ಕನದಕದಾಸರ ಕೀರ್ತನೆ ಕೃತಿಗಳು ನವ ಸಾಹಿತ್ಯಕ್ಕೆ ಸ್ಪೂರ್ತಿ: ಡಾ. ಅಜಿತ ಪ್ರಸಾದ
- ಧಾರವಾಡ: ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಸಮಾನತೆ, ಆಧ್ಯಾತ್ಮಿಕತೆಯ ಬಗ್ಗೆ ಬೆಳಕು ಚೆಲ್ಲಿದವರು ಕನಕದಾಸರು, ಆಗಿನ ಕಾಲದಲ್ಲಿಯೇ ಜಾತಿ ತಾರತಮ್ಯದ ವಿರುದ್ಧ ಧನಿ ಎತ್ತಿದವರು. ಕನಕದಾಸರ ತತ್ವೋಪದೇಶಗಳು ಸರ್ವಜನಾಂಗದ ಸಾರ್ಥಕ ಬದುಕಿಗೆ ದಾರೀದೀಪವಾಗಿವೆ. ಕನಕದಾಸರು ತಮ್ಮ ವಿಶಿಷ್ಟ್ಯ ಶೈಲಿಕ ಕಾವ್ಯ ರಚನೆ ಹಾಗೂ ಸಾಹಿತ್ಯದ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದವರು ಎಂದು ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಹಾಗೂ ಜೆಎಸ್‌ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜುಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಕನಕದಾಸರ ಜಯಂತಿ ಪ್ರಯಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜೆ.ಎಸ್.ಎಸ್ ನ ಕಾರ್ಯದರ್ಶಿಗಳು ಹಾಗೂ ಜೆಎಸ್‌ಎಸ್ ಎಸ್‌ಎಮ್‌ಐ ಯುಜಿಪಿಜಿಯ ಪ್ರಾಚಾರ್ಯ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.
ಕನಸಕದಾಸರ ಜೀವನ ನಮ್ಮೇಲ್ಲರಿಗೂ ಆದರ್ಶನೀಯವಾದದ್ದು. 16ನೇ ಶತಮಾನದಲ್ಲಿ ಜೀವಿಸಿದ ಇವರು, ತಮ್ಮ ಕುಟುಂಬ ಹಾಗೂ ಯುದ್ಧದಲ್ಲಿ ಸಂಭವಿಸಿದ ಕಷ್ಟ-ನಷ್ಟಗಳಿಗೆ ಬೆಸತ್ತು, ಧನ-ಕನಕಗಳ ತೊರೆದು ಸಾರ್ಥಕ ಜೀವನ ಹಾಗೂ ಮೋಕ್ಷ ಜೀವನಕ್ಕಾಗಿ ಎಲ್ಲವನ್ನು ತ್ಯಜಿಸಿ ಲೋಕದ ಉದ್ದಾರಕ್ಕಾಗಿ ಸಮಾಜದಲ್ಲಿರುವ ಕೊಂಕುಗಳನ್ನು ತಿದ್ದುವಂತಹ ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳನ್ನು ರಚಿಸಿ ಜನರು ಉತ್ತಮ ವಿಚಾರಗಳನ್ನು ಕಂಡುಕೊಳ್ಳುವ ಕೆಲಸ ಮಾಡಿದರು. ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕನಕದಾಸರೂ ಹಾಗೂ ಪುರಂದರದಾಸರೇ ಮೂಲ ಕಾರಣಿಭೂತರು. ಅಲೇದಾಡುವ ದಂಡನಾಯಕರೆಂದು ಖ್ಯಾತರಾದ ಇವರು ತಿರುಪತಿ, ಹಂಪಿ, ಉಡುಪಿ ಇತ್ಯಾದಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಕೀರ್ತನೆಗಳ ಹಾಡುವ ಮೂಲಕ ಸಮಾಜದ ಒಳಿತನ್ನು ಸಾರಿದವರು. ದಾಸ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರವಾಗಿದ್ದು, ಇವರು ರಚಿಸಿದ ಮೋಹನತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ ಕೃತಿಗಳು ಆಧುನಿಕ ಕವಿಗಳು, ಸಾಹಿತಿಗಳ ಸಾಹಿತ್ಯ ಸಾಧನೆಗೆ ಸ್ಪೂರ್ತಿ ನೀಡುವಂತಿವೆ. ಅಂದು ಜಾತಿ ತಾರತಮ್ಯಗಳ ಸಂಘರ್ಷವನ್ನು ದೂರಮಾಡಲು ರಚಿಸಿದ ಅವರ ಕೀರ್ತನೆಗಳು ಇಂದಿಗೂ ಜನರಲ್ಲಿ ಐಕ್ಯತಾ ಮನೋಭಾವವನ್ನು ಸೃಷ್ಟಿಸುವಂತಿವೆ. ನಮ್ಮ ಸುತ್ತಲಿನ ಸಮಾಜವನ್ನು ಹೇಗೆ ಉತ್ತಮವಾಗಿ ಇರಿಸಬಹುದು ಎಂಬುದನ್ನು ನಾವು ಕನಕದಾಸರ ಚರಿತ್ರೆಯಿಂದ ಅರಿಯಬಹುದು ಎಂದು ಹೇಳಿದರು. ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.