ಪಾಮನಕಲ್ಲೂರಿನ ಕೆಸರುಗದ್ದೆಯಾದ ಕಾನ್ಯಾಳ ರಸ್ತೆ; ಸಂಚರಿಸಲಾಗದೆ ಮಕ್ಕಳ ಹೈರಾಣ
ರಾಯಚೂರು (ಮಾ.25): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ಹೊರವಲಯದಲ್ಲಿರುವ (ರಾಯಚೂರು - ಲಿಂಗಸುಗೂರು ಮುಖ್ಯ ರಸ್ತೆಯ ಬಲಭಾಗದಲ್ಲಿ) ಪರಿಶಿಷ್ಟ ಪಂಗಡದ ವಾಲ್ಮೀಕಿ ನಾಯಕ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವ ಕಾನ್ಯಾಳ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದಾಗಿ ಕೆಸರು ಗದ್ದೆಯಂತಾಗುತ್ತಿದ್ದು, ಆ ಭಾಗದಿಂದ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು, ದಿನನಿತ್ಯದ ವ್ಯವಹಾರಕ್ಕಾಗಿ ಪಾಮನಕಲ್ಲೂರು ಗ್ರಾಮಕ್ಕೆ ಸಂಚರಿಸುವ ಜನರು ಹೈರಾಣಾಗಿದ್ದಾರೆ.
ಕಾನ್ಯಾಳ ಭಾಗದಿಂದ ದಿನನಿತ್ಯ 20ಕ್ಕೂ ಹೆಚ್ಚು ಮಕ್ಕಳು ಪಾಮನಕಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾಭ್ಯಾಸ ಮಾಡಲು ತೆರಳುತ್ತಾರೆ. ಅಷ್ಟೇ ಅಲ್ಲದೇ ಅನೇಕ ಜನ ವಿದ್ಯಾರ್ಥಿಗಳು ಪ್ರೌಢ ಶಾಲೆ, ಕಾಲೇಜುಗಳಿಗೆ ತೆರಳುತ್ತಾರೆ. ದಿನನಿತ್ಯ ನೂರಾರು ಜನರು ದಿನನಿತ್ಯದ ವ್ಯವಹಾರಕ್ಕಾಗಿ ಪಾಮನಕಲ್ಲೂರು ಗ್ರಾಮಕ್ಕೆ ಸಂಚರಿಸುತ್ತಾರೆ. ನಡೆದುಕೊಂಡು ಬರುವವರು, ದ್ವಿಚಕ್ರ ವಾಹನ ಸವಾರಿ ಮಾಡುವವರು ಸೇರಿದಂತೆ ಪ್ರತಿಯೊಬ್ಬರೂ ಇದೇ ರಸ್ತೆಯಲ್ಲೇ ಸಂಚರಿಸಬೇಕಾಗಿದೆ. ಆದರೆ ಮಳೆ ಬಂದಾಗಲೆಲ್ಲಾ ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ನಡೆದುಕೊಂಡು ಹೋಗುವವರು ತಮ್ಮ ಚಪ್ಪಲಿಗಳನ್ನು ಕೈಯಲ್ಲಿಡಿದು ಬರಿಗಾಲಲ್ಲಿ ಸಾಗಬೇಕಾದ ಪರಿಸ್ಥಿತಿ ಮಳೆಗಾಲದಲ್ಲಿ ಎದುರಾಗುತ್ತದೆ.
ನಮ್ಮ ರಸ್ತೆಯನ್ನು ಸರಿಪಡಿಸಿಕೊಡಿ, ನಮಗೆ ಶಾಶ್ವತ ಪರಿಹಾರ ನೀಡಿ, ಸಿಸಿ ರಸ್ತೆ ನಿರ್ಮಿಸಿಕೊಡಿ ಎಂದು ನಾವು ಈಗಾಗಲೇ ಸಾಕಷ್ಟು ಬಾರಿ ನಮ್ಮ ಭಾಗದ ಸಂಸದರಿಗೂ, ಶಾಸಕರಿಗೂ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿ ಅಧಿಕಾರಿಗಳಿಗೂ ಮನವಿ ಮಾಡಿದ್ದೇವೆ. ಆದರೇ ಅವರು ಕಳೆದ ಕೆಲ ವರ್ಷಗಳ ಹಿಂದೆ ಮಣ್ಣು ಹಾಕಿ ರಸ್ತೆ ದುರಸ್ತಿ ಮಾಡಿದ್ದರು. ಆ ಬಳಿಕ ರಸ್ತೆ ಮತ್ತಷ್ಟು ಹದಗೆಟ್ಟಿದೆ ಎಂದು ಕಾನ್ಯಾಳ ಭಾಗದ ಜನರು ಆರೋಪಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪಿಡಿಒ ಮಲ್ಲಯ್ಯ:ಆ ಭಾಗದ ಜನರ ಒತ್ತಾಯದ ಮೇರೆಗೆ ಕಾನ್ಯಾಳ ಭಾಗಕ್ಕೆ ಬುಧವಾರ ಮಧ್ಯಾಹ್ನದ ವೇಳೆಗೆ ಭೇಟಿ ನೀಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲಯ್ಯರವರು, ಕೆಸರು ಗದ್ದೆಯಂತಾದ ರಸ್ತೆಯಲ್ಲೇ ಸಂಚರಿಸಿ, ಪರೀಶೀಲನೆ ನಡೆಸಿದರು.ನಿತ್ಯ ನರಕ ಅನುಭವಿಸುತ್ತಿರುವ ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನ್ಯಾಳ ಭಾಗದ ಜನರ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಿಕೊಡಲಿ. ಆ ಭಾಗದ ಜನರ ನೋವಿಗೆ ಸಂಬಂಧಿಸಿದವರು ಸ್ಪಂದಿಸಲಿ ಎಂಬುದು ಈ ವರದಿಯ ಆಶಯವಾಗಿದೆ.