ಬಳ್ಳಾರಿ

ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ: ಗುರುಪ್ರಸಾದ್

ಕುವೆಂಪು ಅವರ ಕಾನೂರು ಹೆಗ್ಗಡತಿ ಕಾದಂಬರಿ: ಗುರುಪ್ರಸಾದ್

ಬಳ್ಳಾರಿ05:  ಕುವೆಂಪು ಅವರ ಮಲೆನಾಡಿನ ಚಿತ್ರ ವಿಚಿತ್ರವಾದ ಭವ್ಯತೆಯ ವಸ್ತುಗಳು ಕಾನೂರು ಹೆಗ್ಗಡತಿ ಕಾದಂಬರಿಗೆ ಆಧಾರವಾಗಿವೆ. ರಾಷ್ಟ್ರಾಭಿಮಾನ, ಸೌಂದರ್ಯ ಪ್ರಜ್ಞೆ, ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಬೇಂದ್ರೆಯಿಂದ ಯುಗದ ಕವಿ, ಜಗದ ಕವಿ ಎನ್ನಿಸಿಕೊಂಡಿರುವ ಕುವೆಂಪುರವರು ಈ ದೇಶದ ತಳ ಸಮುದಾಯದ ಉತ್ಕರ್ಷದ ಪ್ರತಿನಿಧಿಯೆಂದು ಹೇಳಿಕೊಂಡಿದ್ದಾರೆ. ಈ ಕಾದಂಬರಿಯನ್ನು ಒಟ್ಟು ಜೀವನ ದರ್ಶನದ ಅನನ್ಯ ಕೊಡುಗೆಯಾಗಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅವರೇ ಹೇಳುವಂತೆ ಕಾದಂಬರಿಯನ್ನು ಓದುವ ವಾಚಕರು ನಾಟಕ ನೋಡುವ ವೀಕ್ಷಕರಾಗಬೇಕೆಂದು ಹೇಳಿಕೊಂಡಿದ್ದಾರೆ. ಜೊತೆಗೆ ಈ ಕಾದಂಬರಿಯನ್ನು ಕೋಲಾಹಲಕ್ಕಾಗಿ ಓದಬೇಡಿ ಸಾವಧಾನವಾಗಿ ಸಚಿತ್ರವಾಗಿ ಓದಿ ಗ್ರಹಿಸಿಕೊಳ್ಳಬೇಕೆಂದು ಕುವೆಂಪುರವರು ಅವರ ಕಾದಂಬರಿಯ ಅರಕೆಯಲ್ಲಿ ಹೇಳಿಕೊಂಡಿದ್ದಾರೆ ಎಂದು ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಸಿ.ಟಿ.ಗುರುಪ್ರಸಾದ್‌ರವರು ಹೇಳಿದರು. 

ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಸೆಮಿನಾರ್ ಹಾಲ್‌ನಲ್ಲಿ ನಡೆದ ದೇಸಿ ಮಾತು-23 ಸಂವಾದ ಕಾರ್ಯಕ್ರಮದಲ್ಲಿ “ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಒಕ್ಕಲುತನ” ಎಂಬ ವಿಷಯದ ಕುರಿತು ಬುಧವಾರ ಪಿಎಚ್‌.ಡಿ. ಸಂಶೋಧನಾ ವಿದ್ಯಾರ್ಥಿ ಓಬಳೇಶ ಎಂ ಅವರು ವಿಷಯ ಮಂಡನೆ ಮಾಡಿದರು. 

