ಕಂಪ್ಲಿ: ಡಯೇರಿಯಾ ನಿಯಂತ್ರಣ ಅಭಿಯಾನ
ಬಳ್ಳಾರಿ,12 ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಡಯೇರಿಯಾ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವ ಅಭಿಯಾನವನ್ನು ಜು.01 ರಿಂದ ಆಗಸ್ಟ್ 31ರ ವರೆಗೆ ಎರಡು ತಿಂಗಳ ಕಾಲ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ತಿಳಿಸಿದ್ದಾರೆ.
ಅಶುಚಿತ್ವ, ಜನದಟ್ಟಣೆ, ಪ್ರಾಣಿಗಳೊಂದಿಗೆ ಒಡನಾಟ, ಕಲುಷಿತ ನೀರು, ಕೊಳಕು ಕೈ, ಮತ್ತು ಬ್ಯಾಕ್ಟೀರಿಯಾಗಳಿಂದ ಡಯೇರಿಯಾ ರೋಗವು ಹರಡಲಿದ್ದು, ಕಿಬ್ಬೊಟ್ಟೆಯ ಹೊಟ್ಟೆನೋವು, ಸೆಳೆತ, ವಾಕರಿಕೆ, ಜ್ವರ, ಭೇದಿ ಮುಂತಾದ ಲಕ್ಷಣಗಳು ಕಂಡುಬರುತ್ತದೆ. ಹಾಗಾಗಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಮನೆಯ ಸುತ್ತಮುತ್ತ ಶುಚಿತ್ವ ಕಾಯ್ದುಕೊಂಡು, ಕಸವನ್ನು ವಿಂಗಡಿಸಿ ಪುರಸಭೆ ವಾಹನಗಳಿಗೆ ನೀಡಬೇಕು ಹಾಗೂ ಕುದಿಸಿ ಆರಿಸಿದ ನೀರನ್ನು ಕುಡಿದು ಇನ್ನಿತರೆ ಮುಂಜಾಗ್ರತಾ ಆರೋಗ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.