ಕನ್ನಡ ಜ್ಞಾನ ಮಾತ್ರವಲ್ಲ ಪರಿಜ್ಞಾನದ ಭಾಷೆ : ಡಾ.ಮಾಟೋಳಿ
ಮಹಾಲಿಂಗಪುರ: ಕನ್ನಡ ಜ್ಞಾನ ಮಾತ್ರವಲ್ಲ ಪರಿಜ್ಞಾನದ ಭಾಷೆಯಾಗಿದೆ. ತಾಂತ್ರಿಕ ಕ್ಷೇತ್ರದಲ್ಲಿ ಇಂಗ್ಲೀಷ್ ಭಾಷೆ ಹೇರಳವಾದರೂ ಕನ್ನಡ ವಿರಳವಾಗದಂತೆ ನೋಡಿಕೊಳ್ಳಬೇಕು. ಟೆಕ್ಕಿಗಳ ತೆಕ್ಕೆಯಲ್ಲೂ ಕನ್ನಡ ಕಲರವಿಸಬೇಕು ಎಂದು ಜಮಖಂಡಿಯ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಬಿ.ಮಾಟೋಳಿ ಹೇಳಿದರು.
ಸ್ಥಳೀಯ ಕೆಎಲ್ಇ ಪಾಲಿಟೆಕ್ನಿಕ್ನಲ್ಲಿ ಗುರುವಾರ ನ.2ರಂದು ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವುದೇ ಕ್ಷೇತ್ರದಲ್ಲೂ ಕನ್ನಡದ ಖದರ್ ಕಡಿಮೆಯಾಗದಂತೆ ಕಾಳಜಿ ವಹಿಸಬೇಕೆಂದರು.
ಪ್ರಾಚಾರ್ಯ ಎಸ್.ಐ.ಕುಂದಗೋಳ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯೋತ್ಸವ ಬರೀ ಧ್ವಜಾರೋಹಣಕ್ಕೆ ಸೀಮಿತವಲ್ಲ, ನಿತ್ಯೋತ್ಸವದಂತೆ ಭಾಷಾ ಪ್ರೇಮ ಮೆರೆದರೆ ಮಾತ್ರ ರಾಜ್ಯೋತ್ಸವಕ್ಕೆ ಅರ್ಥ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ನಾಡಿನ ವಿಶಿಷ್ಠ ಸಂಸ್ಕೃತಿ ಬಿಂಬಿಸುವ ಸಾಂಪ್ರದಾಯಿಕ ಉಡುಗೆಯಲ್ಲಿ ಫ್ಯಾಶನ್ ಶೋ ಮಾಡಿದರು. ಕೊಡಗು, ಹುಬ್ಬಳ್ಳಿ, ರಾಯಣ್ಣ, ಸಿಂಧೂರ ಲಕ್ಷ್ಮಣ ಭಂಗಿಯಲ್ಲಿ ಗಮನ ಸೆಳೆದರು. ಕನ್ನಡ ಹಾಡುಗಳಿಗೆ ನೃತ್ಯಪ್ರದರ್ಶನ ಮಾಡಿದರು. ಹಿಂದಿನ ದಿನ ವಿದ್ಯಾರ್ಥಿಗಳಿಗೆ ರಂಗೋಲಿ, ಗಾಯನ ಸ್ಪರ್ಧೆ ಏರಿ್ಡಸಲಾಗಿತ್ತು. ಕಾಲೇಜಿನ ಆವರಣದಲ್ಲಿ ಸಾಲು ಗಿಡಗಳ ಮೇಲೆ ನಾಡಧ್ವಜ ಹಾರಿಸಿ ಅಲಂಕರಿಸಲಾಯಿತು.
ಗುರುರಾಜ ಅಥಣಿ ನಿರೂಪಿಸಿದರು. ಚೈತ್ರಾ ಹುದ್ದಾರ ಸ್ವಾಗತಿಸಿದರು. ಮಹಾದೇವಿ ಅಂಬಿ ವಂದಿಸಿದರು. ನಿರ್ಮಲಾ ಫಕಿರಪುರ, ಉಮೇಶ ಹಾದಿಮನಿ, ಸುಭಾಸ್ ಮೂಶಿ, ವಂದನಾ ಪಸಾರ, ಅಮಿತ ಜಾಧವ, ಸವಿತಾ ಗೊಂದಿ, ಮಿನಾಜ ಅತ್ತಾರ, ಈಶ್ವರ ಹೂಲಿ, ಮಂಜುನಾಥ ಅರಕೇರಿ ಇದ್ದರು.