ಜಮಖಂಡಿಯವರಿಂದ ಕಾನಿಪ ಘನತೆ ಹೆಚ್ಚಿದೆ : ಮಹೇಶ ಮನ್ನಯ್ಯನವರಮಠ
ಮಹಾಲಿಂಗಪುರ,07 : ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡು ಉತ್ತಮ ವರದಿಗಳ ಮೂಲಕ ಗಮನ ಸೆಳೆದು ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿ ಪಡೆದ ಪತ್ರಕರ್ತ ಇಲಾಹಿ ಜಮಖಂಡಿಯವರ ಸಾಧನೆಯಿಂದಾಗಿ ನಮ್ಮ ಮಹಾಲಿಂಗಪುರ ಕಾನಿಪ ಘಟಕದ ಘನತೆ ಹೆಚ್ಚಿದೆ ಎಂದು ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ ಹೇಳಿದರು.
2024 ರ ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿ ಪುರಸ್ಕೃತ ಸಮೀಪದ ಚಿಮ್ಮಡ ಗ್ರಾಮದ ನಿವಾಸಿ, ಮಹಾಲಿಂಗಪುರ ಕಾನಿಪ ಸಂಘದ ಉಪಾಧ್ಯಕ್ಷ ಇಲಾಹಿ ಜಮಖಂಡಿಯವರನ್ನು ಕಾನಿಪ ಸಂಘದ ಪರ ಸಂಘದ ಕಛೇರಿಯಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಹಿರಿಯ ಪತ್ರಕರ್ತರಾದ ಇಲಾಹಿಯವರ ಸರಳ, ಸಜ್ಜನಿಕೆ, ಸಹೃದಯತೆ ಇಂದಿನ ಪತ್ರಕರ್ತರಿಗೆ ಮಾದರಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಇಲಾಹಿ ಜಮಖಂಡಿ, ಈ ಪ್ರಶಸ್ತಿ ಮತ್ತು ಸನ್ಮಾನಗಳು ನನ್ನ ಜವಾಬ್ದಾರಿ ಹೆಚ್ಚಿಸಿವೆ ಎಂದರು.
ಪತ್ರಕರ್ತ ಚಂದ್ರಶೇಖರ ಮೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಪತ್ರಕರ್ತರಾದ ಜಯರಾಮ ಶೆಟ್ಟಿ, ನಾರನಗೌಡ ಉತ್ತಂಗಿ, ಲಕ್ಷ್ಮಣ ಕಿಶೋರಿ ಮಾತನಾಡಿದರು. ಜಿಲ್ಲಾ ಕಾನಿಪ ಕಾರ್ಯಕಾರಿಣಿ ಸದಸ್ಯ ಎಸ್.ಎಸ್.ಈಶ್ವರ್ಪಗೋಳ, ಪತ್ರಕರ್ತರಾದ ಎಂ.ಐ.ಡಾಂಗೆ, ಮೀರಾ ತಟಗಾರ, ಹನೀಫ್ ಚಿಕ್ಕೋಡಿ ಇತರರಿದ್ದರು, ಕಾನಿಪ ಕಾರ್ಯದರ್ಶಿ ಹನಮಂತ ನಾವಿ ಸ್ವಾಗತಿಸಿ, ವಂದಿಸಿದರು.