ಕಾನೂರು ಹೆಗ್ಗಡತಿ ಕಾದಂಬರಿಯಲ್ಲಿ ಕುವೆಂಪು ಅವರು ಅಧಿಕಾರಿಶಾಹಿ ವರ್ಗ ಹಾಗೂ ಶ್ರಮಿಕ ವರ್ಗದ ಕುರಿತು ಹೂವಯ್ಯ ಪಾತ್ರದ ಮೂಲಕ ಕೃಷಿ ಮತ್ತು ಒಕ್ಕಲುತನದವರ ನೋವುಗಳ ಕುರಿತಂತೆ ವಿಷಯ ವಿಸ್ತಾರವನ್ನು ಮಾಡುತ್ತಾ ಹೋಗಿದ್ದಾರೆ. ಸುಬ್ಬಮ್ಮನ ಪಾತ್ರದ ಮೂಲಕ ಪ್ರಸ್ತುತ ಕಾಲಮಾನದ ವ್ಯವಸಾಯ ಪದ್ಧತಿ ಹಾಗೂ ಅಧಿಕಾರಶಾಹಿ ವರ್ಗದ ದಬ್ಬಾಳಿಕೆಯನ್ನು ಚಂದ್ರಯ್ಯಗೌಡ ಪಾತ್ರದ ಮೂಲಕ ವಿವರಿಸುತ್ತಾ ಹೋಗಿದ್ದಾರೆ. ಕಾದಂಬರಿಯಲ್ಲಿ ಸುಬ್ಬಮ್ಮ ದುರಂತ ಮಹಿಳೆಯಾಗಿ ಕಂಡುಬಂದಿದ್ದು ಒಕ್ಕಲುತನದ ಮೂಲಕ ಜಮೀನ್ದಾರಿಕೆಯನ್ನು ಮೈಗೂಡಿಸಿಕೊಂಡು ಮಹಿಳಾ ಶೋಷಣೆ ಹಾಗೂ ಆಕೆಯ ಮಾನಸಿಕ ತಲ್ಲಣಗಳಿಂದ ಜೀವನವನ್ನೇ ಕಳೆದುಕೊಳ್ಳುವ ಹಂತವನ್ನು ಗ್ರಹಿಸಬಹುದು. ಜಮೀನ್ದಾರಶಾಹಿ ವ್ಯವಸ್ಥೆಯಿಂದ ಕುವೆಂಪುರವರು ಬಂದಿದ್ದರೂ ಕೂಡ ಒಕ್ಕಲುತನದ ಬದುಕಿನಲ್ಲಿ ಅಪಾರವಾದ ಒಲವು ಇರುವುದನ್ನು ಸಾಹಿತ್ಯದಲ್ಲಿ ಗುರುತಿಸಬಹುದಾಗಿದೆ. ಆ ಕಾಲಘಟ್ಟದ ಭೂಮಾಲೀಕರಿಗೆ ಸಾಮಾಜಿಕ ಪ್ರತಿಷ್ಟೆಯು ಬಹುಮುಖ್ಯವಾಗಿತ್ತು. ಕುವೆಂಪುರವರು ಇಂತಹ ಜಮೀನ್ದಾರಿ ವ್ಯವಸ್ಥೆಯ ವಿರುದ್ಧವಾಗಿದ್ದರೂ ಕೂಡ ನೇರವಾಗಿ ಪ್ರತಿಭಟಿಸದೆ ಮಾನವೀಯತೆಯಿಂದ ಆಂತರಿಕವಾಗಿ ಪ್ರತಿಭಟಿಸುವುದನ್ನು ಕಾಣಬಹುದು. ಒಕ್ಕಲುತನ ಮಾಡುವವರ ಬದುಕಿನಲ್ಲಿ ಹೂವಯ್ಯ ಬದಲಾವಣೆಗಳನ್ನು ತರಲು ಈ ಕಾದಂಬರಿಯ ಮೂಲಕ ಪ್ರಯತ್ನಿಸಿದನು. ತನ್ನ ಅಂತರಾಳದ ಮಾನವೀಯ ಗುಣಗಳಿಂದ ಒಕ್ಕಲುತನ ಸಮುದಾಯದ ಜನರನ್ನು ಪ್ರೀತಿ, ವಿಶ್ವಾಸಗಳಿಂದ ನಾವು ನಮ್ಮವರೆನ್ನುವ ಮನೋಭಾವನೆಯಿಂದ ನಡೆಸಿಕೊಂಡು ಅವರಲ್ಲಿ ಸುಧಾರಣೆಗೆ ಮುಂದಾದರು ಎಂದು ತಿಳಿಸಿದರು. 

