ಆಂಗ್ಲಮಾಧ್ಯಮ ಶಾಲೆಯಲ್ಲಿ ಕಲರವಿಸಿದ ಕನ್ನಡ ಸಂಸ್ಕೃತಿ
ಮಹಾಲಿಂಗಪುರ 17: ಸಮೀಪದ ಢವಳೇಶ್ವರ ಗ್ರಾಮದ ವಿವೇಕಾನಂದ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ಅಪ್ಪಟ ಕನ್ನಡ ಸಂಸ್ಕೃತಿಯ ಕಲರವದ ರಾಜ್ಯೋತ್ಸವ ಕಾರ್ಯಕ್ರಮ ಮನಮೋಹಕವಾಗಿ ಜರುಗಿತು.
1ರಿಂದ 5ನೇ ತರಗತಿ ವಿದ್ಯಾರ್ಥಿಗಳು ನಾಡಗೀತೆ ಹಾಡಿ, ವಚನ ಹೇಳಿ, ಕನ್ನಡ ನಾಡಿನ ಹಿರಿಮೆ ಬಗ್ಗೆ ಭಾಷಣ ಮಾಡಿ, ದೇಸಿ ಉಡುಗೆಯಲ್ಲಿ ಜಾನಪದ ಹಾಡುಗಳಿಗೆ ನೃತ್ಯ ಮಾಡಿ ರಂಜಿಸಿದರು.
ನಾಡಿನ ದಿಗ್ಗಜರ, ಮಹನೀಯರ ಛದ್ಮವೇಷದಲ್ಲಿ ಕಂಗೊಳಿಸಿದರು. ಚಿತ್ರದುರ್ಗದ ಓಬವ್ವ ನುಸುಳುಕೋರರನ್ನು ಕೊಂದು ಅಮರಳಾದ ವೀರಗಾಥೆಯ ನಾಟಕವನ್ನು ತಮ್ಮ ವೀರಾಭಿನಯದ ಮೂಲಕ ಪ್ರದರ್ಶಿಸಿ ವಿಶೇಷ ಪ್ರಶಂಸೆಗೆ ಪಾತ್ರರಾದರು.
ವಿದ್ಯಾರ್ಥಿಗಳಿಗೆ ರಾಜ್ಯೋತ್ಸವ ನಿಮಿತ್ತ ಏರಿ್ಡಸಿದ್ದ ನಾನಾ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ ವಿತರಿಸಲಾಯಿತು. ಎಲ್ಲ ಮಕ್ಕಳ ಪಾಲಕರನ್ನು ಕರೆಸಿ ಹೊನಲು ಬೆಳಕಿನಲ್ಲಿ ರಾರಾಜಿಸುವಂತೆ ರಾಜ್ಯೋತ್ಸವವನ್ನು ಆಚರಿಸಿದ್ದು ಗ್ರಾಮಸ್ಥರಲ್ಲಿ ಸಂಚಲನ ಉಂಟು ಮಾಡಿತು.
ಢವಳನಾಥ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಲ್ಮೇಶ ನೇಗಿನಹಾಳ ಮತ್ತು ಕೆಎಲ್ಇ ಕಾಲೇಜ್ ಉಪನ್ಯಾಸಕ ಶಿವಲಿಂಗ ಸಿದ್ನಾಳ ಮಾತನಾಡಿ, ಆಂಗ್ಲಮಾಧ್ಯಮ ಶಾಲೆಯ ಕನ್ನಡ ಕಳಕಳಿ ಮತ್ತು ಮಕ್ಕಳನ್ನು ಜಾನಪದ ಜಾಣರನ್ನಾಗಿ, ಕನ್ನಡ ಸಂಸ್ಕೃತಿಯ ಸಂಸ್ಕಾರವಂತರನ್ನಾಗಿ ಪಳಗಿಸಿದ ರೀತಿ ಶ್ಲಾಘನೀಯ ಎಂದರು. ಉಭಯ ಅತಿಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಪಟ್ಟಣಶೆಟ್ಟಿ, ಶಾಲೆಯ ಆಡಳಿತಾಧಿಕಾರಿ ಅಭಿಷೇಕ ಚೌಗಲಾ, ಮುಖ್ಯ ಶಿಕ್ಷಕಿ ಅನುಶ್ರೀ ಚೌಗಲಾ, ಅಮರೇಸ ಕಾಂಬಳೆ, ಪೂಜಾ ಬಿರಡಿ, ಆಶಾ ತಿಮ್ಮನಗೋಳ, ಗೀತಾ ಅಂಬಿಗೇರ, ಸವಿತಾ ಚನ್ನಾಳ, ಶ್ರುತಿ ಚನ್ನಾಳ ಇದ್ದರು.