಿರಿಕಿರಿ, ವಿಭಾಗ ಕಾರ್ಯದರ್ಶಿ ವಿಷ್ಣುಗೌಡ ಪಾಟೀಲ, ಈಶ್ವರ ಕ್ವಾಣ್ಯಾಗೋಳ, ಮಹಾಂತೇಶ ಗುಡೆಜಾಡರ, ರಾಘು ಚಿಂಚಲಿ, ಅನಿಲ ಹೊನ್ನಪ್ಪಗೋಳ, ಚೇತನ ಬಾರಕೋಲ, ಪ್ರವೀಣ ಕಂಬಾರ, ಪ್ರಫುಲ್ ಚಮಕೇರಿ, ಮಲ್ಲು ನಾವಿ,ರವಿ ಹುಣಿಶ್ಯಾಳ, ಸಂತೋಷ ಬಂಡಿವಡ್ಡರ, ಮಹಾಂತೇಶ್ ಪಾತ್ರೋಟ ಇದ್ದರು.

ಸುದ್ದಿ ಓದಿ