ಸಂಶೋಧನಾ ವಿದ್ಯಾರ್ಥಿ ಓಬಳೇಶ ಎಂ. ಮಾತನಾಡುತ್ತ ಈ ಕಾದಂಬರಿಯಲ್ಲಿ ಒಕ್ಕಲುತನ ಮಾಡುವವರ ಜೀವನವು ಅತ್ಯಂತ ನಿಕೃಷ್ಟವಾಗಿರುವುದನ್ನು ಕುವೆಂಪುರವರು ನಿರೂಪಿಸಿದ್ದಾರೆ. ಒಕ್ಕಲು ಮಕ್ಕಳು ಜೀತ ಪದ್ಧತಿಯಲ್ಲಿ ತಮ್ಮ ಜೀವನವನ್ನೇ ತೋಯ್ದು ಉಸಿರು ನಿಲ್ಲುವ ಚಿತ್ರಣ ಓದುಗರ ಮನಸನ್ನು ಸೆಳೆಯುತ್ತಿದೆ. ಚೆಂದ್ರಯ್ಯಗೌಡ ಒಕ್ಕಲುತನ ಮಾಡುವವರನ್ನು ವಿಶ್ರಾಂತಿ ಇಲ್ಲದಂತೆ ಗುಲಾಮರಂತೆ ನಡೆಸಿಕೊಳ್ಳುವ ಅಮಾನವೀಯ ಸನ್ನಿವೇಶಗಳನ್ನು ಕಾಣಬಹುದಾಗಿದೆ. ಉದಾಹರಣೆಗೆ ನಂಜ, ಬೇಲಾರ ಬೈರ, ಸೋಮ, ಸಿದ್ದ ಮುಂತಾದ ಒಕ್ಕಲು ಮಕ್ಕಳು ಮುಂತಾದವರು ಗುಲಾಮರಾಗಿರುವುದನ್ನು ಕಾಣಬಹುದು. ಸ್ವಾಭಿಮಾನದ ಸ್ವತಂತ್ರ ರಹಿತರಾಗಿ ಒಕ್ಕಲುತನ ಮಾಡುವವರು ತಮ್ಮ ಅಸ್ಥಿತ್ವವೇ ಇಲ್ಲದಂತೆ ಪರಾವಲಂಬಿಗಳಾಗಿ ಭೂಮಿಯ ಒಡೆತನ ಇಲ್ಲದೆ ಕೇವಲ ಧಾನ್ಯದ ರೂಪದ ಅನ್ನಕ್ಕಾಗಿ ಭೂಮಾಲೀಕರ ಮನೆಯಲ್ಲಿ ಜೀತಗಾರಿಕೆ, ಹೊಟ್ಟೆ ಬಟ್ಟೆಗೆ ಪರದಾಡುವ ಸ್ಥಿತಿಯನ್ನು ಇಲ್ಲಿ ಕಾಣಬಹುದಾಗಿದೆ. 

ಸಂವಾದದಲ್ಲಿ ವಿಭಾಗದ ಸಂಶೋಧನಾರ್ಥಿಗಳು ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಡಾ. ಸಿ.ಟಿ.ಗುರುಪ್ರಸಾದ್ ಮುಖ್ಯಸ್ಥರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರು ಉಪಸ್ಥಿತರಿದ್ದರು. ಸಂಶೋಧನಾರ್ಥಿ ರಾಮಚಂದ್ರ ಲಕ್ಕಳ್ಳಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರೆ, ಸತೀಶ್ ಅವರ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ವೇದಿಕೆಯಲ್ಲಿದ್ದ ಉಪಸ್ಥಿತರನ್ನು ಯಮನೂರ​‍್ಪ ಸ್ವಾಗತಿಸಿದರು. ರಾಧಕೃಷ್ಣ ಡಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ವಂದಿಸಿದರು. ಸಂಶೋಧನಾರ್ಥಿ ಚಂದ್ರಶೇಖರ​‍್ಪ ಹೆಚ್ ಹಾಗೂ ಪಂಪಾಪತಿ ವಿ ಅವರು ಕಾರ್ಯಕ್ರಮದ ವರದಿ ಮಾಡಿದರು. 


ಸುದ್ದಿ ಓದಿ