ಸಿದ್ದಾರೂಢರು ಕಲಿಯುಗದ ಕಾಮಧೇನು-ಕಲ್ಪವೃಕ್ಷ : ಬೀದರಶ್ರೀ
ಮಹಾಲಿಂಗಪುರ : ಜಗದ್ಗುರು ಸಿದ್ದಾರೂಢರು ಕಲಿಯುಗದ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಅನನ್ಯ ಭಕ್ತಿಯಿಂದ ಅವರನ್ನು ಆರಾಧಿಸುವ ಭಕ್ತರನ್ನು ಉದ್ಧರಿಸುವ ಸಾಕ್ಷಾತ್ ಶಿವನ ಅವತಾರವೇ ಸಿದ್ದಾರೂಢರು ಎಂದು ಬೀದರ ಚಿದಂಬರಾಶ್ರಮದ ಶಿವಕುಮಾರ ಮಹಾಸ್ವಾಮಿಜಿ ಹೇಳಿದರು.
ಶನಿವಾರ ಪಟ್ಟಣದ ಸಿದ್ದಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಸಿದ್ದು ಧಡೂತಿ ಹಮ್ಮಿಕೊಂಡಿದ್ದ ಮನೆ ಮನೆಯಲ್ಲಿ ಸಿದ್ದಾರೂಢರ ಚರಿತ್ರೆ 100ನೇ ವಾರದ ಸತ್ಸಂಗ, ಗುರುದೇವೋಭವ ಹಾಗೂ ಸಿದ್ದಾರೂಢರ ಚರಿತ್ರೆಯ ಶತಮಾನೋತ್ಸವ ವರ್ಷಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.
ಚರಿತ್ರೆ ರೂಪದಲ್ಲಿ ಸಿದ್ದಾರೂಢರು ಇಂದಿಗೂ ಜೀವಂತವಾಗಿದ್ದು ಭಕ್ತರು ಸಂಕಷ್ಟಗಳ ಪರಿಹಾರಕ್ಕಾಗಿ ಸಂಕಲ್ಪ ಮಾಡಿ ನಿತ್ಯ ಸಿದ್ದಾರೂಢರ ಚರಿತ್ರೆ ಪಠಣ ಮಾಡಬೇಕು ಎಂದರು. ಸಿದ್ದಾರೂಢರು ಬದುಕಿದ್ದ ಕಾಲದಲ್ಲಿ 31 ದೇಶಗಳ ರಾಜರು ಸಿದ್ದಾರೂಢರ ಭಕ್ತರಾಗಿದ್ದರು. 14 ಭಾಷೆ ಬಲ್ಲವರಾಗಿದ್ದ ಸಿದ್ದಾರೂಢರು ದೇಶದ ತುಂಬಾ ಸಂಚರಿಸಿ ಓಂ ನಮಃ ಶಿವಾಯ ಮಹಾಮಂತ್ರದ ಮೂಲಕ ಭಕ್ತರನ್ನು ಉದ್ದರಿಸಿದ ಕಲಿಯುಗದ ಜಾತ್ಯಾತೀತ ಜಗದ್ಗುರುಗಳಾಗಿದ್ದಾರೆ ಎಂದರು.
ಸಹಜಾನಂದ ಸ್ವಾಮಿಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಟಣದ ಸಿದ್ದಾರೂಢ ಸದ್ಭಕ್ತರ ಪ್ರತಿಶನಿವಾರದ ಮನೆ ಮನೆಯಲ್ಲಿ ಸಿದ್ದಾರೂಢರ ಚರಿತ್ರೆ ಸತ್ಸಂಗ ಕಾರ್ಯಕ್ರಮ 100 ವಾರ ಪೂರೈಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಮರೆಗುದ್ದಿಯ ನಿರೂಪಾಧೀಶ್ವರ ಸ್ವಾಮಿಜಿ, ಅಕ್ಕಲಕೋಟದ ಚಿಕ್ಕರೇವಣಸಿದ್ಧ ಸ್ವಾಮಿಜಿ, ಕಲಬುರಗಿ ಮಾತೋಶ್ರೀ ಲಕ್ಷ್ಮೀತಾಯಿ, ಗದಗದ ಮಾತೋಶ್ರೀ ಮುಕ್ತಾದೇವಿ ಅವರು ಮಾತನಾಡಿದರು.
ರನ್ನಬೆಳಗಲಿಯ ಸದಾಶಿವ ಗುರೂಜಿ, ಸಿದ್ಧರಾಮ ಶಿವಯೋಗಿ, ಕಂಕಣವಾಡಿ ಮಾರುತಿ ಶರಣರು ಅತಿಥಿಗಳಾಗಿದ್ದರು. ಸಿದ್ದು ಧಡೂತಿ ಕುಟುಂಬದವರು ಸರ್ವಪೂಜ್ಯರನ್ನು ಪಾದಪೂಜೆಯೊಂದಿಗೆ ಸನ್ಮಾನಿಸಿ ಗೌರವಿಸಿದರು. ಸುಜಾತಾ ಕೋಲಾರ ಸಿದ್ದಾರೂಢರ 42 ನೇ ಅಧ್ಯಾಯವನ್ನು ಪಠಣ ಮಾಡಿದರು. ನಂತರ ಮಹಾಪ್ರಸಾದ ಜರುಗಿತು.
ಮಹಾದೇವಪ್ಪ ಧಡೂತಿ, ಸುರೇಶ ಕೋಲಾರ, ಶೋಭಾ ಕುಡರ್ಿಕೇರಿ, ಮಹಾದೇವಿ ದಬಾಡಿ, ಕಸ್ತೂರಿ ಕೋಲಾರ, ಸುಭಾಸ್ ಮುಳ್ಳೂರ, ಹಣಮಂತಗೌಡ ಪಾಟೀಲ್, ಸಿದ್ದಾರೂಢ ಟ್ರಸ್ಟ್ ಕಮಿಟಿಯ ಡಾ. ಬಿ.ಡಿ.ಸೋರಗಾಂವಿ, ಅಲ್ಲಪ್ಪ ಚಮಕೇರಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚಂದ್ರಶೇಖರ ಮೋರೆ, ಗೊಲೇಶ ಅಮ್ಮಣಗಿ, ಮಲ್ಲಪ್ಪ ಕಟಗಿ ಸೇರಿದಂತೆ ಹಲವರು ಇದ್ದರು. ಶಿಕ್ಷಕ ಎಸ್.ಕೆ.ಗಿಂಡೆ ಸ್ವಾಗತಿಸಿ-ನಿರೂಪಿಸಿದರು.