ಕೆಜಿಬಿ ರೇವಾ ವಾರ್ಷಿಕ ಮಹಾಸಭೆ ಯಶಸ್ವಿ
ಬಳ್ಳಾರಿ 03: ಕರ್ನಾಟಕ ಗ್ರಾಮೀಣ ಬ್ಯಾಂಕ್ ರಿಟೈರ್ಡ್ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಷನ್ನ ಸರ್ವ ಸದಸ್ಯರ ವಾರ್ಷಿಕ ಸಭೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಆರ್.ವಿ. ಗೋವಿಂದರಾಜ್ ಮತ್ತು ಕಾರ್ಯಧ್ಯಕ್ಷ ಶಿವಕುಮಾರ್ ಕೌತಾಳ್ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ 300ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜಯಂತ್ಯೋತ್ಸವದ ಅಂಗವಾಗಿ ಮಹಾತ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಸಂಘದ ಪ್ರಧಾನ ಕಾರ್ಯದರ್ಶಿ ಗಂಗಪ್ಪ ಪತ್ತಾರವರು ಮಂಡಿಸಿದ ಸಂಘದ ವಾರ್ಷಿಕ ವರದಿ ಮತ್ತು ವೇಣುಗೋಪಾಲ ಶೆಟ್ಟಿಯವರು ಮಂಡಿಸಿದ ಆಡಿಟೆಡ್ ವರದಿಗಳನ್ನು ಸಭೆ ಸರ್ವನುಮತದಿಂದ ಅನುಮೋದಿಸಿತು. ಎನ್ಎಫ್ಆರ್ಆರ್ಆರ್ಬಿಎಸ್ನ ಪ್ರಧಾನ ಕಾರ್ಯದರ್ಶಿಗಳಾದ ಗಣಪತಿ ಹೆಗಡೆ ರಾಷ್ಟ್ರೀಯ ಗ್ರಾಮೀಣ ಬ್ಯಾಂಕ್ ಸ್ಥಾಪನೆಗೆ, ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ 30000ಕ್ಕೂ ಹೆಚ್ಚಿನ ಉದ್ಯೋಗಗಳ ಭರ್ತಿಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಬರೋಡ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕು ಸುಮಾರು 268 ಶಾಖೆಗಳನ್ನು ಮುಚ್ಚುತ್ತಿರುದನ್ನು ಖಂಡಿಸಿದರು.
ಅಖಿಲ ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ.ಕೆ.ಬನ್ನಿಗೋಳ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಮದಕುಂಟಿ ಮತ್ತು ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘದ ಕೋಶಾಧಿಕಾರಿ ಶ್ರೀನಿವಾಸ ಮೂರ್ತಿಯವರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು.